ಮವ್ವಾರು ಸರ್ವ ಸಮರ್ಥ ಹಾಸ್ಯಗಾರರು – ಪಟ್ಲ

ಮಂಗಳೂರು : “ಕಳೆದ 46 ವರ್ಷಗಳಿಂದ ತೆಂಕು ತಿಟ್ಟಿನ ಯಕ್ಷಗಾನ ರಂಗದಲ್ಲಿ ವ್ಯವಸಾಯ ನಡೆಸುತ್ತಿರುವ ನಿಷ್ಠಾವಂತ ಯಕ್ಷಕಲೋಪಾಸಕ. ಕಟೀಲು, ಆದಿ ಸುಬ್ರಮಣ್ಯ, ಪುತ್ತೂರು, ಕಾಂತಾವರ, ಮಧೂರು, ಕದ್ರಿ, ಮಂಗಳಾದೇವಿ, ಎಡನೀರು ಮೇಳಗಳಲ್ಲಿ ತಿರುಗಾಟ ನಡೆಸಿರುವ ಶ್ರೀ ಪಾವಂಜೆ ಮೇಳದ ಪ್ರಧಾನ ಹಾಸ್ಯಗಾರ ಮವ್ವಾರು ಬಾಲಕೃಷ್ಣ ಮಣಿಯಾಣಿ ಅವರು ಸಂಘಟಕರಿಗೆ, ಸಂಚಾಲಕರಿಗೆ, ಸಹ ಕಲಾವಿದರಿಗೆ ಹೊಂದಿಕೆ ಆಗುವ ಸರ್ವಸಮರ್ಥ ಹಾಸ್ಯ‌ಗಾರರು ” ಎಂದು ಪಟ್ಲ ಸತೀಶ್ ಶೆಟ್ಟಿ ಭಾಗವತರು ಅಭಿನಂದಿಸಿದರು.

ಕದ್ರಿ ಯಕ್ಷ ಬಳಗವು “ಕದ್ರಿ ಕಂಬಳ ಗುತ್ತು ಬಾಲಕೃಷ್ಣ ಶೆಟ್ಟಿ ಸ್ಮೃತಿ ಪ್ರಶಸ್ತಿ” ಪ್ರದಾನ ಕಾರ್ಯಕ್ರಮವನ್ನು ಕದ್ರಿ ದೇವಸ್ಥಾನದ ರಾಜಾoಗಣದಲ್ಲಿ, ಪಾವಂಜೆ ಮೇಳದ ಸೇವೆ ಆಟದ ವೇದಿಕೆಯಲ್ಲಿ ಸಂಯೋಜಿಸಿತ್ತು.

ಕಾಶೀ ಮಾಣಿ, ಕುಚೇಲ, ಬಾಹುಕ, ಪಾಪಣ್ಣ, ವಿಜಯ, ಮಾಲಿನಿ ದೂತ, ಕೇಳು ಪಂಡಿತ ಮೊದಲಾದ ಪಾತ್ರ‌ಗಳ ನಿರ್ವಹಣೆಯಲ್ಲಿ ಸಿದ್ದಿ ಪ್ರಸಿದ್ದಿ ಹೊಂದಿರುವ ಮವ್ವಾರು ಅವರು ಕ್ರಿಯಾಶೀಲ ರಾಜ ಹಾಸ್ಯಗಾರ ಎಂದು ಗುರುತಿಸಲ್ಪಟ್ಟಿದ್ದಾರೆ.
ಸುಧಾಕರ ರಾವ್ ಪೇಜಾವರ ಅವರು ಹಲವು ದಶಕಗಳ ಕಾಲ ಇತಿಹಾಸ ಪ್ರಸಿದ್ದ ಕದ್ರಿ ಕಂಬಳ ಸಂಯೋಜಕರಾಗಿ, ಕದ್ರಿ ಶ್ರೀ ಮಂಜುನಾಥೇಶ್ವರ ಯಕ್ಷಗಾನ ಸಂಘದ ಅಧ್ಯಕ್ಷರಾಗಿದ್ದ ಹವ್ಯಾಸಿ ತಾಳಮದ್ದಳೆ ಅರ್ಥಧಾರಿ ಕೀರ್ತಿಶೇಷ ಕದ್ರಿ ಕಂಬಳಗುತ್ತು ಬಾಲಕೃಷ್ಣ ಶೆಟ್ಟಿ ಅವರ ಸಂಸ್ಮರಣೆಯನ್ನು ಮಾಡಿದರು.

ಸುದೇಶ್ ಕುಮಾರ್ ರೈ, ಜಯಶೀಲ ಅಡ್ಯoತಾಯ, ತಾರಾನಾಥ್ ಶೆಟ್ಟಿ ಬೋಳಾರ, ಶಿವಪ್ರಸಾದ್ ಪ್ರಭು, ರಾಮಚಂದ್ರ ಭಟ್ ಎಲ್ಲೂರು, ನಿವೇದಿತಾ ಶೆಟ್ಟಿ, ಹರೀಶ್ ಕುಮಾರ್ ಚಿತ್ರಾಪುರ, ಕೆ.ಎಸ್. ಭಟ್ ಉಪಸ್ಥಿತರಿದ್ದರು.
ಪ್ರದೀಪ್ ಆಳ್ವ ಕದ್ರಿ ಸನ್ಮಾನ ಪತ್ರ ವಾಚಿಸಿದರು. ಪುರುಷೋತ್ತಮ ಭಂಡಾರಿ ಅಡ್ಯಾರ್ ನಿರೂಪಿಸಿದರು. ಕದ್ರಿ ನವನೀತ ಶೆಟ್ಟಿ ಸಂಯೋಜಿಸಿದರು.

ನಂತರ ಪಟ್ಲ ಸತೀಶ್ ಶೆಟ್ಟಿ ಅವರ ನಿರ್ದೇಶನದಲ್ಲಿ ಶ್ರೀ ಪಾವಂಜೆ ಮೇಳದವರಿಂದ “ಶ್ರೀ ಶಬರಿಮಲೆ ಅಯ್ಯಪ್ಪ” ಯಕ್ಷಗಾನ ಪ್ರದರ್ಶನ ಜರಗಿತು.

Related posts

ವಿಶ್ವದ ವೇಗದ ಭಗವದ್ಗೀತಾ ಲೇಖಕ : ಕೇವಲ 5.30 ಗಂಟೆಗಳಲ್ಲಿ 18 ಅಧ್ಯಾಯ ಮತ್ತು 700 ಶ್ಲೋಕಗಳ ಬರಹ ಪೂರ್ಣಗೊಳಿಸಿದ ಅದ್ಭುತ ಸಾಧನೆ!

Worlds Fastest Bhagvad Gita Writer Completing 18 Chapters & 700 Verses in Just 5.30 Hours

ಮೀನುಗಾರರ ಪ್ರತಿಭಟನೆಯಲ್ಲಿ ಪ್ರಚೋದನಕಾರಿ ಭಾಷಣ-ಹಿಂದೂ ಯುವಸೇನೆ ಮುಖಂಡನ ವಿರುದ್ಧ ಸುಮೊಟೋ ಕೇಸ್