ಅನಾರೋಗ್ಯ ಪೀಡಿತ ಬಾಲಕಿಯ ಮನೆಗೆ ತೆರಳಿ ಆಧಾರ್‌ ಅಪ್‌ಡೇಟ್‌ : ಕಾರ್ಕಳ ಪ್ರಧಾನ ಅಂಚೆ ಕಚೇರಿ ಸಿಬ್ಬಂದಿ ಕಾರ್ಯಕ್ಕೆ ಸಂಸದ ಕೋಟ ಮೆಚ್ಚುಗೆ

ಕಾರ್ಕಳ : ತೀವ್ರವಾದ ಅನಾರೋಗ್ಯದಿಂದ ಬಳಲುತ್ತಿರುವ ಬಾಲಕಿಯ ಮನೆಗೆ ಹೋಗಿ ಆಧಾರ್‌ ಅಪ್‌ಡೇಟ್‌ ಮಾಡಿಕೊಟ್ಟು ಕಾರ್ಕಳ ಅಂಚೆ ಇಲಾಖೆ ಸಿಬ್ಬಂದಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಮರ್ಣೆ ಗ್ರಾಮದ ಎಣ್ಣೆಹೊಳೆಯ ಡೊಂಬರಪಲ್ಕೆ ನಿವಾಸಿ ದಿನೇಶ್ ಮತ್ತು ಉಷಾ ದಂಪತಿಯ 10 ವರ್ಷದ ಪುತ್ರಿ ತೃಷಾ ಬ್ರೈನ್ ಟ್ಯೂಮರ್ ಕಾಯಿಲೆಯಿಂದ ಬಳಲುತ್ತಿದ್ದಾರೆ. ತಾಯಿಯೂ ತೀವ್ರವಾದ ಕಾಯಿಲೆಯಿಂದ ಬಳಲುತ್ತಿದ್ದು, ತೀರಾ ಬಡ ಕುಟುಂಬದವರಾದ ಇವರ ಆಧಾರ್ ಬಯೋಮೆಟ್ರಿಕ್ ಅಪ್ಡೇಟ್ ಮತ್ತು ವಿಳಾಸ ತಿದ್ದುಪಡಿ ಮಾಡಬೇಕಾಗಿತ್ತು.

ಚಿಕಿತ್ಸೆಗೆ ಅಗತ್ಯವಿದ್ದ ಕೆಲವು ಸೌಲಭ್ಯಗಳನ್ನು ಪಡೆದುಕೊಳ್ಳಲು ಈ ಕುಟುಂಬಕ್ಕೆ ಆಧಾರ್‌ ಅನಿವಾರ್ಯವಾಗಿತ್ತು. ಆದರೆ ಆಧಾರ್‌ ಅಪ್‌ಡೇಟ್‌ಗಾಗಿ ಅಂಚೆ ಕಚೇರಿಗೆ ಮಗಳನ್ನು ಕರೆದುಕೊಂಡು ಬರುವ ಸ್ಥಿತಿಯಲ್ಲಿ ದಿನೇಶ್‌ ಅವರು ಇರಲಿಲ್ಲ. ಈ ವಿಚಾರವನ್ನು ಕಾರ್ಕಳ ಪ್ರಧಾನ ಅಂಚೆ ಕಚೇರಿಗೆ ತಿಳಿಸಿ ಮನೆಗೆ ಹೋಗಿ ಆಧಾರ್‌ ಅಪ್‌ಡೇಟ್‌ ಮಾಡಿಸಿಕೊಡಲು ಮನವಿ ಮಾಡಿದ್ದರು.

ಇವರ ಮನವಿಗೆ ಸ್ಪಂದಿಸಿ ಪುತ್ತೂರು ಅಂಚೆ ವಿಭಾಗದ ಮಾರ್ಕೆಟಿಂಗ್ ತಂಡ ಕಂಪ್ಯೂಟರ್‌ ಸಿಸ್ಟಮ್‌ ಮತ್ತಿತರ ಪರಿಕರಗಳ ಸಮೇತ ದುರ್ಗಮ ಪ್ರದೇಶದಲ್ಲಿದ್ದ ದಿನೇಶ್‌ ಅವರ ಮನೆಗೆ ಹೋಗಿ ಆಧಾರ್ ಬಯೋಮೆಟ್ರಿಕ್ ಅಪ್‌ಡೇಟ್ ಮತ್ತು ವಿಳಾಸ ತಿದ್ದುಪಡಿಯನ್ನು ಮಾಡಿಕೊಟ್ಟಿದೆ. ಈ ಕುಟುಂಬ ಅಂಚೆ ಇಲಾಖೆಯ ಕ್ಷಿಪ್ರ ಸ್ಪಂದನೆಗೆ ಧನ್ಯವಾದ ಹೇಳಿದೆ.

ಸಂಸದ ಕೋಟ ಮೆಚ್ಚುಗೆ :

ಕಾರ್ಕಳ ಪ್ರಧಾನ ಅಂಚೆ ಕಚೇರಿಯ ಸಿಬ್ಬಂದಿಯ ಕಾಳಜಿಯುತ ಸೇವೆಗೆ ಮೆಚ್ಚುಗೆ ಸೂಚಿಸಿ ಸಂಸದ ಕೋಟ ಶ್ರೀನಿವಾಸ ಪೂಜಾರಿಯವರು ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಿದ್ದಾರೆ. ಸರಕಾರಿ ಕೆಲಸ ಜನರ ಸೇವೆ ನೀಡಲು ಸಿಕ್ಕಿದ ಅವಕಾಶ ಎಂದು ಅರಿತು ಕಾರ್ಕಳ ಅಂಚೆ ಸಿಬ್ಬಂದಿ ಕೆಲಸ ಮಾಡಿಕೊಟ್ಟಿದ್ದಾರೆ. ಇದಕ್ಕೆ ಭಗವಂತನ ಅನುಗ್ರಹ ಮತ್ತು ಜನರ ಆಶೀರ್ವಾದ ಇರುತ್ತದೆ. ಸ್ವತಹ ಆಸಕ್ತಿ ವಹಿಸಿ ಬಡ ಕುಟಂಬದ ಆಧಾರ್‌ ಅಪ್‌ಡೇಟ್‌ ಮಾಡಿಕೊಟ್ಟ ಅಂಚೆ ಸಿಬ್ಬಂದಿಗೆ ಅಭಿನಂದನೆಗಳು ಎಂದು ಎಂದು ಬರೆದಿದ್ದಾರೆ.

Related posts

‘ನಮ್ಮ ಭೂಮಿ ನಮ್ಮ ಹಕ್ಕು’ಅಭಿಯಾನ – ಉಡುಪಿ ಜಿಲ್ಲಾ ಬಿಜೆಪಿಯಿಂದ ಪ್ರತಿಭಟನೆ

ಮನೆಯಿಂದ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿದ್ದ ಹೋಂ ನರ್ಸ್ ಬಂಧನ

ನವೆಂಬರ್ 29ರಿಂದ ಎಂಜಿಎಂ ಕಾಲೇಜಿನ ಅಮೃತ ಮಹೋತ್ಸವ ಸಮಾರಂಭ