45 ನಿಮಿಷ ಎಮ್ಮೆಕೆರೆ ಈಜುಕೊಳದಲ್ಲಿ ಈಜಿದ ಸಚಿವ ದಿನೇಶ್ ಗುಂಡೂರಾವ್

ಮಂಗಳೂರು : ಆರೋಗ್ಯ ಸಚಿವ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ತಾವೊಬ್ಬ ಒಳ್ಳೆ ಈಜು ಪಟು ಎಂಬುದನ್ನು ಎಮ್ಮೆಕೆರೆ ಈಜುಕೊಳದಲ್ಲಿ‌ 45 ನಿಮಿಷಗಳ ಕಾಲ ಈಜಿ ಸಾಬೀತು ಪಡಿಸಿದ್ದಾರೆ.

ಶನಿವಾರ ಬೆಳಗ್ಗೆ ಪಾಂಡೇಶ್ವರದ ಎಮ್ಮೆಕೆರೆಯಲ್ಲಿರುವ ಅಂತಾರಾಷ್ಟ್ರೀಯ ಮಟ್ಟದ ಈಜು ಕೊಳಕ್ಕೆ ಭೇಟಿಯಿತ್ತು, ಅವರು ಸ್ವತಃ ಈಜಾಡಿದ್ದಾರೆ. ಕಳೆದ ವರ್ಷ ಈಜುಕೊಳ ಉದ್ಘಾಟನೆ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ದಿನೇಶ್ ಗುಂಡೂರಾವ್ ಆಗಮಿಸಿರಲಿಲ್ಲ. ಉದ್ಘಾಟನೆಯನ್ನು ತಾವು ಈಜಾಡುವ ಮೂಲಕವೇ ಮಾಡುವುದಾಗಿ ಅವರು ಹಿಂದೆ ಹೇಳಿದ್ದರು. ಕಾರ್ಯ ನಿಮಿತ್ತ ಬಾರದೇ ಇದ್ದ ದಿನೇಶ್ ಗುಂಡೂರಾವ್ ಶನಿವಾರ ಬೆಳಗ್ಗೆ ಸಮಯದ ಸದುಪಯೋಗ ಮಾಡಿದ್ದಾರೆ.

ಆದರೆ ಈಜು ಪಟುಗಳಿಗೆ ಪ್ರತ್ಯೇಕ ಲಾಕ್ ರೂಮ್ ಇರದೇ ಇರುವುದನ್ನು ನೋಡಿ, ತಕ್ಷಣ ಅದಕ್ಕೊಂದು ವ್ಯವಸ್ಥೆ ಮಾಡಬೇಕೆಂದು ಅಧಿಕಾರಿಗಳಿಗೆ ಅವರು ಸೂಚನೆ ನೀಡಿದರು.

ಅಲ್ಲದೆ, ಈಜು ಕೊಳದ ಎದುರಿನ ಮೈದಾನವನ್ನು ಇಂಟ‌ರ್ಲಾಕ್ ಹಾಕಿಸಿ, ಮಕ್ಕಳ ಆಟಕ್ಕೆ ತಕ್ಕುದಾಗುವಂತೆ ರೂಪಿಸುವಂತೆ ಅಧಿಕಾರಿಗಳಿಗೆ ಸೂಚನೆಯನ್ನು ನೀಡಿದರು. ಅಲ್ಲದೆ, ಮೈದಾನದ ಸುತ್ತ ಫುಡ್ ಕೋರ್ಟ್ ಸ್ಥಾಪನೆಗೂ ವ್ಯವಸ್ಥೆ ಮಾಡುವಂತೆ ಸೂಚಿಸಿದರು. ಈಜು ಕೊಳ ಕಟ್ಟಡದ ವೀಕ್ಷಣೆಯ ಬಳಿಕ ಸುಮಾರು 45 ನಿಮಿಷಗಳ ಕಾಲ ನೀರಿಗಿಳಿದು‌ ಅವರು ಈಜಾಡಿದ್ದಾರೆ.

Related posts

ಜನಿವಾರ ತೆಗೆಸಿದ ಪ್ರಕರಣ – ಒಂದು ಸಮಾಜದ ಮೇಲೆ ದಬ್ಬಾಳಿಕೆ ಸರಿಯಲ್ಲ : ಕೋಟ

ತಾಲೂಕು ಸರಕಾರಿ ಆಸ್ಪತ್ರೆ,‌‌ ಆರೋಗ್ಯ ಕೇಂದ್ರಗಳಿಗೆ ಅಧಿಕಾರಿಗಳ ಭೇಟಿ

ಬಿಎಸ್‌ಎನ್‌ಎಲ್ ಸಂಪರ್ಕದ ಕುಂದು ಕೊರತೆ, ಗುಣಮಟ್ಟ ಉತ್ತಮಗೊಳಿಸುವಿಕೆ ಸಭೆಯಲ್ಲಿ ಸಂಸದ ಕೋಟ ಭಾಗಿ