ಕಾಂಗ್ರೆಸ್ ಅಧಿವೇಶನಕ್ಕೆ ನೂರರ ಸಂಭ್ರಮ – ಐತಿಹಾಸಿಕ ಕಾರ್ಯಕ್ರಮದ ದ.ಕ. – ಉಡುಪಿ ಉಸ್ತುವಾರಿಗಳಾಗಿ ಶಾಸಕ ಮಂಜುನಾಥ ಭಂಡಾರಿ ನೇಮಕ

ಬೆಂಗಳೂರು : ಈ ವರ್ಷ ಕಾಂಗ್ರೆಸ್ ಅಧಿವೇಶನಕ್ಕೆ ನೂರರ ಸಂಭ್ರಮ. ಈ ಸಂದರ್ಭದಲ್ಲಿ ‘ಗಾಂಧಿ ಭಾರತ‘ ಹೆಸರಿನಲ್ಲಿ ಶತಮಾನೋತ್ಸವ ಆಚರಿಸುತ್ತಿದ್ದು ಇದರ ಸವಿನೆನಪಿಗಾಗಿ ಐತಿಹಾಸಿಕ ಕಾರ್ಯಕ್ರಮ ಮಾಡುವ ಉದ್ದೇಶದಿಂದ ಏಕಕಾಲಕ್ಕೆ 100 ವಿಧಾನಸಭಾ ಕ್ಷೇತ್ರಗಳಲ್ಲಿ 100 ಕಾಂಗ್ರೆಸ್ ನಿವೇಶನಗಳಲ್ಲಿ ಕಟ್ಟಡದ ಶಂಕುಸ್ಥಾಪನೆ ನೆರವೇರಿಸಲು ಉದ್ದೇಶಿಸಲಾಗಿದೆ. ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲು ವಿಧಾನ ಪರಿಷತ್ ಶಾಸಕ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ ಅವರನ್ನು ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಿಗೆ ಉಸ್ತುವಾರಿಯನ್ನಾಗಿ ನಿಯೋಜಿಸಲಾಗಿದೆ.

ಈ ಸಂಬಂಧ ಈಗಾಗಲೇ ಎಲ್ಲಾ ಸಚಿವರು, ಶಾಸಕರು, ಡಿಸಿಸಿ ಅಧ್ಯಕ್ಷರು, 2023ರ ವಿಧಾನಸಭೆ ಅಭ್ಯರ್ಥಿಗಳಿಗೆ ಪತ್ರ ಬರೆದು ಈ ಕಾರ್ಯಯೋಜನೆಯನ್ನು ತಪ್ಪದೇ ಅನುಷ್ಠಾನಗೊಳಿಸಲು ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ.

ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಹಾಗೂ ಹಾಗೂ ಲೋಕಸಭಾ ವಿರೋಧ ಪಕ್ಷದ ನಾಯಕರಾದ ರಾಹುಲ್ ಗಾಂಧಿಯವರು ಈ ಶಂಕುಸ್ಥಾಪನಾ ಕಾರ್ಯವನ್ನು ನೆರವೇರಿಸಲು ಒಪ್ಪಿಗೆ ನೀಡಿ, ಈ ಬಗ್ಗೆ ತಕ್ಷಣ ಕಾರ್ಯೋನ್ಮುಖರಾಗಿ ಈ ಶಂಕುಸ್ಥಾಪನಾ ಕಾರ್ಯಕ್ಕೆ ಸಂಬಂಧಿಸಿದ ವ್ಯವಸ್ಥೆಗಳನ್ನು ಮಾಡಿಕೊಂಡು ದಿನಾಂಕ ನಿಗದಿಪಡಿಸಿ ತಿಳಿಸಲು ಸೂಚನೆ ನೀಡಿರುತ್ತಾರೆ.

ಈ ಹಿನ್ನೆಲೆಯಲ್ಲಿ ಎಲ್ಲಾ ಸಚಿವರು ಹಾಗೂ ಶಾಸಕರುಗಳಿಗೆ ಅವರ ಕ್ಷೇತ್ರದ ವ್ಯಾಪ್ತಿಯ ಡಿಸಿಸಿ/ಬಿಸಿಸಿ ಅಧ್ಯಕ್ಷರ ಸಹಕಾರದೊಂದಿಗೆ ತಕ್ಷಣ ನಿವೇಶನಗಳನ್ನು ಗುರುತಿಸಿ ಕಾಂಗ್ರೆಸ್ ಭವನ ಟ್ರಸ್ಟ್ ಹೆಸರಿನಲ್ಲಿ ನೋಂದಾವಣೆ ಮಾಡಿಸಿಕೊಂಡು ಕಟ್ಟಡ ಶಂಕುಸ್ಥಾಪನೆಗೆ ಸಿದ್ಧಗೊಳಿಸಿಕೊಳ್ಳಬೇಕು. ಯಾವುದಾದರೂ ಕ್ಷೇತ್ರಗಳಲ್ಲಿ ಸ್ಥಳೀಯ ಪ್ರಾಧಿಕಾರದ ವತಿಯಿಂದ ನಿವೇಶನಗಳು ಸಿಗದಿದ್ದರೆ ಸಂಬಂಧಪಟ್ಟ ಸಚಿವರು ಹಾಗೂ ಶಾಸಕರು ಖಾಸಗಿ ನಿವೇಶನವನ್ನು ಹುಡುಕಿ (ಕನಿಷ್ಟ 60×40 ಅಳತೆ ಇರಬೇಕು) ಅವುಗಳನ್ನು ಬ್ಲಾಕ್ ಕಾಂಗ್ರೆಸ್ ವ್ಯಾಪ್ತಿಯ ಟ್ರಸ್ಟ್ ಹೆಸರಿನಲ್ಲಿ ನೋಂದಾವಣೆ ಮಾಡಿಸಿಕೊಂಡು ಶಂಕುಸ್ಥಾಪನೆಗೆ ಸಿದ್ಧಪಡಿಸಿಕೊಳ್ಳಲು ಕೋರಿದೆ.

Related posts

ಕೇರಳಕ್ಕೆ ವಿದ್ಯುತ್ ಸರಬರಾಜು ಕಾಮಗಾರಿಗೆ ವಿರೋಧ – ಬರಿಗೈಯಲ್ಲಿ ವಾಪಾಸಾದ ಅಧಿಕಾರಿಗಳು

ಹಿರಿಯ ಭಾಗವತ ಬಾಳೆಹದ್ದ ಕೃಷ್ಣ ಹೆಗಡೆ ನಿಧನ

ಉಡುಪಿ ಜಿಲ್ಲಾಧಿಕಾರಿ ಕಚೇರಿಯಲ್ಲಿ 125ನೇ ಗ್ರಂಥಾಲಯ! ಗಮನ ಸೆಳೆದ ಕಸಾಪ ಅಭಿಯಾನ