ಜತೆಯಾಗಿಯೇ ಪಿಯುಸಿ ಪರೀಕ್ಷೆ ಬರೆದು ಪಾಸಾದ ತಾಯಿ-ಮಗಳು

ಬಂಟ್ವಾಳ : ತಾಲೂಕಿನ ನರಿಕೊಂಬು ಗ್ರಾಮದ ತಾಯಿ- ಮಗಳು ಈ ಬಾರಿ ಜತೆಯಾಗಿಯೇ ದ್ವಿತೀಯ ಪಿಯುಸಿ ಪಾಸ್‌ ಆಗಿ ಅಚ್ಚರಿ ಮೂಡಿಸಿದ್ದಾರೆ. ಮಾಣಿಮಜಲು ನಿವಾಸಿಗಳಾದ ತಾಯಿ ರವಿಕಲಾ ಹಾಗೂ ಅವರ ಪುತ್ರಿ ತ್ರಿಶಾ ಈ ಸಾಧನೆ ಮಾಡಿದವರು.

ರವಿಕಲಾ ಅವರು ಕಲಾ ವಿಭಾಗದಲ್ಲಿ ಖಾಸಗಿಯಾಗಿ ಪರೀಕ್ಷೆ ಬರೆದು ಪಾಸಾಗಿದ್ದರೆ, ತ್ರಿಶಾ ಪುತ್ತೂರು ವಿವೇಕಾನಂದ ಕಾಲೇಜಿನ ವಾಣಿಜ್ಯ ವಿಭಾಗದಲ್ಲಿ 586 ಅಂಕಗಳನ್ನು ಪಡೆದಿದ್ದಾರೆ.

1998‌ರಲ್ಲಿ ಎಸೆಸೆಲ್ಸಿ ತೇರ್ಗಡೆಯಾಗಿದ್ದ ರವಿಕಲಾ, ಆರ್ಥಿಕ ಸಂಕಷ್ಟದಿಂದ ವಿದ್ಯಾಭ್ಯಾಸ ಮುಂದುವರಿಸಿರಲಿಲ್ಲ. ಹಲವು ವರ್ಷಗಳಿಂದ ನರಿಕೊಂಬಿನ ತಾರಿಪಡು ಅಂಗನವಾಡಿ ಕೇಂದ್ರದಲ್ಲಿ ಕಾರ್ಯಕರ್ತೆಯಾಗಿ ಕೆಲಸ ಮಾಡುತ್ತಿದ್ದಾರೆ. ಮುಂದೆ ಅಂಗನವಾಡಿ ಕೇಂದ್ರಗಳಲ್ಲಿ ಎಲ್‌ಕೆಜಿ-ಯುಕೆಜಿ ಆರಂಭವಾಗುತ್ತದೆ. ಹೀಗಾಗಿ ಕಾರ್ಯಕರ್ತೆಯರು ಪಿಯುಸಿ ಉತ್ತೀರ್ಣರಾಗಿರಬೇಕು ಎಂದು ಇಲಾಖೆಯ ಅಧಿಕಾರಿಯೊಬ್ಬರು ಹೇಳಿದನ್ನೇ ಛಲವಾಗಿ ಸ್ವೀಕರಿಸಿದ ರವಿಕಲಾ, ಪಿಯುಸಿ ಪರೀಕ್ಷೆ ಬರೆಯಲು ಮನಸ್ಸು ಮಾಡಿದರು. ಅದರಂತೆ ಮೂಡ ಸರಕಾರಿ ಕಾಲೇಜಿಗೆ ಬಂದು ಖಾಸಗಿಯಾಗಿ ಪರೀಕ್ಷೆ ಬರೆಯುವ ಕುರಿತು ಮಾಹಿತಿ ಕೇಳಿದ್ದರು. ಇದೀಗ ಎಸೆಸೆಲ್ಸಿ ಮುಗಿಸಿ ಬರೋಬ್ಬರಿ 27 ವರ್ಷಗಳ ಬಳಿಕ ಮೊದಲ ಪ್ರಯತ್ನದಲ್ಲೇ ಪಿಯುಸಿ ಉತ್ತೀರ್ಣರಾಗಿ ಸಾಧನೆ ಮಾಡಿದ್ದಾರೆ.

ಬದುಕಿನಲ್ಲಿ ಮುಂದೆ ಬರಲು ಈ ಪರೀಕ್ಷೆ ಬರೆದಿರುವೆ. ಪತಿ, ಮಕ್ಕಳು, ನಾದಿನಿ, ಇಲಾಖೆಯವರ ಸಹಕಾರದಿಂದ ಇದು ಸಾಧ್ಯವಾಗಿದೆ. ಬಹಳ ಸಂತೋಷವಾಗಿದೆ. ಕೆಲಸದ ಒತ್ತಡದ ನಡುವೆಯೂ ಅತ್ಮೀಯರಿಂದ ಪುಸ್ತಕ ಕೇಳಿ ಪಡೆದು ಓದಿದ್ದು ಸಾರ್ಥಕವಾಯಿತು ಎನ್ನುತ್ತಾರೆ ರವಿಕಲಾ.

“ಓದಿಗೆ ವಯಸ್ಸಿನ ಹಂಗಿಲ್ಲ ಎಂಬುದನ್ನು ಸಾಬೀತು ಪಡಿಸಿರುವ ನನ್ನ ಅಮ್ಮನೇ ನನಗೆ ಮಾದರಿ. ಅವರ ಕುರಿತು ಹೆಮ್ಮೆ ಇದೆ” ಎನ್ನುತ್ತಾಳೆ ತ್ರಿಶಾ.

Related posts

ರಂಗೋಲಿ ಕಲಾ ಸಾಧಕಿ, ಭಾರತಿ ಮರವಂತೆಗೆ ‘ಮಧುರಚೆನ್ನ ರಾಜ್ಯ ಪ್ರಶಸ್ತಿ’ ಪ್ರದಾನ

National Fame Award of India Books of Award – Sushanth Brahmavar

ಯಕ್ಷಗಾನ ಹಾಸ್ಯಗಾರ ಮುಖ್ಯಪ್ರಾಣ ಕಿನ್ನಿಗೋಳಿ ನಿಧನಕ್ಕೆ ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಸಂತಾಪ