ಸಾಹಿತಿ ಮನೋರಮಾ ಎಂ. ಭಟ್ ನಿಧನ

ಮಂಗಳೂರು : ಮಂಗಳೂರಿನ ಹಿರಿಯ ನ್ಯಾಯವಾದಿ, ಯಕ್ಷಗಾನ ಕಲಾವಿದ ದಿ| ಮುಳಿಯ ಮಹಾಬಲ ಭಟ್ ಅವರ ಪತ್ನಿ ಮನೋರಮಾ ಎಂ. ಭಟ್ (92) ಅವರು ಸೆ.15ರಂದು ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.

ಅವರು ಇಬ್ಬರು ಪುತ್ರರನ್ನು ಅಗಲಿದ್ದಾರೆ. ಹೋರಾಟಗಾರ್ತಿ, ಖ್ಯಾತ ಸಾಹಿತಿ, ಕಥೆಗಾರ್ತಿ, ಆಕಾಶವಾಣಿ ಕಲಾವಿದೆಯಾಗಿದ್ದ ಮನೋರಮಾ ಭಟ್ ಅವರು ಸಣ್ಣಕತೆಗಾರ್ಥಿಯಾಗಿ ಸಾಹಿತ್ಯಕ್ಷೇತ್ರ ಪ್ರವೇಶಿಸಿದವರು. ಸ್ವಯಂವರ (ಸಣ್ಣಕಥಾ ಸಂಕಲನ), ಆಯ್ಕೆ (ಬಾನುಲಿ ನಾಟಕ ಸಂಕಲನ), ನಿರ್ಧಾರ, ಹೊಸಹಾದಿ, ನೀನು ಮತ್ತು ನಾನು, ಋಣಾನುಬಂಧ, ಚಂದ್ರಮತಿಯ ಕನಸು, ಬಲಿ ಸೇರಿದಂತೆ ಹಲವು ಕೃತಿ ಹೊರತಂದಿದ್ದಾರೆ. ಮಹಿಳೆಯರು ವಿಧವೆಯರಾದಾಗ ಮಾಂಗಲ್ಯವನ್ನು ತೆಗೆಯಬೇಕೆಂಬ ನಂಬಿಕೆಯನ್ನು ಎದುರಿಸಿ ಹೋರಾಡಿದವರು. ಕರಾವಳಿ ಲೇಖಕಿಯರ ವಾಚಕಿಯರ ಸಂಘದ ಸ್ಥಾಪಕ ಸದಸ್ಯರಲ್ಲೊಬ್ಬರಾಗಿದ್ದು, ಬಳಿಕ ಅಧ್ಯಕ್ಷರೂ ಆಗಿದ್ದರು.

ತನ್ನ ಮಾವ ಮುಳಿಯ ತಿಮ್ಮಪ್ಪಯ್ಯನವರ ಶತಮಾನೋತ್ಸವ ಸಮಿತಿಯ ಕಾರ್ಯದರ್ಶಿಯಾಗಿ ಎರಡು ದಶಕಗಳಗಿಂತಲೂ ಹೆಚ್ಚು ಕಾಲ ಮುಳಿಯ ಪ್ರಶಸ್ತಿ ಕಾರ್ಯಕ್ರಮ ನಡೆಸಿಕೊಂಡು ಬಂದವರು. ಮಂಗಳೂರು ತಾಲೂಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಹಲವು ವರ್ಷಗಳ ಕಾಲ ಉರ್ವ ಸ್ಟೋರ್‌ನಲ್ಲಿದ್ದ ಮನೆಯಲ್ಲಿ ಏಕಾಂಗಿಯಾಗಿ ವಾಸಿಸುತ್ತಿದ್ದ ಅವರು ವೃದ್ಧಾಪ್ಯದ ಕಾರಣ ಕೆಲವು ವರ್ಷಗಳಿಂದ ನಗರದ ಹೊರವಲಯದ ಆಶ್ರಮದಲ್ಲಿದ್ದರು. ಅವರು ಅತ್ತಿಮಬ್ಬೆ ಪ್ರತಿಷ್ಠಾನದ ಸಾಹಿತ್ಯ ಪ್ರಶಸ್ತಿ, ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸಹಿತ ಹಲವು ಪುರಸ್ಕಾರ ಗಳಿಸಿದ್ದಾರೆ.

Related posts

ಕರ್ನಾಟಕ ಕ್ರೀಡಾಕೂಟದಲ್ಲಿ ಸಮರಾಗೆ ಚಿನ್ನದ ಪದಕ

ನಾಪತ್ತೆಯಾಗಿರುವ ಮೀನುಗಾರನ ಕುಟುಂಬಕ್ಕೆ ಪರಿಹಾರ ಒದಗಿಸಲು ಗಂಟಿಹೊಳೆ ಆಗ್ರಹ

ತಾಯಿ ಹಾಗೂ ಇಬ್ಬರು ಮಕ್ಕಳು ನಾಪತ್ತೆ