ಮಾಹೆಯ ಎರಡು ಸಾಕ್ಷ್ಯಚಿತ್ರಗಳು ಅಂತಾರಾಷ್ಟ್ರೀಯ ಜಾನಪದ ಚಿತ್ರೋತ್ಸವಕ್ಕೆ ಆಯ್ಕೆ

ಮಣಿಪಾಲ : ಮಣಿಪಾಲ್‌ ಅಕಾಡೆಮಿ ಆಫ್‌ ಹೈಯರ್‌ ಎಜುಕೇಶನ್‌ [ಮಾಹೆ]ನ ಎರಡು ಸಾಕ್ಷ್ಯ ಚಿತ್ರಗಳು ಕೇರಳದ ತ್ರಿಶೂರಿನ ಅಂತಾರಾಷ್ಟ್ರೀಯ ಜಾನಪದ ಚಿತ್ರೋತ್ಸವದ 8ನೆಯ ಆವೃತ್ತಿಗೆ ಅಧಿಕೃತವಾಗಿ ಆಯ್ಕೆಯಾಗುವುದರೊಂದಿಗೆ ಸಂಸ್ಥೆಯ ಮಕುಟಕ್ಕೆ ಮತ್ತೊಂದು ಗರಿ ಸೇರಿಕೊಂಡಿದೆ.

ಐಎಫ್‌ಎಫ್‌ಎಫ್‌ ಪ್ರತಿಷ್ಠಿತ ಜಾಗತಿಕ ಕಾರ್ಯಕ್ರಮವಾಗಿದ್ದು ಅದು ಸಿನೆಮಾದ ಮೂಲಕ ಜಾನಪದ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಸಂಭ್ರಮಿಸುವ ಉತ್ಸವವಾಗಿದೆ. ಈ ಸಲದ ಚಿತ್ರೋತ್ಸವಕ್ಕೆ ಜಗತ್ತಿನಾದ್ಯಂತ ಸುಮಾರು 800 ಚಿತ್ರಗಳು ಪ್ರವೇಶ ಬಯಸಿದ್ದು, ಈ ವರ್ಷ ಜಾನಪದ-ಆಧಾರಿತ ಕಥಾನಿರೂಪಣೆಯ ಸಮೃದ್ಧ ವೈವಿಧ್ಯವಿರುವ ಸುಮಾರು 200 ಚಿತ್ರಗಳನ್ನು ಪ್ರದರ್ಶನಕ್ಕೆ ಆಯ್ಕೆ ಮಾಡಲಾಗಿದೆ.

2025 ಜನವರಿ 10 ರಿಂದ 15ರ ನಡುವೆ ಮಾಹೆಯ ಸಾಕ್ಷ್ಯಚಿತ್ರಗಳು ಪ್ರದರ್ಶನಗೊಳ್ಳುತ್ತಿರುವುದು ಅಭಿಮಾನದ ಸಂಗತಿಯಾಗಿದೆ. ಈ ಚಿತ್ರೋತ್ಸವವನ್ನು ತ್ರಿಶೂರಿನ ಅಂತಾರಾಷ್ಟ್ರೀಯ ಚಿತ್ರೋತ್ಸವ, ಭೌಮನ್‌ ಸೋಶಿಯಲ್‌ ಇನೀಶಿಯೇಟಿವ್‌, ತ್ರಿಶೂರಿನ ಸೆಂಟ್‌ ಥಾಮಸ್‌ ಕಾಲೇಜಿನ ಸೆಂಟರ್‌ ಫಾರ್‌ ಮೀಡಿಯಾ ಸ್ಟಡೀಸ್‌ ಮತ್ತು ಇಂಟರ್‌ನ್ಯಾಶನಲ್‌ ಫೋಕ್‌ ಫಿಲ್ಮ್ಸ್‌ ಇಂಡಿಯಾ ಆಯೋಜಿಸುತ್ತಿವೆ.
ಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳಲು ಆಯ್ಕೆಯಾದ ‘ಪಿಲಿವೇಷ ಆಫ್‌ ತುಳುನಾಡು’ ಮತ್ತು ‘ಸತ್ಯೊದ ಸಿರಿ : ಎ ವುಮನ್ಸ್‌ ಟೇಲ್‌’ ಸಾಕ್ಷ್ಯಚಿತ್ರಗಳು ಪ್ರಾದೇಶಿಕವಾದ ಜೀವಂತಿಕೆಯ ಸಾಂಸ್ಕೃತಿಕ ಪರಂಪರೆಯನ್ನು ಜಾಗತಿಕ ಮಟ್ಟದ ಪ್ರೇಕ್ಷಕರಿಗೆ ತಲುಪಿಸುವ ಮಾಹೆಯ ಬದ್ಧತೆಗೆ ಸಾಕ್ಷಿಗಳಾಗಿವೆ.

Related posts

ಕರ್ನಾಟಕ ಕ್ರೀಡಾಕೂಟದಲ್ಲಿ ಸಮರಾಗೆ ಚಿನ್ನದ ಪದಕ

ಪ್ರಥಮ ಬಾರಿಗೆ ಯಕ್ಷ ರಂಗದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ

ಯಕ್ಷಗಾನ ಪ್ರದರ್ಶನಕ್ಕೆ ಅಡ್ಡಿ – ಬ್ರಿಟಿಷ್ ಆಡಳಿತವನ್ನೂ ಮೀರಿಸಿದ ಸಿದ್ಧರಾಮಯ್ಯ ಸರ್ಕಾರ : ಯಶ್‌ಪಾಲ್ ಸುವರ್ಣ