ಮಂಗಳೂರು : ರಾಜ್ಯಪಾಲರು ರಾಜಭವನವನ್ನು ದುರುಪಯೋಗ ಮಾಡುತ್ತಿದ್ದಾರೆ. ಅವರು ಸಂವಿಧಾನದ ಚೌಕಟ್ಟು ಬಿಟ್ಟು ಬಿಜೆಪಿ ನಿರ್ದೇಶನದಂತೆ ಕೆಲಸ ಮಾಡಲು ಆಗುವುದಿಲ್ಲ. ಆದರೆ ರಾಜ್ಯಪಾಲರು ಬಿಜೆಪಿ ಅಧ್ಯಕ್ಷರಂತೆ ಕೆಲಸ ಮಾಡ್ತಾ ಇದ್ದಾರೆ ಎಂದು ಮಂಗಳೂರಿನಲ್ಲಿ ಎಂಎಲ್‌ಸಿ ಬಿ.ಕೆ.ಹರಿಪ್ರಸಾದ್ ಹೇಳಿದರು.
ಬಿಜೆಪಿಯವರು ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದ್ದಾರೆ. ಈ ಹಿಂದೆ ಬಿಜೆಪಿ ಆಪರೇಷನ್ ಕಮಲದ ಮೂಲಕ ಸರ್ಕಾರ ಕೆಡವುತ್ತಿತ್ತು. ಆದರೆ ಈಗ ಬೇರೆ ವಾಮಾಮಾರ್ಗದ ಮೂಲಕ ಸರ್ಕಾರ ಅಸ್ಥಿರಗೊಳಿಸಲು ಯತ್ನಿಸುತ್ತಿದ್ದಾರೆ. ಸದ್ಯ ಸಿಎಂ ಸಿದ್ದರಾಮಯ್ಯರಿಗೆ ಹೈಕೋರ್ಟ್ ರಿಲೀಫ್ ಕೊಟ್ಟಿದೆ. ನ್ಯಾಯಾಂಗ ಹೋರಾಟ ಆಗುತ್ತಿದೆ ಎಂದರು.
ಯಡಿಯೂರಪ್ಪ ಪ್ರಕರಣ 20 ಕೋಟಿ ಚೆಕ್ ಮೂಲಕ ಲಂಚ ಪಡೆದಿರೋದು. ಗಡೀಪಾರಾಗಿದ್ದ ಅಮಿತ್ ಶಾ ಕೂಡ ಮಂತ್ರಿಯಾಗಿಲ್ವಾ? ಬಿಜೆಪಿ ನಾಯಕರ ಮೇಲೆ ಗಂಭೀರ ಆರೋಪಗಳಿತ್ತು. ಆದರೆ ಸಿದ್ದರಾಮಯ್ಯರ ಮೇಲಿನ ಆರೋಪ ಕಪೋಲಕಲ್ಪಿತ. ರಾಜ್ಯಪಾಲರು ಈ ಹಿಂದೆ ದಲಿತ ರಾಜಕಾರಣಿ ಆಗಿದ್ದವರು, ಗೆಹ್ಲೋಟ್ ಅವರನ್ನು ನಾನು ಹತ್ತಿರದಿಂದ ಬಲ್ಲವನಾಗಿದ್ದೇನೆ. ಬಿಜೆಪಿಯವರಿಗೆ ದಲಿತರ ಮೇಲೆ ಪ್ರೀತಿ ಇದ್ದರೆ ಸಂವಿಧಾನ ಬದಲಾವಣೆ ಎಂದು ಏಕೆ ಮಾತನಾಡುತ್ತಿದ್ದಾರೆ. ನಾವು ಪ್ರತಿಭಟನೆ ಮಾಡಿದ್ದೇವೆ. ಯಾವುದೇ ಗಲಾಟೆ ಮಾಡಿಲ್ಲ ಎಂದರು.
ಐವನ್ ಡಿಸೋಜಾ ವಿವಾದಾತ್ಮಕ ಹೇಳಿಕೆ ವಿಚಾರದಲ್ಲಿ ಮಾತನಾಡಿದ ಬಿ.ಕೆ.ಹರಿಪ್ರಸಾದ್, ಐವನ್ ಡಿಸೋಜಾ ಏನು ಹೇಳಿದ್ದಾರೆಂದು ನನಗೆ ಸರಿಯಾಗಿ ಗೊತ್ತಿಲ್ಲ. ಬಾಂಗ್ಲಾದೇಶ ಮತ್ತು ಭಾರತವನ್ನು ಒಂದು ಮಾಡೋದು ಬೇಡ. ಸಂವಿಧಾನಿಕ ಹುದ್ದೆಯಲ್ಲಿರುವ ವಿರುದ್ಧ ನಾವು ಹೋರಾಟ ಮಾಡೋದು ಸರಿಯಲ್ಲ. ಆದರೆ ಅವರು ತೆಗೆದುಕೊಂಡ ನಿರ್ಧಾರದ ವಿರುದ್ಧ ಕಾನೂನು ಹೋರಾಟ ಮಾಡುತ್ತಿದ್ದೇವೆ ಎಂದರು.