ಮನೆಯಲ್ಲಿ ಕುಳಿತು ಹಣ ಸಂಪಾದಿಸಿ ಕರೆ ನಂಬಿ 12.15ಲಕ್ಷ ರೂ. ಕಳೆದುಕೊಂಡ ವ್ಯಕ್ತಿ

ಮಂಗಳೂರು : ಮನೆಯಲ್ಲೇ ಕುಳಿತು ದಿನಕ್ಕೆ 2-3 ಸಾವಿರ ರೂ. ಸಂಪಾದಿಸಬಹುದು ಎಂದು ಬಂದ ಕರೆಯನ್ನು ನಂಬಿ ವ್ಯಕ್ತಿಯೊಬ್ಬರು 12,15,012 ರೂ. ಕಳೆದುಕೊಂಡಿರುವ ಕುರಿತಂತೆ ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದೂರುದಾರರಿಗೆ ಮಾ.30ರಂದು ಕರೆ ಬಂದಿದ್ದು, ಕರೆ ಮಾಡಿದಾಕೆ ಪ್ರೀತಿ ಶರ್ಮಾ ಎಂದು ಪರಿಚಯಿಸಿಕೊಂಡು ದಿನಕ್ಕೆ 2-3 ಸಾವಿರ ರೂ. ಸಂಪಾದನೆ ಮಾಡಲು ಅವಕಾಶವಿದೆ. ಡಾಟಾ ಕ್ಲಿಕ್‌ ಎಂಬ ಸಂಸ್ಥೆಯಿಂದ ಈ ಕೆಲಸವನ್ನು ಮಾಡುವುದಾಗಿ ಹಾಗೂ ಇದು ಯೂನೋ ಕಾಯಿನ್‌ ಟೆಕ್ನಾಲಜಿ ಎಂಬ ಸಂಸ್ಥೆಯ ಸಹ ಸಂಸ್ಥೆ ಎಂದು ತಿಳಿಸಿದ್ದಾಳೆ. ಬಳಿಕ ಅವರ ಮೊಬೈಲ್‌ ಸಂಖ್ಯೆಯಲ್ಲಿ ಓಯಾಸಿಸ್‌ ಫೈನಾನ್ಸ್‌ ಅಫೀಶಿಯಲ್‌ 1 ಎನ್ನುವ ಟೆಲಿಗ್ರಾಮ್‌ ಗ್ರೂಪ್‌ಗೆ ಸೇರಿಸಿದ್ದಾಳೆ. ಬಳಿಕ ರಾಹುಲ್‌ ಎಂಬಾತ ಮೊದಲ ಹಂತದಲ್ಲಿ ಕೇವಲ ಸ್ಕ್ರೀನ್‌ ಶಾಟ್‌ ತೆಗೆದು ಕಳುಹಿಸಿದರೆ ಪ್ರತಿಯೊಂದಕ್ಕೆ 50 ರೂ. ನೀಡುವುದಾಗಿ ತಿಳಿಸಿದ್ದಾನೆ. ಅದರಂತೆ 1,500 ರೂ.ವನ್ನು ಖಾತೆಗೆ ಜಮಾ ಮಾಡಿದ್ದಾನೆ. ಟ್ರೇಡಿಂಗ್‌ ಮಾಡಿದರೆ ಶೇ.30ರಷ್ಟು ಲಾಭ ಸಿಗುತ್ತದೆ ಎಂದು ನಂಬಿಸಿದ್ದಾನೆ.

ಆತ ಹೇಳಿದಂತೆ ಎ.1ರಿಂದ 19ರ ವರೆಗೆ ಹಂತವಾಗಿ ಹಣವನ್ನು ವರ್ಗಾಯಿಸಿದ್ದಾರೆ. ಹಾಕಿದ ಹಣವು ಟ್ರೇಡಿಂಗ್‌ ಆಗಿ ಸುಮಾರು 13 ಲಕ್ಷ ರೂ. ತೋರಿಸಿದ್ದು, ಈ ಹಣವನ್ನು ಹಿಂಪಡೆಯಲು ಯತ್ನಿಸಿದಾಗ ಕ್ರೆಡಿಟ್‌ ಸ್ಕೋರ್‌ 100ಕ್ಕಿಂತ ಕಡಿಮೆ ಇದೆ ಅದಕ್ಕಾಗಿ 3.70 ಲಕ್ಷ ರೂ. ಹಣವನ್ನು ಹೆಚ್ಚುವರಿಯಾಗಿ ಪಾವತಿಸಬೇಕು ಎಂದು ತಿಳಿಸಿದ್ದಾನೆ.

ಆಗ ತಾನು ಮೋಸ ಹೋಗಿರುವುದು ಅರಿವಾಗಿದ್ದು, ಈ ಬಗ್ಗೆ ಸೈಬರ್‌ ಸಹಾಯವಾಣಿ ಸಂಖ್ಯೆಗೆ ದೂರು ನೀಡಿದ್ದಾರೆ. ಮೋಸ ಮಾಡಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

Related posts

ಮಂಗಳೂರು ವಿವಿಯಿಂದ ಯಕ್ಷ ಮಂಗಳ ಪ್ರಶಸ್ತಿ ಪ್ರದಾನ

National Fame Award of India Books of Award – Sushanth Brahmavar

ಯಕ್ಷಗಾನ ಹಾಸ್ಯಗಾರ ಮುಖ್ಯಪ್ರಾಣ ಕಿನ್ನಿಗೋಳಿ ನಿಧನಕ್ಕೆ ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಸಂತಾಪ