ರೈಲ್ವೆ ಹಳಿ ಮೇಲೆ ಕಲ್ಲು – ಗಂಭೀರವಾಗಿ ಪರಿಗಣಿಸಲು‌ ಶಾಸಕ ಕಾಮತ್ ಆಗ್ರಹ

ಮಂಗಳೂರು-ಕೇರಳ ನಡುವಿನ ರೈಲು ಮಾರ್ಗದ ಹಳಿಗಳ ಮೇಲೆ ತೊಕ್ಕೊಟ್ಟು ಬಳಿ ಆಗಂತುಕರು ಹಲವು ಕಲ್ಲುಗಳನ್ನಿಟ್ಟು ರೈಲು ಬೀಳಿಸಲು ನಡೆಸಿರುವ ಷಡ್ಯಂತ್ರವು ತೀವ್ರ ಕಳವಳಕಾರಿಯಾಗಿದ್ದು ರಾಜ್ಯ ಕಾಂಗ್ರೆಸ್ ಸರ್ಕಾರ ಹಾಗೂ ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಬೇಕೆಂದು ಶಾಸಕ ವೇದವ್ಯಾಸ ಕಾಮತ್‌ರವರು ಆಗ್ರಹಿಸಿದರು.

ಹಳಿಗಳ ಮೇಲಿಟ್ಟಿದ್ದ ಕಲ್ಲುಗಳ ಮೇಲೆಯೇ ರೈಲು ಸಾಗಿದ ರಭಸಕ್ಕೆ ದೊಡ್ಡ ಪ್ರಮಾಣದ ಕಂಪನವುಂಟಾಗಿ ಸ್ಥಳೀಯ ನಿವಾಸಿಗಳಿಗೆ ರೈಲು ಬಿದ್ದ ಅನುಭವವಾಗಿದೆ. ಕೂಡಲೇ ಪರಿಶೀಲನೆ ಮಾಡಿದಾಗ ಹಳಿಯ ಮೇಲೆ ಸುರಿದಿದ್ದ ಹಲವು ಕಲ್ಲುಗಳು ಪುಡಿ ಪುಡಿಯಾಗಿ ಬಿದ್ದಿದ್ದವು ಎಂದು ಸ್ಥಳೀಯರು ತಿಳಿಸಿದ್ದಾರೆ. ಒಂದಷ್ಟು ತಿಂಗಳುಗಳ ಹಿಂದೆ ಪಕ್ಕದ ಕಾಸರಗೋಡಿನ ಅಲ್ಲಲ್ಲಿ, ‌ಹಳಿ ಮೇಲೆ ಕಲ್ಲು, ಕಬ್ಬಿಣದ ಸರಳು, ಕಾಂಕ್ರೀಟ್‌ ತುಂಡುಗಳನ್ನಿರಿಸಿ ರೈಲು ಹಳಿ ತಪ್ಪಿಸುವ ವಿಧ್ವಂಸಕ ಕೃತ್ಯ ನಡೆಸಲಾಗಿತ್ತು. ಇದೀಗ ಮಂಗಳೂರಿನಲ್ಲೂ ಇಂತಹ ದುಷ್ಕೃತ್ಯ ಆರಂಭವಾಗಿದ್ದು ಸ್ಥಳೀಯವಾಗಿ ಆತಂಕಕಾರಿ ವಾತಾವರಣ ಸೃಷ್ಟಿಯಾಗಿದೆ ಎಂದು ಶಾಸಕರು ಕಳವಳ ವ್ಯಕ್ತಪಡಿಸಿದರು.

ಇತ್ತೀಚಿಗಷ್ಟೇ ಪಾಕ್ ಪ್ರೇರಿತ ಉಗ್ರ ಸಂಘಟನೆಗಳು ಭಾರತದಾದ್ಯಂತ ರೈಲುಗಳನ್ನು ಹಳಿ ತಪ್ಪಿಸುವ ಬೆದರಿಕೆ ಹಾಕಿರುವುದು, ದೇಶದ ಹಲವಡೆ ರೈಲು ಹಳಿ ತಪ್ಪಿಸುವ ಯತ್ನಗಳು ನಡೆದಿರುವುದು, ರಾಜ್ಯದ ಅಲ್ಲಲ್ಲಿ ಉಗ್ರರ ಸ್ಲೀಪರ್‌ ಸೆಲ್‌ಗಳು ಕಾರ್ಯಾಚರಣೆ ನಡೆಸುತ್ತಿರುವುದು, ಅದಕ್ಕೆ ಪೂರಕವಾಗಿ ಕರಾವಳಿ ಹಾಗೂ ರಾಜ್ಯದಲ್ಲಿ ಪಾಕ್-ಬಾಂಗ್ಲಾ ಅಕ್ರಮ ನುಸುಳುಕೋರರು ಸಿಕ್ಕಿ ಬಿದ್ದಿರುವುದು ಎಲ್ಲವೂ ಒಂದಕ್ಕೊಂದು ತಾಳೆಯಾಗುತ್ತಿವೆ. ರಾಜ್ಯ ಕಾಂಗ್ರೆಸ್ ಸರ್ಕಾರ ಇದನ್ನೂ ಸಹ ತನ್ನ ಎಂದಿನ ಶೈಲಿಯಲ್ಲಿ “ಇದು ಯಾರೋ ತಮಾಷೆಗೆ ಮಾಡಿದ್ದು, ಇದೊಂದು ಸಣ್ಣ ಘಟನೆ”, ಎಂದೆಲ್ಲ ಹಗುರವಾಗಿ ತೆಗೆದುಕೊಳ್ಳದೇ ಎಲ್ಲಾ ಆಯಾಮಗಳಲ್ಲೂ ಗಂಭೀರವಾಗಿ ತನಿಖೆ ನಡೆಸಿ ವಿಧ್ವಂಸಕ ಕೃತ್ಯಕ್ಕೆ ಯತ್ನಿಸಿದವರ ಹೆಡೆಮುರಿ ಕಟ್ಟಬೇಕೆಂದು ಶಾಸಕರು ಆಗ್ರಹಿಸಿದರು.

Related posts

ಮಂಗಳೂರು ವಿವಿಯಿಂದ ಯಕ್ಷ ಮಂಗಳ ಪ್ರಶಸ್ತಿ ಪ್ರದಾನ

National Fame Award of India Books of Award – Sushanth Brahmavar

ಯಕ್ಷಗಾನ ಹಾಸ್ಯಗಾರ ಮುಖ್ಯಪ್ರಾಣ ಕಿನ್ನಿಗೋಳಿ ನಿಧನಕ್ಕೆ ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಸಂತಾಪ