ವಿವಿಧ ಉಪಕ್ರಮಗಳ ಉದ್ಘಾಟನೆಯೊಂದಿಗೆ ಮಾಹೆ ಆರೋಗ್ಯ ವಿಜ್ಞಾನ ಸಂಶೋಧನ ದಿನ ಸಂಪನ್ನ

ಮಣಿಪಾಲ : ಮಣಿಪಾಲ್‌ ಅಕಾಡೆಮಿ ಆಫ್‌ ಹೈಯರ್‌ ಎಜುಕೇಶನ್‌ನಲ್ಲಿ ‘ಮಾಹೆ ಆರೋಗ್ಯ ವಿಜ್ಞಾನ ಸಂಶೋಧನ ದಿನ 2024’ ಕಾರ್ಯಕ್ರಮವು ಇಂದು ಇಂಟರಾಕ್ಟ್ ಕೆಎಂಸಿ ಲೆಕ್ಚರ್‌ ಹಾಲ್ಸ್‌ನಲ್ಲಿ ಆಯೋಜನೆಗೊಂಡಿದ್ದು ಮಾಹೆಯ ಸಹ-ಕುಲಾಧಿಪತಿ ಡಾ. ಎಚ್‌. ಎಸ್‌. ಬಲ್ಲಾಳ್‌ ಅವರು ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಇದಕ್ಕೆ ಸಂಬಂಧಿಸಿ ಐದು ಪ್ರಮುಖ ಸಂಶೋಧನ ಉತ್ತೇಜಕ ಕಾರ್ಯಕ್ರಮಗಳ ಉದ್ಘಾಟನೆಯೂ ನಡೆದಿದ್ದು, ಅವುಗಳೆಂದರೆ, ‘ಕಿರಿಯರಿಗೆ ಪ್ರೇರಣೆ (ಇನ್‌ಸ್ಪಾಯರ್ ಜೂನಿಯರ್‌], ಅಧ್ಯಯನಾಕಾಂಕ್ಷಿಗಳಿಗೆ ಸ್ಫೂರ್ತಿ [ಇನ್‌ಸ್ಪಾಯರ್‌ ಲರ್ನರ್‌], ವೃತ್ತಿಪರರಿಗೆ ಉತ್ತೇಜನ [ಇನ್‌ಸ್ಪಾಯರ್‌ ಪ್ರೊಫೆಶನಲ್‌], ಆರೋಗ್ಯವಿಜ್ಞಾನದಲ್ಲಿ ಸಂಶೋಧನ ಸಹಭಾಗಿತ್ವ [ಕೊಲ್ಯಾಬೊರೇಟ್‌ ಹೆಲ್ತ್‌ ರಿಸರ್ಚ್‌ ಎಕ್ಸಫೊ], ಸಂಶೋಧನ ಸಂಪನ್ಮೂಲಗಳನ್ನು ಲಭ್ಯತೆಯನ್ನು ಹೆಚ್ಚಿಸುವುದು [ಎನ್‌ರಿಚ್‌ ಆಕ್ಸೆಸ್‌ ಟು ರೀಸರ್ಚ್‌ ರಿಸೋರ್ಸಸ್‌];ಈ ಕಾರ್ಯಕ್ರಮಗಳಲ್ಲಿ ಉಡುಪಿ ಮತ್ತು ದಕ್ಷಿಣಕನ್ನಡ ಜಿಲ್ಲೆಗಳ ಸುಮಾರು 5000 ವಿದ್ಯಾರ್ಥಿಗಳು ಸಕ್ರಿಯವಾಗಿ ಪಾಲ್ಗೊಂಡರು.

‘ಕಿರಿಯರಿಗೆ ಪ್ರೇರಣೆ’ ಕಾರ್ಯಕ್ರಮವು 8ನೆಯ ತರಗತಿಯಿಂದ 12ನೆಯ ತರಗತಿಯವರೆಗಿನ ವಿದ್ಯಾರ್ಥಿಗಳತ್ತ ಕೇಂದ್ರೀಕೃತವಾಗಿದ್ದು, ವಿವಿಧ ಪ್ರಯೋಗಾಲಯಗಳಿಗೆ ಮಾರ್ಗದರ್ಶಿಗೆ ಪ್ರವಾಸ, ಜೈವಿಕ ಮಾದರಿಗಳ ವೀಕ್ಷಣೆ, ಉಪಕರಣಗಳು, ಪ್ರದರ್ಶಕಗಳು, ಆರೋಗ್ಯ ವಿಜ್ಞಾನ ಕ್ಷೇತ್ರದ ಪ್ರಯೋಗಗಳು-ವಿವಿಧ ವಿಷಯಗಳನ್ನು ಒಳಗೊಂಡಿದೆ. ಇದು ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಧರ್ಮ ಮತ್ತು ಆಯಾ ಕ್ಷೇತ್ರಗಳಲ್ಲಿ ಸಕ್ರಿಯವಾಗಲು ಪ್ರೇರೇಪಿಸುತ್ತದೆ.

