ಮಂಗಳೂರು ಮಹಾ‌ನಗರ‌ ಪಾಲಿಕೆ ಕಸ ಸಂಗ್ರಹಕ್ಕೆ ವಿದ್ಯುತ್ ಚಾಲಿತ ಆಟೋಗಳ ಲೋಕಾರ್ಪಣೆ

ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆ ಮತ್ತು ಪ್ರಗ್ಯಾ ಆಟೋಮೊಬೈಲ್ಸ್ ಸಹಭಾಗಿತ್ವದಲ್ಲಿ ಮನಪಾ ವ್ಯಾಪ್ತಿಯಲ್ಲಿ ಮನೆ ಮನೆ ಕಸ ಸಂಗ್ರಹಕ್ಕೆ ವಿದ್ಯುತ್ ಚಾಲಿತ ಆಟೋಗಳ ಲೋಕಾರ್ಪಣೆ ಕಾರ್ಯಕ್ರಮ ನಗರದ ಪುರಭವನದ ಆವರಣದಲ್ಲಿ ಬುಧವಾರ ನಡೆಯಿತು.

ಬೆಂಗಳೂರಿನ ಪ್ರಗ್ಯಾ ಆಟೋಮೊಬೈಲ್ಸ್ ತಯಾರಿಸಿದ 24 ಪರಿಸರ ಸ್ನೇಹಿ, ಮಾಲಿನ್ಯರಹಿತ ವಾಹನಗಳನ್ನು ಪೌರ ಕಾರ್ಮಿಕರಿಗೆ ನೀಡಲಾಯಿತು.

ಕಸ ಸಂಗ್ರಹ ವಾಹನಗಳನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಸಂಸದ ಬ್ರಿಜೇಶ್ ಚೌಟ, ವಿದ್ಯುತ್ ಚಾಲಿತ ವಾಹನ ಸ್ವಚ್ಛ ಮಂಗಳೂರಿನ ಜತೆಗೆ ಹಸಿರು ಮಂಗಳೂರು ಪರಿಕಲ್ಪನೆ ಸಾಕಾರಕ್ಕೆ ಪೂರಕವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಕಲ್ಪನೆಯ ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ ಯೋಜನೆಯಂತೆ ಪ್ರಗ್ಯಾ ಆಟೋಮೊಬೈಲ್ಸ್ ಕಸ ಸಂಗ್ರಹ ವಾಹನ ಒದಗಿಸಿದೆ ಎಂದರು.

ಶಾಸಕ ವೇದವ್ಯಾಸ ಕಾಮತ್ ಮಾತನಾಡಿ, ಕಸ ಸಂಗ್ರಹಕ್ಕೆ ಇಲೆಕ್ಟ್ರಿಕ್ ಚಾಲಿತ ವಾಹನಗಳ ಬಳಕೆ ರಾಜ್ಯದಲ್ಲೇ ವಿನೂತನ ಯೋಜನೆಯಾಗಿದೆ. ಮೊದಲ ಹಂತದಲ್ಲಿ ಮಂಗಳೂರು ಮಹಾನಗರ ಪಾಲಿಕೆಗೆ 24 ವಾಹನಗಳು ಬಂದಿವೆ. ಈ ವಾಹನಗಳನ್ನು ಒಮ್ಮೆ ಚಾರ್ಜ್ ಮಾಡಿದರೆ 90 ಕಿ.ಮೀ. ಕ್ರಮಿಸಬಹುದು. ಒಮ್ಮೆಗೆ 300 ಕೆಜಿ ಒಣ ಅಥವಾ ಹಸಿ ಕಸ ಸಂಗ್ರಹ ಸಾಧ್ಯ ಎಂದರು.

