ಉಡುಪಿ ಗ್ರಾಮೀಣ ಭಾಗದ ತೋಡು ನಿರ್ವಹಣೆ ಸಹಿತ ತುರ್ತು ಕಾಮಗಾರಿಗೆ ಅನುದಾನ ಒದಗಿಸುವಂತೆ ಉಸ್ತುವಾರಿ ಸಚಿವರಿಗೆ ಶಾಸಕ ಯಶ್‌ಪಾಲ್ ಸುವರ್ಣ ಮನವಿ

ಉಡುಪಿ : ಉಡುಪಿ ವಿಧಾನಸಭಾ ಕ್ಷೇತ್ರದ 19 ಗ್ರಾಮ ಪಂಚಾಯತ್‌ಗಳ ಕೃತಕ ನೆರೆ ತಡೆಗಟ್ಟುವ ನಿಟ್ಟಿನಲ್ಲಿ ತೋಡುಗಳ ನಿರ್ವಹಣೆ ಸಹಿತ ತುರ್ತು ಕಾಮಗಾರಿಗಳಿಗೆ ತಲಾ ರೂ. 10 ಲಕ್ಷ ಅನುದಾನ ನೀಡುವಂತೆ ಶಾಸಕ ಯಶ್‌ಪಾಲ್ ಸುವರ್ಣ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀಮತಿ ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದ ಶ್ರೀ ಪ್ರಿಯಾಂಕ್ ಖರ್ಗೆ‌ಯವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.

ಉಡುಪಿ ವಿಧಾನಸಭಾ ಕ್ಷೇತ್ರದ ಉಡುಪಿ ತಾಲೂಕಿನ 6 ಗ್ರಾಮ ಪಂಚಾಯತ್‌ಗಳ ಮತ್ತು ಬ್ರಹ್ಮಾವರ ತಾಲೂಕಿನ 13 ಗ್ರಾಮ ಪಂಚಾಯತ್‌ಗಳ (ಒಟ್ಟು 19 ಗ್ರಾಮ ಪಂಚಾಯತ್‌ಗಳು) ಜನವಸತಿ ಪ್ರದೇಶಗಳಲ್ಲಿ ಗ್ರಾಮ ಪಂಚಾಯತ್ ಸ್ಥಳೀಯಾಡಳಿತ ಅನುದಾನದ ಕೊರತೆಯಿಂದ ರಸ್ತೆ ಬದಿಯಲ್ಲಿನ ತೋಡುಗಳ ಹೂಳೆತ್ತದೆ, ಸಮರ್ಪಕ ನಿರ್ವಹಣೆಯಿಲ್ಲದೆ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಕೃತಕ ನೆರೆ ಉಂಟಾಗಿರುತ್ತದೆ.

ತೋಡು, ಚರಂಡಿಗಳಲ್ಲಿ ಹೂಳು ತುಂಬಿದ್ದು, ಇದರಿಂದ ಕೃಷಿ ಭೂಮಿಗಳಿಗೆ ನೀರು ನುಗ್ಗಿ ರೈತರಿಗೆ ಅನಾನುಕೂಲವಾಗಿರುತ್ತದೆ ಮತ್ತು ರಸ್ತೆಗಳ ಮೇಲೆ ನೀರು ಹರಿಯುತ್ತಿದ್ದು, ರಸ್ತೆಗಳು ಕಿತ್ತುಹೋಗಿ, ವಾಹನ ಸಂಚಾರಕ್ಕೆ ತಡೆ ಉಂಟಾಗಿರುತ್ತದೆ. ತಗ್ಗು ಪ್ರದೇಶಗಳ ಮನೆಗಳಿಗೆ ನೀರು ನುಗ್ಗಿ ಜನ ಸಾಮಾನ್ಯರ ಪರಿಸ್ಥಿತಿಯು ಅಸ್ತವ್ಯಸ್ತವಾಗಿರುತ್ತದೆ.

ಈ ಬಗ್ಗೆ ಗ್ರಾಮ ಪಂಚಾಯತ್‌ಗಳ ವ್ಯಾಪ್ತಿಯ ಸಾರ್ವಜನಿಕರಿಂದ ನಿರಂತರವಾಗಿ ಅಹವಾಲು ಸ್ವೀಕರಿಸುತ್ತಿದ್ದು, ಸದ್ರಿ ಗ್ರಾಮೀಣ ಭಾಗದ ರಸ್ತೆ ಬದಿಯಲ್ಲಿನ ಮೋರಿ, ಚರಂಡಿ ಮತ್ತು ತೋಡುಗಳ ಹೂಳೆತ್ತಿ, ಮಳೆ ನೀರನ್ನು ಸರಾಗವಾಗಿ ಹರಿಯುವಂತೆ ಕ್ರಮ ವಹಿಸುವ ಮತ್ತು ಸಾರ್ವಜನಿಕರ ಆಸ್ತಿ-ಪಾಸ್ತಿಗಳ ರಕ್ಷಣೆ ಮಾಡುವ ತುರ್ತು ಅಗತ್ಯವಿದೆ.

ಉಡುಪಿ ವಿಧಾನಸಭಾ ಕ್ಷೇತ್ರದ ಕೃತಕ ನೆರೆ ತಡೆಯುವ ಉದ್ದೇಶಕ್ಕೆ, ತುರ್ತು ಕಾಮಗಾರಿಗಳಿಗೆ 19 ಗ್ರಾಮ ಪಂಚಾಯತ್‌ಗಳಿಗೂ ತಲಾ ರೂ. 10 ಲಕ್ಷ ಅನುದಾನವನ್ನು ಶೀಘ್ರವಾಗಿ ಬಿಡುಗಡೆಗೊಳಿಸುವಂತೆ ಶಾಸಕ ಯಶ್‌ಪಾಲ್ ಸುವರ್ಣ ಸಚಿವರಿಗೆ ಮನವಿ ಮಾಡಿದ್ದಾರೆ.

Related posts

ರಂಗೋಲಿ ಕಲಾ ಸಾಧಕಿ, ಭಾರತಿ ಮರವಂತೆಗೆ ‘ಮಧುರಚೆನ್ನ ರಾಜ್ಯ ಪ್ರಶಸ್ತಿ’ ಪ್ರದಾನ

ಮೂಡಲಪಾಯ ಯಕ್ಷಗಾನದ ಅಭ್ಯುದಯವನ್ನು ಬೆಂಬಲಿಸಲು ಅಕಾಡೆಮಿ ಬದ್ಧವಾಗಿದೆ : ಡಾ. ತಲ್ಲೂರು

National Fame Award of India Books of Award – Sushanth Brahmavar