ಡಾ. ಎಚ್‌. ಎಸ್‌. ಬಲ್ಲಾಳ್‌ ಅವರು ತಮ್ಮ ಉದ್ಘಾಟನಾ ಭಾಷಣದಲ್ಲಿ ಯುವ ಮನಸ್ಸುಗಳನ್ನು ಸಂಶೋಧನೆಯತ್ತ ಪ್ರೇರೇಪಿಸುವ ಮತ್ತು ವಿಜ್ಞಾನ ಹಾಗೂ ಸಂಶೋಧನ ಕ್ಷೇತ್ರಗಳಲ್ಲಿ ಅವಕಾಶವನ್ನು ಅರಸುವಂತೆ ಉತ್ತೇಜಿಸುವ ಅಗತ್ಯವನ್ನು ಒತ್ತಿಹೇಳಿದರು. “ಯುವ ವಿದ್ಯಾರ್ಥಿಗಳನ್ನು ವೈಜ್ಞಾನಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಮತ್ತು ಅತ್ಯಾಧುನಿಕ ಸಂಶೋಧನೆಗೆ ಒಡ್ಡಿಕೊಳ್ಳುವ ಮೂಲಕ, ನಾವು ಮುಂದಿನ ಪೀಳಿಗೆಯ ಆರೋಗ್ಯ ವೃತ್ತಿಪರರು ಮತ್ತು ಸಂಶೋಧಕರಿಗೆ ಅಡಿಪಾಯ ಹಾಕುತ್ತಿದ್ದೇವೆ. ಆರೋಗ್ಯ ಆರೈಕೆ ಮತ್ತು ವಿಜ್ಞಾನ ಕ್ಷೇತ್ರದ ಸುಧಾರಣೆಗಳ ಭವಿಷ್ಯವನ್ನು ರೂಪಿಸುವಲ್ಲಿ ‘ಕಿರಿಯರಿಗೆ ಪ್ರೇರಣೆ’ ಕಾರ್ಯಕ್ರಮವು ಪ್ರಧಾನ ಪಾತ್ರವನ್ನು ವಹಿಸುತ್ತದೆ. ಇಂತಹ ಕಾರ್ಯಕ್ರಮಗಳ ಮೂಲಕ ಆರೋಗ್ಯ ಆರೈಕೆ ಕ್ಷೇತ್ರದಲ್ಲಿ ವೃತ್ತಿಪರರ ಮತ್ತು ಸಂಶೋಧಕರ ಪೀಳಿಗೆಯನ್ನು ಬೆಳೆಸಬಹುದು. ಇದು ರಾಷ್ಟ್ರದ ಭವಿಷ್ಯಕ್ಕೆ ನೀಡುವ ಕೊಡುಗೆಯೂ ಹೌದು ಎಂದರು.
ಡಾ. ಬಲ್ಲಾಳ್‌ ಅವರು ಮಾಹೆಯ ಆರೋಗ್ಯ ವಿಜ್ಞಾನಗಳ ಹಂಶೋಧನ ದಿನದ ಮಹತ್ತ್ವವನ್ನು ಎತ್ತಿಹಿಡಿಯುತ್ತ, ‘ಇದು ಅಂತರ್‌ಶಿಸ್ತೀಯ ಸಹಭಾಗಿತ್ವವನ್ನು ಮತ್ತು ಸಂಶೋಧನೆಯ ಮೂಲಭೂತ ಆಕರಗಳ ಲಭ್ಯತೆಯನ್ನು ಹೆಚ್ಚಿಸಲಿದೆ. ಒಟ್ಟಾರೆಯಾಗಿ ಈ ಎಲ್ಲ ಉಪಕ್ರಮಗಳು ಆರೋಗ್ಯ ವಿಜ್ಞಾನ ಕ್ಷೇತ್ರದಲ್ಲಿ ಸಂಶೋಧನೆ ಮತ್ತು ನಾವೀನ್ಯಕ್ಕೆ ಅವಕಾಶ ನೀಡುವ ವಾತಾವರಣವನ್ನು ಸೃಷ್ಟಿಸಲಿವೆ’ ಎಂಬ ಆಶಯವನ್ನು ಅವರು ವ್ಯಕ್ತಪಡಿಸಿದರು.

