ಕ್ಷೇತ್ರದ ನೆರೆಪೀಡಿತ ಪ್ರದೇಶಕ್ಕೆ ಶಾಸಕ ಗುರುರಾಜ್‌ ಗಂಟಿಹೊಳೆ ಭೇಟಿ : ಅಗತ್ಯ ತುರ್ತು ‌ಕ್ರಮ, ಪರಿಹಾರಕ್ಕೆ ಸೂಚನೆ

ಬೈಂದೂರು : ಪುನರ್ವಸು ಮಳೆಯ ಆರ್ಭಟ ಜೋರಾಗಿದ್ದು ಬೈಂದೂರು ತಾಲ್ಲೂಕಿನ ಹಲವು ಭಾಗಗಳಲ್ಲಿ ನೆರೆ, ನೆರೆಭೀತಿ ಎದುರಾಗಿದ್ದು ಶಾಸಕರಾದ ಗುರುರಾಜ್ ಗಂಟಿಹೊಳೆ ಅವರು ಸ್ಥಳೀಯ ಮುಖಂಡರು ಹಾಗೂ ಅಧಿಕಾರಿಗಳೊಂದಿಗೆ ಸ್ಥಳಕ್ಕೆ‌ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ನೆರೆಯಿಂದಾಗಿ ಇಡೀ ತಾಲೂಕಿಗೆ ಹಲವು ರೀತಿಯಲ್ಲಿ ಸಮಸ್ಯೆಯಾಗಿದೆ. ಅನೇಕರ ಮನೆಗೆ ನೀರು ನುಗ್ಗಿದೆ. ತೋಟಗಳಿಗೆ ಹಾನಿಯಾಗಿದೆ. ರಸ್ತೆ ಕುಸಿದಿದೆ. ಅನೇಕ ಪ್ರದೇಶಗಳಲ್ಲಿ ನೀರು ನುಗ್ಗಿ, ಪ್ರವಾಹ, ನೆರೆ ವಾತಾವರಣ ಸೃಷ್ಟಿಯಾಗಿದೆ. ಶಾಸಕರಾದ ಗುರುರಾಜ್ ಗಂಟಿಹೊಳೆ ಅವರು ತನ್ನೆಲ್ಲಾ ಖಾಸಗಿ ಸಭೆ/ಕಾರ್ಯಕ್ರಮಗಳನ್ನು ಬದಿಗೊತ್ತಿ ಕ್ಷೇತ್ರದಲ್ಲಿಯೇ ಇದ್ದು ನೆರೆಪೀಡಿತ ಸ್ಥಳಗಳಿಗೆ ಭೇಟಿ ನೀಡಿ ಜನರ ಸಂಕಷ್ಟಕ್ಕೆ ಜೊತೆಯಾಗುತ್ತಿದ್ದಾರೆ.

ಅಷ್ಟು ಮಾತ್ರವಲ್ಲದೇ ಅವರು ತಾತ್ಕಾಲಿಕ‌ವಾಗಿ ಅಗತ್ಯ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿಯೂ ಶ್ರಮಿಸುತ್ತಿದ್ದಾರೆ. ಬೈಂದೂರು ತಾಲೂಕಿನ ತಲ್ಲೂರು ಕೋಟೆ ಬಾಗಿಲು ಬೈಲ್ ಮನೆ ವ್ಯಾಪ್ತಿಯಲ್ಲಿ ಪ್ರತಿವರ್ಷವೂ ನೆರೆಹಾವಳಿಯಿಂದ ಹಲವು ಸಮಸ್ಯೆ ಸೃಷ್ಟಿಯಾಗುತ್ತದೆ. ಬಾರಿ ಮಳೆಯಿಂದ ಸಂಕಷ್ಟ ಅನುಭವಿಸುತ್ತಿದ್ದ ಜನತೆಯ ಸಮಸ್ಯೆಯನ್ನು ಈ ಬಾರಿ ಸ್ವತಃ ಶಾಸಕರೇ ಅನುಭವಕ್ಕೆ ತಂದುಕೊಂಡಿದ್ದಾರೆ.

ರಸ್ತೆಯನ್ನೇ ಕಾಣದ ಹಾಗೂ ಇದುವರೆಗೂ ಯಾವ ಶಾಸಕರು ಕಾಲು ಹಾಕದ ಈ ಪ್ರದೇಶಕ್ಕೆ ಗುರುರಾಜ್ ಗಂಟಿಹೊಳೆಯವರು ಖುದ್ದು ಭೇಟಿ ಮಾಡಿ ಅಲ್ಲಿನ ಜನರ ಸಮಸ್ಯೆ ಆಲಿಸಿದರು. ಜನರು ತಮ್ಮ ಸಮಸ್ಯೆಗಳನ್ನು ಮನ ಬಿಚ್ಚಿ ಶಾಸಕರಲ್ಲಿ ತೋಡಿಕೊಂಡಿದ್ದಾರೆ.

ವಂಡ್ಸೆ ಗ್ರಾಮದ ಕೊಳ್ಕೆಗದ್ದೆ ಗೋವಿಂದ ಮೊಗವೀರರವರ ಮನೆಗೆ ನೀರು ನುಗ್ಗಿದ ಪರಿಣಾಮ ಶಾಸಕರಿಗೆ ಕರೆ ಮಾಡಿದ್ದರು, ತಕ್ಷಣವೇ ಶಾಸಕರು ಅಲ್ಲಿಗೆ ಭೇಟಿ ನೀಡಿ, ಸ್ಥಳಕ್ಕೆ ತಹಶೀಲ್ದಾರ್ ಅವರನ್ನು ಕರೆಸಿ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಮತ್ತು ಶಾಶ್ವತ ಪರಿಹಾರ ಒದಗಿಸಲು ಸೂಚಿಸಿದರು.

ಶಾಸಕರ ಭೇಟಿ ಸಂದರ್ಭದಲ್ಲಿ ಪ್ರಮುಖರಾದ ವಂಡ್ಸೆ ದೀಪಕ್ ಶೆಟ್ಟಿ, ಕರಣ್ ಪೂಜಾರಿ, ಲಕ್ಷ್ಮೀರಾಜ್ ತಲ್ಲೂರು ಹಾಗೂ ಸ್ಥಳೀಯ ಕಾರ್ಯಕರ್ತರು, ಮುಖಂಡರು, ಊರಿನ ಹಿರಿಯರು ಉಪಸ್ಥಿತರಿದ್ದರು.

Related posts

ಕರ್ನಾಟಕ ಕ್ರೀಡಾಕೂಟದಲ್ಲಿ ಸಮರಾಗೆ ಚಿನ್ನದ ಪದಕ

ಯಕ್ಷಗಾನ ಪ್ರದರ್ಶನಕ್ಕೆ ಅಡ್ಡಿ – ಬ್ರಿಟಿಷ್ ಆಡಳಿತವನ್ನೂ ಮೀರಿಸಿದ ಸಿದ್ಧರಾಮಯ್ಯ ಸರ್ಕಾರ : ಯಶ್‌ಪಾಲ್ ಸುವರ್ಣ

ಮಾರಿದ ಹಳೆಯ ಬಸ್ಸನ್ನು ಕದ್ದು ತಂದ ಆರೋಪ – ತಂದೆ ಮಗನ ವಿರುದ್ಧ ದೂರು ದಾಖಲು !