ಸಮಾಜದಲ್ಲಿ ಮಹತ್ವದ ಹೊಣೆಗಾರಿಕೆ ನಿಭಾಯಿಸುತ್ತಿರುವ ಮಾಧ್ಯಮದ ಪ್ರತಿನಿಧಿಗಳು – ಪ್ರೊ.ಪಿ‌ಎಲ್.ಧರ್ಮ

ಮಂಗಳೂರು : ಸಮಾಜದಲ್ಲಿ ಮಾಧ್ಯಮಗಳು ಹಲವು ಇತಿಮಿತಿಗಳ ನಡುವೆ ಪ್ರತಿನಿತ್ಯ ಹಲವಾರು ಸುದ್ದಿಗಳನ್ನು ಶ್ರಮವಹಿಸಿ ಓದುಗರಿಗೆ ನೀಡುವ ಮಹತ್ವದ ಹೊಣೆಗಾರಿಕೆ‌ಯನ್ನು ಇಂದಿಗೂ ನಿಭಾಯಿಸುತ್ತಿದ್ದಾರೆ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಪಿ.ಎಲ್ ಧರ್ಮ ತಿಳಿಸಿದ್ದಾರೆ.

ಅವರು ನಗರದ ಕುದ್ಮುಲ್ ರಂಗರಾವ್ ಪುರಭವನದ ದಿ.ಮನೋಹರ ಪ್ರಸಾದ್ ವೇದಿಕೆ, ದಿ. ಭುವನೇಂದ್ರ ಪುದುವೆಟ್ಟು ಸಭಾಂಗಣದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ 5ನೇ ಜಿಲ್ಲಾ ಸಮ್ಮೇಳನದ ಸಮಾರೋಪ ಸಮಾರಂಭವನ್ನು ನೆರವೇರಿಸಿ ಮಾತನಾಡುತ್ತಿದ್ದರು.

ಪತ್ರಿಕೆಗಳು ಜಾಹೀರಾತು, ಸಿನಿಮಾ ಇನ್ನಿತರ ಪುಟಗಳ ನಡುವೆ ಪ್ರತಿನಿತ್ಯ ನೂರಾರು ಸುದ್ದಿಗಳನ್ನು ಸಂಗ್ರಹಿಸಿ ತನ್ನ ಓದುಗರಿಗೆ ನೀಡುತ್ತಿರುವುದರ ಹಿಂದಿನ ಪರಿಶ್ರಮ ಮಹತ್ವದ ಹೊಣೆಗಾರಿಕೆ‌ಯಾಗಿದೆ. ಜೊತೆಗೆ ಪತ್ರಕರ್ತರು ಸಮಾಜವನ್ನು ಎಚ್ಚರಿಸುವ, ಕೆಲವೊಮ್ಮೆ ಚಾಟಿ ಬೀಸುವ ಕೆಲಸವನ್ನೂ ಮಾಡುತ್ತಾ, ಸಮಾಜದ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿರುವುದು ಶ್ಲಾಘನೀಯ ಎಂದರು.

