ತುಳುನಾಡಿನ ಸಾಂಪ್ರದಾಯಿಕ ಧಾರ್ಮಿಕ ಆಚರಣೆಗೆ ಅವಕಾಶ ನೀಡಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಶಾಸಕ ಯಶ್‌ಪಾಲ್ ಸುವರ್ಣ ಮನವಿ

ಉಡುಪಿ : ಉಡುಪಿ ಜಿಲ್ಲೆಯಲ್ಲಿ ತುಳುನಾಡಿನ ಧಾರ್ಮಿಕ ಆಚರಣೆ ಹಾಗೂ ಜನಜೀವನದ ಸಂಸ್ಕೃತಿಯ ಭಾಗವಾಗಿ ಗುರುತಿಸಿಕೊಂಡಿರುವ ಕಂಬಳ, ಕೋಳಿ ಪಡೆ, ಯಕ್ಷಗಾನ, ನೇಮೋತ್ಸವ, ನಾಗಮಂಡಲ ಮೊದಲಾದ ಕಾರ್ಯಕ್ರಮಗಳ ಆಯೋಜನೆ ಸಂದರ್ಭದಲ್ಲಿ ಜಿಲ್ಲಾಡಳಿತ ಕಠಿಣ ನಿಯಮಾವಳಿಗಳನ್ನು ರೂಪಿಸಿರುವುದರಿಂದ ಧಾರ್ಮಿಕ ಕಾರ್ಯಕ್ರಮಗಳ ಆಯೋಜನೆಗೆ ಅನಾನುಕೂಲವಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಈ ಬಗ್ಗೆ ನಿರ್ಧಾರವನ್ನು ಪುನರ್ ಪರಿಶೀಲಿಸಿ ಸಹಕರಿಸುವಂತೆ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳಿಗೆ ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಭೇಟಿಯಾಗಿ ಮನವಿ ಮಾಡಿದರು.

ದೈವಾರಾಧನೆಯ ಚೌಕಟ್ಟಿನಲ್ಲಿ ದೈವಗಳಿಗೆ ರಕ್ತಹಾರದ ಕಲ್ಪನೆಯಲ್ಲಿ ಹಲವು ದೈವಸ್ಥಾನ, ಮಂದಿರಗಳಲ್ಲಿ ಹಲವಾರು ದಶಕಗಳಿಂದ ಕೋಳಿಪಡೆ ಆಯೋಜಿಸುವ ಪದ್ಧತಿ ಇದೆ. ಹಾಗೂ ಜಿಲ್ಲೆಯಾದ್ಯಂತ ಯಕ್ಷಗಾನ, ನೇಮೋತ್ಸವ ಕಾರ್ಯಕ್ರಮಗಳು ಈ ಹಿಂದಿನಿಂದಲೂ ನಿರಂತರವಾಗಿ ನಡೆಯುತ್ತಿದ್ದು ಈ ಬಗ್ಗೆ ಜಿಲ್ಲಾಡಳಿತ ತುಳುನಾಡಿನ ಸಾಂಸ್ಕೃತಿಕ ಹಿನ್ನೆಲೆ, ಧಾರ್ಮಿಕ ನಂಬಿಕೆಗಳಿಗೆ ಪೂರಕವಾಗಿ ಅವಕಾಶ ನೀಡಿ ಸಹಕರಿಸಬೇಕು.

ತುಳುನಾಡಿನಲ್ಲಿ ಧಾರ್ಮಿಕ ಆಚರಣೆಗಳನ್ನು ಶ್ರದ್ದಾ ಭಕ್ತಿಯಿಂದ ನಡೆಸಿಕೊಂಡು ಬರುವ ಭಕ್ತರಿಗೆ ಭಾವನಾತ್ಮಕ ವಿಷಯವಾಗಿದ್ದು ಈ ಹಿಂದಿನಂತೆ ಆಚರಣೆಗೆ ಅವಕಾಶ ನೀಡಬೇಕು ಈ ಬಗ್ಗೆ ಸಾರ್ವಜನಿಕರ ಪರವಾಗಿ ಮುಖ್ಯಮಂತ್ರಿ ಹಾಗೂ ಗೃಹ ಸಚಿವರಿಗೂ ಮನವಿ ಮಾಡುವುದಾಗಿ ತಿಳಿಸಿದರು.

ಮುಂದಿನ ದಿನಗಳಲ್ಲಿ ಧಾರ್ಮಿಕ ಆಚರಣೆಗೆ ಜಿಲ್ಲಾಡಳಿತ ಸಹಕಾರ ನೀಡದಿದ್ದಲ್ಲಿ ಜಿಲ್ಲೆಯ ಸಮಸ್ತ ಭಕ್ತರು, ದೇವಸ್ಥಾನದ ಪ್ರಮುಖರು, ಸಾರ್ವಜನಿಕರು ಪಕ್ಷಾತೀತವಾಗಿ ತುಳುನಾಡಿನ ಆಚರಣೆಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಹೋರಾಟ ನಡೆಸುವ ಸನ್ನಿವೇಶ ನಿರ್ಮಾಣವಾಗಲಿದೆ ಎಂದರು.

ಈ ಸಂದರ್ಭದಲ್ಲಿ ಉಡುಪಿ ನಗರಸಭೆ ಅಧ್ಯಕ್ಷರಾದ ಶ್ರೀ ಪ್ರಭಾಕರ ಪೂಜಾರಿ, ಮುಖಂಡರಾದ ಮಟ್ಟಾರು ರತ್ನಾಕರ ಹೆಗ್ಡೆ, ಹರಿಮಕ್ಕಿ ರತ್ನಾಕರ ಶೆಟ್ಟಿ, ಶ್ರೀ ಸುರೇಶ್ ನಾಯಕ್ ಕುಯಿಲಾಡಿ, ಶ್ರೀ ದಿನಕರ ಬಾಬು, ಕಿರಣ್ ಕುಮಾರ್ ಬೈಲೂರು, ಪ್ರವೀಣ್ ಶೆಟ್ಟಿ ಕಪ್ಪೆಟ್ಟು, ಶ್ರೀ ದಿನೇಶ್ ಅಮೀನ್, ಶ್ರೀ ರಾಜೀವ್ ಕುಲಾಲ್, ಶ್ರೀ ಬಾಲಕೃಷ್ಣ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

Related posts

Worlds Fastest Bhagvad Gita Writer Completing 18 Chapters & 700 Verses in Just 5.30 Hours

ಮೀನುಗಾರರ ಪ್ರತಿಭಟನೆಯಲ್ಲಿ ಪ್ರಚೋದನಕಾರಿ ಭಾಷಣ-ಹಿಂದೂ ಯುವಸೇನೆ ಮುಖಂಡನ ವಿರುದ್ಧ ಸುಮೊಟೋ ಕೇಸ್

ಮಲ್ಪೆ ಮಹಿಳೆಯ ಬ್ಯಾಗ್‌ ಎಳೆದು ಪರಾರಿಯಾದ ಆರೋಪಿ ಪೊಲೀಸ್ ವಶಕ್ಕೆ