ಶಿರಾಡಿ ಘಾಟ್‌ ಬೈಪಾಸ್ ಸಮಸ್ಯೆ ತುರ್ತಾಗಿ ಬಗೆಹರಿಸಲು ಕೇಂದ್ರ ಸಚಿವ ಗಡ್ಕರಿಗೆ ಸಂಸದ ಚೌಟ ಮನವಿ

ಮಂಗಳೂರು : ಶಿರಾಡಿ ಘಾಟಿ ಬೈಪಾಸ್‌ ಯೋಜನೆ ಅನುಷ್ಠಾನ ಸೇರಿ ಬೆಂಗಳೂರು-ಮಂಗಳೂರು ಹೆದ್ದಾರಿ ಸಂಪರ್ಕ ಸುಧಾರಣೆ ಹಾಗೂ ಪ್ರಗತಿಯಲ್ಲಿರುವ ಕಾಮಗಾರಿಗಳ ಕುರಿತಂತೆ ಪ್ರಕ್ರಿಯೆಗೆ ವೇಗ ನೀಡುವಂತೆ ಮನವಿ ಮಾಡಲು ಹೊಸದಿಲ್ಲಿಯಲ್ಲಿ ಕೇಂದ್ರ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್‌ ಗಡ್ಕರಿಯವರ ಭೇಟಿಯಾಗಿ ಸಂಸದ ಕ್ಯಾ. ಬ್ರಿಜೇಶ್‌ ಚೌಟ ಮನವಿ ಸಲ್ಲಿಸಿದರು.

ಮಂಗಳೂರು-ಬೆಂಗಳೂರು ಹೆದ್ದಾರಿ ಯೋಜನೆಗಳ ಅನುಷ್ಠಾನದಲ್ಲಿ ರಾಜ್ಯ ಸರಕಾರದ ಹಂತದಲ್ಲಿ ಇಲಾಖಾಧಿಕಾರಿಗಳಿಂದ ಆಗುತ್ತಿರುವ ವಿಳಂಬಕ್ಕೆ ತುರ್ತು ಕ್ರಮ ಕೈಗೊಳ್ಳಬೇಕು ಎಂದರು. ಶಿರಾಡಿ ಘಾಟಿ ಮಾರ್ಗವನ್ನು ಮೇಲ್ದರ್ಜೆಗೇರಿಸುವಲ್ಲಿ ಸೂಕ್ತ ಪಥಗಳ ನಿಗದಿ ಹಾಗೂ ಯೋಜನೆಗೆ ಅರಣ್ಯ ಇಲಾಖೆಯ ಮಂಜೂರಾತಿ ಪಡೆಯುವ ಪ್ರಕ್ರಿಯೆ ಚುರುಕುಗೊಳಿಸಬೇಕು. ರಾಜ್ಯ ಅರಣ್ಯ ಇಲಾಖೆಯ ಅನುಮತಿ ನೀಡುವ ಪ್ರಕ್ರಿಯೆ ನಿಧಾನವಾಗಿದ್ದು, ಯೋಜನೆ ವಿಳಂಬವಾಗಿದೆ. ಈ ನಿಟ್ಟಿನಲ್ಲಿ ಮಧ್ಯಸ್ಥಿಕೆ ವಹಿಸಿ, ಬೇಗ ಪೂರ್ಣಗೊಳಿಸಬೇಕೆಂದು ಕ್ಯಾ.ಚೌಟ ಸಚಿವ ಗಡ್ಕರಿ ಅವರಿಗೆ ಮನವಿ ಮಾಡಿದ್ದಾರೆ.

ಈ ವೇಳೆ ಪ್ರತಿಕ್ರಿಯಿಸಿರುವ ಸಚಿವ ನಿತಿನ್‌ ಗಡ್ಕರಿ ಅವರು, ಶಿರಾಡಿ ಘಾಟಿ ಹೆದ್ದಾರಿ ಮೇಲ್ದರ್ಜೆಗೇರಿಸಲು ರಾಜ್ಯ ಸರಕಾರದಿಂದ ಅಗತ್ಯವಿರುವ ಎಲ್ಲ ರೀತಿಯ ಅನುಮತಿ ಹಾಗೂ ಪ್ರಕ್ರಿಯೆ ಪೂರ್ಣಗೊಂಡ ಕೂಡಲೇ ಮುಂದಿನ ಹಂತದ ಕ್ರಮ ಜರುಗಿಸುವುದಾಗಿ ಭರವಸೆ ನೀಡಿದ್ದಾರೆ. ಸಚಿವರ ಭೇಟಿ ಬಳಿಕ ಪ್ರತಿಕ್ರಿಯಿಸಿದ ಕ್ಯಾ. ಚೌಟ, ಮಂಗಳೂರು- ಬೆಂಗಳೂರು ನಡುವಿನ ಸಂಪರ್ಕ ಮತ್ತಷ್ಟು ಸುಗಮಗೊಳಿಸುವ ಯೋಜನೆಗೆ ಸಂಬಂಧಿಸಿದಂತೆ ಜರೂರಾಗಿ ಆಗಬೇಕಾದ ಕಾಮಗಾರಿ, ಶಿರಾಡಿ ಘಾಟಿ ಯೋಜನೆಗೆ ಆಡಳಿತಾತ್ಮಕ ಅನುಮತಿಯನ್ನು ಕೂಡಲೇ ನೀಡಬೇಕು. ಈ ಯೋಜನೆ ಪೂರ್ಣಗೊಂಡರೆ, ಪ್ರವಾಸೋದ್ಯಮ, ವ್ಯಾಪಾರ-ವಹಿವಾಟು, ಕೈಗಾರಿಕೆಗಳ ಅಭಿವೃದ್ಧಿಯ ಜತೆಗೆ ಔದ್ಯೋಗಿಕವಾಗಿ ಮತ್ತು ಆರ್ಥಿಕ ಬೆಳವಣಿಗೆಗೂ ಕರಾವಳಿ-ಮಲೆನಾಡು ಭಾಗಕ್ಕೆ ಹೆಚ್ಚಿನ ಅನುಕೂಲ ಎಂದು ತಿಳಿಸಿದ್ದಾರೆ.

Related posts

ಮಂಗಳೂರು ವಿವಿಯಿಂದ ಯಕ್ಷ ಮಂಗಳ ಪ್ರಶಸ್ತಿ ಪ್ರದಾನ

ಮೂಡಲಪಾಯ ಯಕ್ಷಗಾನದ ಅಭ್ಯುದಯವನ್ನು ಬೆಂಬಲಿಸಲು ಅಕಾಡೆಮಿ ಬದ್ಧವಾಗಿದೆ : ಡಾ. ತಲ್ಲೂರು

National Fame Award of India Books of Award – Sushanth Brahmavar