ಅತಿಥಿಗಳಾಗಿ ಭಾಗವಹಿಸಿದ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಮಾತನಾಡುತ್ತಾ, ಇಂದಿನ ಬದಲಾಗುತ್ತಿರುವ ಕಾಲಘಟ್ಟದಲ್ಲಿ ಮಾಧ್ಯಮಗಳಲ್ಲೂ ಬದಲಾವಣೆ‌ಯಾಗಿದೆ. ಪತ್ರಿಕಾ ಮಾಧ್ಯಮ‌ಗಳ ಜೊತೆ ಟಿ.ವಿ ಮಾಧ್ಯಮ‌ಗಳು ಅವುಗಳಿಗಿಂತಲೂ ಸಾಮಾಜಿಕ ಮಾಧ್ಯಮಗಳು ಇನ್ನೂ ವೇಗವಾಗಿ ಸಮಾಜದಲ್ಲಿ ಜನರ ನಡುವೆ ಕಾರ್ಯ ನಿರ್ವಹಿಸುತ್ತಿದೆ. ರಾಜಕೀಯ ರಂಗದಂತೆ ಮಾಧ್ಯಮ ರಂಗಗಳು ಸ್ಪರ್ಧಾತ್ಮಕ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಒಂದು ಸಣ್ಣ ಘಟನೆ ಕ್ಷಣ ಮಾತ್ರದಲ್ಲಿ ದೇಶಾದ್ಯಂತ ಪ್ರಸಾರವಾಗುತ್ತವೆ. ಇಂತಹ ಸಂದರ್ಭದಲ್ಲಿ ಕೆಲವು ಸುದ್ದಿಗಳಿಂದ ಸಮಾಜದಲ್ಲಿ ಪ್ರತಿಕೂಲ ಪರಿಣಾಮಗಳನ್ನು ಉಂಟುಮಾಡುತ್ತದೆ. ಈ ನಡುವೆ ಪತ್ರಕರ್ತರು ತಾವು ಇರುವ ಪ್ರದೇಶದ ಜನರ ಬಗ್ಗೆ ಕಾಳಜಿಯಿಂದ ಸಕಾರಾತ್ಮಕ ದೃಷ್ಟಿಕೋನ‌ದಿಂದ ಜನರ ಹಿತಕ್ಕಾಗಿ ಶ್ರಮಿಸುತ್ತಿರುವುದು ಶ್ಲಾಘನೀಯ. ಅದಕ್ಕಾಗಿ ಬ್ರ್ಯಾಂಡ್ ಮಂಗಳೂರು‌ನಂತಹ ಕಾರ್ಯಕ್ರಮ, ಗ್ರಾಮವಾಸ್ತವ್ಯದಂತಹ ಕಾರ್ಯಕ್ರಮಗಳು ಮಾದರಿಯಾಗಿದೆ ಎಂದರು.

ಶಾಸಕ ಡಾ. ವೈ. ಭರತ್ ಶೆಟ್ಟಿಯವರು ಮಾತನಾಡುತ್ತಾ, ಪತ್ರಕರ್ತರು ಒತ್ತಡಗಳ ನಡುವೆ ತಮ್ಮ ಮೌಲ್ಯಗಳು, ಜನ‌ಸಾಮಾ‌ನ್ಯರ ಹಿತಕ್ಕಾಗಿ ಶ್ರಮಿಸುತ್ತಿದ್ದಾರೆ ಎಂದು ಸಮ್ಮೇಳಕ್ಕೆ ಶುಭ ಹಾರೈಸಿದರು.

ಇದೇ ಸಂದರ್ಭದಲ್ಲಿ ದಿವಂಗತ ಮನೋಹರ ಪ್ರಸಾದ್ ಅವರ ಸಂಸ್ಕರಣೆಯನ್ನು ಹಿರಿಯ ಪತ್ರಕರ್ತರಾದ ಪಿ.ಬಿ.ಹರೀಶ್ ರೈ ಹಾಗೂ ರವೀಂದ್ರ ಶೆಟ್ಟಿ ನಡೆಸಿಕೊಟ್ಟರು.

ಸಮಾರಂಭದಲ್ಲಿ ಹಿರಿಯ ಪತ್ರಕರ್ತರಾದ ಎಂ.ಎಸ್.ಭಟ್(ಉದಯವಾಣಿ), ದೀಪಕ್ ಅಟವಳೆ‌(ಹೊಸ ದಿಗಂತ), ಉದಯ ಶಂಕರ ನೀರ್ಪಾಜೆ(ಉದಯವಾಣಿ), ರಾಮಕೃಷ್ಣ ಭಟ್(ಕೆಪಿಎನ್), ಜಯಂತ ಉಳ್ಳಾಲ(ನಮ್ಮ ಕುಡ್ಲ ವಾಹಿನಿ), ಶಶಿಧರ ಪೊಯ್ಯತ್ತ ಬೈಲು(ಅಬ್ಬಕ್ಕ ಟಿವಿ ವಾಹಿನಿ), ಅಶೋಕ್ ಶೆಟ್ಟಿ ಬಾಳ, ಬಿ.ರವೀಂದ್ರ ಶೆಟ್ಟಿ (ವಿಜಯ ಕರ್ನಾಟಕ), ಪ್ರಕಾಶ್ ಸುವರ್ಣ(ಕನ್ನಡ ಪ್ರಭ), ಸಲೀಮ್ ಬೋಳಂಗಡಿ(ಸನ್ಮಾರ್ಗ), ಶರತ್ ಸಾಲ್ಯಾನ್(ವಿ‌4 ನ್ಯೂಸ್), ಎಚ್.ಎಸ್.ಮಂಜುನಾಥ(ದಿ ಹಿಂದೂ), ರಾಜೇಶ್ ಕದ್ರಿ(ಮಂಗಳೂರು ಮಿರರ್), ಭಾಗ್ಯವಾನ್ ಸುನೀಲ್ (ವಿಜಯವಾಣಿ) ಇವರನ್ನು ಸನ್ಮಾನಿಸಲಾಯಿತು.

