ಬ್ರಹ್ಮಾವರ ಗಾಂಧಿ ಮೈದಾನಕ್ಕೆ ಅಧಿಕಾರಿಗಳೊಂದಿಗೆ ಭೇಟಿ ನೀಡಿದ ಶಾಸಕ ಯಶ್‌ಪಾಲ್ ಸುವರ್ಣ

ಉಡುಪಿ : ಬ್ರಹ್ಮಾವರ ಗಾಂಧಿ ಮೈದಾನದ ಅವ್ಯವಸ್ಥೆ ಹಾಗೂ ಅಸಮರ್ಪಕ ನಿರ್ವಹಣೆಯಿಂದ ಕ್ರೀಡಾ ಚಟುವಟಿಕೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆಗೆ ತೊಂದರೆ ಸಹಿತ ವಿವಿಧ ಸಮಸ್ಯೆಗಳ ಬಗ್ಗೆ ಸಾರ್ವಜನಿಕರ ದೂರಿನ ಮೇರೆಗೆ ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಯಶ್‌ಪಾಲ್ ಸುವರ್ಣ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು ಬ್ರಹ್ಮಾವರ ಭಾಗದ ಕೇಂದ್ರ ಭಾಗದಲ್ಲಿರುವ ಗಾಂಧಿ ಮೈದಾನವನ್ನು ಸಾರ್ವಜನಿಕರ ಹಾಗೂ ಕ್ರೀಡಾಪ್ರೇಮಿಗಳ ಬೇಡಿಕೆಯಂತೆ ವಿವಿಧ ಕ್ರೀಡಾ ಚಟುವಟಿಕೆಗಳಿಗೆ ಪೂರಕವಾಗಿರುವ ರೀತಿಯಲ್ಲಿ ಮಾಸ್ಟರ್ ಪ್ಲ್ಯಾನ್ ರೂಪಿಸಿ ಹಂತ ಹಂತವಾಗಿ ಮೈದಾನ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಲಾಗುವುದು ಎಂದರು.

ವಾಕಿಂಗ್ ಟ್ರ್ಯಾಕ್, ವಾಲಿಬಾಲ್ ಮೈದಾನ, ಕಬಡ್ಡಿ ಮೈದಾನ, ಶೌಚಾಲಯ, ಬಯಲು ರಂಗ ಮಂದಿರ, ಕ್ರಿಕೆಟ್ ಮೈದಾನ ಸಹಿತ ಕ್ರೀಡಾ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗೆ ಪೂರಕವಾಗಿರುವಂತೆ ಕೇಂದ್ರ ಹಾಗೂ ರಾಜ್ಯ ಸರಕಾರದ ಅನುದಾನ ಬಳಸಿ ಅಭಿವೃದ್ಧಿ ಮಾಡಲು ಯೋಜನೆ ರೂಪಿಸಲಾಗುವುದು ಎಂದರು.

ಈಗಾಗಲೇ ಗಾಂಧಿ ಮೈದಾನದಲ್ಲಿ ಈ ಹಿಂದೆ ನಡೆದಿರುವ ಕಾಮಗಾರಿಗಳ ಬಗ್ಗೆ ನಿರ್ಮಿತಿ ಕೇಂದ್ರದ ಇಂಜಿನಿಯರ್‌ರಿಂದ ಮಾಹಿತಿ ಪಡೆದ ಶಾಸಕರು, ಸ್ಥಳೀಯರ ಅಭಿಪ್ರಾಯದಂತೆ ಮಾಸ್ಟರ್ ಪ್ಲ್ಯಾನ್ ಮಾಡುವಂತೆ ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ಬಿಜೆಪಿ ಗ್ರಾಮಾಂತರ ಅಧ್ಯಕ್ಷರಾದ ಶ್ರೀ ರಾಜೀವ್ ಕುಲಾಲ್, ವಾರಂಬಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ನಿತ್ಯಾನಂದ, ಹಂದಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಶೋಭಾ, ಚಾಂತಾರ್ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಪ್ರೇಮಾ, ಸ್ಥಳೀಯ ಮುಖಂಡರಾದ ಶ್ರೀ ರಾಜೇಶ್ ಶೆಟ್ಟಿ ಬಿರ್ತಿ, ಶ್ರೀ ಬೈಕಾಡಿ ಸುಪ್ರಸಾದ್ ಶೆಟ್ಟಿ, ಶ್ರೀ ನಿಶಾನ್ ರೈ, ಶ್ರೀ ಸತ್ಯರಾಜ್, ಶ್ರೀ ಎಸ್. ನಾರಾಯಣ, ಅರ್ಜುನ್ ಪ್ರಭು, ಭರತ್ ಶೆಟ್ಟಿ, ದೇವಾನಂದ, ಸಚಿನ್ ಪೂಜಾರಿ, ದಿನೇಶ್, ಸಂತೋಷ್ ಜತ್ತನ್ ಹೇರೂರು, ವಸಂತ ಗಿಳಿಯಾರ್, ಚಂದ್ರ‌ಶೇಖರ್ ಶೆಟ್ಟಿ, ಕಂದಾಯ ಇಲಾಖೆಯ ಅಧಿಕಾರಿಗಳು, ಗ್ರಾಮ ಪಂಚಾಯತ್ ಸದಸ್ಯರು, ಪಂಚಾಯತ್ ಅಭಿವೃಧ್ದಿ ಅಧಿಕಾರಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.

Related posts

ಮೂಡಲಪಾಯ ಯಕ್ಷಗಾನದ ಅಭ್ಯುದಯವನ್ನು ಬೆಂಬಲಿಸಲು ಅಕಾಡೆಮಿ ಬದ್ಧವಾಗಿದೆ : ಡಾ. ತಲ್ಲೂರು

National Fame Award of India Books of Award – Sushanth Brahmavar

ಕರವೇ ಕಾಪು ತಾಲೂಕು ಘಟಕದ ನೂತನ ಪದಾಧಿಕಾರಿಗಳ ಆಯ್ಕೆ