ಅಧ್ಯಕ್ಷತೆ ವಹಿಸಿದ್ದ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಮಾತನಾಡಿ, ಮಾಲಿನ್ಯರಹಿತ ವಾಹನಗಳನ್ನು ಕಸ ಸಂಗ್ರಹಕ್ಕೆ ಬಳಸುವ ಮೂಲಕ ಮಂಗಳೂರು ಮಹಾನಗರ ಪಾಲಿಕೆ ದಿಟ್ಟ ಹೆಜ್ಜೆ ಇಟ್ಟಿದೆ. ಕೇಂದ್ರ, ರಾಜ್ಯ ಮತ್ತು ಮನಪಾ ಅನುದಾನದಿಂದ ಬ್ಯಾಟರಿ ಚಾಲಿತ ಆಟೋ ಖರೀದಿಸಲಾಗಿದೆ. ಟೆಂಡರ್ ಪಡೆದುಕೊಂಡ ಪ್ರಗ್ಯಾ ಆಟೋಮೊಬೈಲ್ಸ್ ಉತ್ತಮ ವಾಹನಗಳನ್ನು ಒದಗಿಸಿದೆ. ಈ ಆಟೋ ಗಂಟೆಗೆ 25 ಕಿ.ಮೀ. ಚಲಿಸುತ್ತದೆ. ಸದ್ಯಕ್ಕೆ ಮೂರು ವಾರ್ಡ್ಗಳಿಗೆ ಒಂದರಂತೆ ಓಣಿ ಇರುವ ಪ್ರದೇಶಗಳಲ್ಲಿ ಹಸಿ, ಒಣ ಕಸ ಸಂಗ್ರಹಕ್ಕೆ ಈ ವಾಹನಗಳನ್ನು ಬಳಸಲಾಗುವುದು. ಕಿ.ಮೀ.ಗೆ 40 ಪೈಸೆ ಮಾತ್ರ ವೆಚ್ಚವಾಗುತ್ತದೆ. ಮಾಲಿನ್ಯ ರಹಿತ ಮಂಗಳೂರು ಹಾಗೂ ಸ್ವಚ್ಛತೆಯಲ್ಲಿ ಮಂಗಳೂರನ್ನು ನಂ.1 ಮಾಡುವುದು ನಮ್ಮ ಗುರಿಯಾಗಿದೆ ಎಂದರು.

ಈ ವೇಳೆ ಪೌರಕಾರ್ಮಿಕರಿಗೆ ಸಮವಸ್ತ್ರ ವಿತರಿಸಲಾಯಿತು. ಉಚಿತ ವೈದ್ಯಕೀಯ ತಪಾಸಣೆ ಶಿಬಿರ ಆಯೋಜಿಸಲಾಗಿತ್ತು

ಶಾಸಕ ಡಾ.ವೈ. ಭರತ್ ಶೆಟ್ಟಿ, ಉಪ ಮೇಯರ್ ಸುನೀತಾ, ಮನಪಾ ಸ್ಥಾಯಿ ಸಮಿತಿ ಅಧ್ಯಕ್ಷರಾದ ಭರತ್‌ಕುಮಾರ್, ಗಣೇಶ್ ಕುಲಾಲ್, ಲೋಹಿತ್ ಅಮೀನ್, ವರುಣ್ ಚೌಟ, ಪ್ರತಿಪಕ್ಷ ನಾಯಕ ಪ್ರವೀಣ್ ಚಂದ್ರ ಆಳ್ವ, ಸ್ಥಳೀಯ ಕಾರ್ಪೋರೇಟರ್ ದಿವಾಕರ ಪಾಂಡೇಶ್ವರ, ಆರೋಗ್ಯಾಧಿಕಾರಿ ಡಾ. ಮಂಜಯ್ಯ ಶೆಟ್ಟಿ, ಪ್ರಗ್ಯಾ ಆಟೋಮೊಬೈಲ್ಸ್ ವ್ಯವಸ್ಥಾಪಕ ನಿರ್ದೇಶಕ ಆದಿತ್ಯ ಸುರಾನ ಉಪಸ್ಥಿತರಿದ್ದರು.

ಮಹಾನಗರ ಪಾಲಿಕೆ ಸಚೇತಕ ಪ್ರೇಮಾನಂದ ಶೆಟ್ಟಿ ಸ್ವಾಗತಿಸಿದರು. ಮಂಜುಳಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Related posts

ಸಿಬ್ಬಂದಿಗಳಿಗೆ ಝೂನೋಟಿಕ್ ರೋಗಗಳ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕುರಿತ ತರಬೇತಿ ಸಾಧನಗಳನ್ನು ಪ್ರಾರಂಭಿಸಿದ ಪ್ರಸನ್ನ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್

ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಉಡುಪಿ ಜಿಲ್ಲೆಯ ಪ್ರತಿಭಾವಂತ ವಿದ್ಯಾರ್ಥಿ ದೀಪೇಶ್ ದೀಪಕ್ ಶೆಣೈ ದ್ವಿತೀಯ

ಪ್ರೊಡಕ್ಷನ್ ನಂಬರ್ 1 ತುಳು ಸಿನಿಮಾದ ಭಾಗ 1ರ ಮುಹೂರ್ತ ಸಮಾರಂಭ