ಮಾಧ್ಯಮ ಯುವ‌ಜನ‌ಗೋಷ್ಠಿಯಲ್ಲಿ ಪತ್ರಕರ್ತರಾದ ಮೊಹಮ್ಮದ್ ಆರಿಫ್ ಪಡುಬಿದ್ರೆ, ಸಂಧ್ಯಾ ಹೆಗಡೆ, ಅನಿಲ್ ಶಾಸ್ತ್ರಿ ವಿಷಯ ಮಂಡಿಸಿದರು. ಅನ್ನಪೂರ್ಣೇಶ್ವರಿ ಅಂಧ ಕಲಾವಿದರ ಸಂಗೀತ ಕಾರ್ಯಕ್ರಮ ನಡೆಯಿತು. ಭಾಸ್ಕರ್ ಕಟ್ಟ ಕಾರ್ಯಕ್ರಮ ಸಂಯೋಜಿಸಿದರು. ತಾಲೂಕಿನ ಅಧ್ಯಕ್ಷ‌ರು ಪದಾಧಿಕಾರಿ‌ಗಳೊಂದಿಗೆ ಸಂವಾದ ಕಾರ್ಯಕ್ರಮ ನಡೆಯಿತು. ಸಮ್ಮೇಳನ‌ದ ಸರ್ವಾಧ್ಯಕ್ಷ ಶಿವ ಸುಬ್ರಹ್ಮಣ್ಯ ಸಮಾರೋಪ ಸಮಾರಂಭದ ಪ್ರತಿಕ್ರಿಯೆ ನೀಡಿದರು.

ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಸ್ವಾಗತಿಸಿದರು. ವೇದಿಕೆಯಲ್ಲಿ ಜಿಲ್ಲಾ ವಾರ್ತಾಧಿಕಾರಿ ಖಾದರ್ ಷಾ, ಉದ್ಯಮಿ ರಮೇಶ್ ನಾಯಕ್, ತಾಲೂಕು ಮತ್ತು ಜಿಲ್ಲಾ ಪತ್ರಕರ್ತರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ ವಂದಿಸಿದರು. ಕೋಶಾಧಿಕಾರಿ ಪುಷ್ಪರಾಜ್ ಬಿ. ಎನ್ ಕಾರ್ಯಕ್ರಮ ನಿರೂಪಿಸಿದರು.

Related posts

ಅಕ್ರಮವಾಗಿ ಸಾಗಿಸುತ್ತಿದ್ದ 1.15 ಕೋ.ರೂ. ಚಿನ್ನ, ಕೇಸರಿ ಪತ್ತೆ;

ಅಡುಗೆ ಅನಿಲ ದುರಂತ; ಇಬ್ಬರು ಮಹಿಳೆಯರಿಗೆ ಗಂಭೀರ ಗಾಯ

4ಲಕ್ಷ ಹಣ ಲಂಚ ಸ್ವೀಕರಿಸುತ್ತಿದ್ದಾಗಲೇ ಕಂದಾಯ ನಿರೀಕ್ಷಕ ಲೋಕಾಯುಕ್ತ ಬಲೆಗೆ