‘ಅಧ್ಯಯನಾಕಾಂಕ್ಷಿಗಳಿಗೆ ಸ್ಫೂರ್ತಿ’ ಕಾರ್ಯಕ್ರಮವನ್ನು ಮಾಹೆಯ ಆರೋಗ್ಯವಿಜ್ಞಾನ ವಿಭಾಗದ ಸಹಕುಲಪತಿಗಳಾದ ಡಾ. ಶರತ್‌ ರಾವ್‌ ಮತ್ತು ಮಾಹೆಯ ಯೋಜನಾವಿಭಾಗದ ನಿರ್ದೇಶಕ, ನಿಯೋಜಿತ ಮುಖ್ಯ ನಿರ್ವಹಣಾಧಿಕಾರಿ ಡಾ. ರವಿರಾಜ್‌ ಎನ್‌. ಎಸ್‌. ಉದ್ಘಾಟಿಸಿ, ವಿದ್ಯಾರ್ಥಿಗಳಲ್ಲಿ ಸಂಶೋಧನ ಕೌಶಲವನ್ನು ಹೆಚ್ಚಿಸುವ ಅಗತ್ಯದ ಕುರಿತು ಗಮನ ಸೆಳೆದರು.

ಮಾಹೆಯ ಸಂಶೋಧನ ನಿರ್ದೇಶನಾಲಯದ ನಿರ್ದೇಶಕ ಡಾ. ಬಿ.ಎಸ್‌. ಸತೀಶ ರಾವ್ ಮತ್ತು ಸಾಂಸ್ಥಿಕ ಸಂಪರ್ಕ (ಕಾರ್ಪೊರೇಟ್‌ ರಿಲೇಶನ್ಸ್‌) ವಿಭಾಗದ ನಿರ್ದೇಶಕ ಡಾ. ಹರೀಶ್‌ ಕುಮಾರ್‌ ಎನ್‌. ಎಸ್‌. ಅವರು ‘ವೃತ್ತಿಪರರಿಗೆ ಉತ್ತೇಜನ’ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಕಾರ್ಯಕ್ರಮವು ಆರೋಗ್ಯ ಕ್ಷೇತ್ರ ಸಂಶೋಧನ ಕ್ಷೇತ್ರದ 20 ತಜ್ಞರ ಭಾಷಣ ಮತ್ತು ಸಮಾಲೋಚನೆಯನ್ನು ಒಳಗೊಂಡಿದೆ.
‘ಆರೋಗ್ಯ ಸಂಶೋಧನ ಕ್ಷೇತ್ರದಲ್ಲಿ ಸಹಭಾಗಿತ್ವ’ ಕಾರ್ಯಕ್ರಮವನ್ನು ಮಾಹೆಯ ತಂತ್ರಜ್ಞಾನ ಮತ್ತು ವಿಜ್ಞಾನ ವಿಭಾಗದ ಸಹ-ಕುಲಪತಿಗಳಾದ ಡಾ.ನಾರಾಯಣ ಸಭಾಹಿತ್‌ ಮತ್ತು ಮಣಿಪಾಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜ [ಎಂಐಟಿ] ಯ ನಿರ್ದೇಶಕ ಕ್ಯಾ. [ಡಾ.] ಅನಿಲ್‌ ರಾಣ ಉದ್ಘಾಟಿಸಿದರು; ಈ ಕಾರ್ಯಕ್ರಮವು ಅತ್ಯಾಧುನಿಕ ಆರೋಗ್ಯ ವಿಜ್ಞಾನ ಕ್ಷೇತ್ರದಲ್ಲಿ ಅಂತರ್‌ಶಿಸ್ತೀಯ ಸಹಭಾಗಿತ್ವವನ್ನು ಪ್ರೋತ್ಸಾಹಿಸಲಿದೆ.
‘ಸಂಶೋಧನ ಸಂಪನ್ಮೂಲಗಳ ಲಭ್ಯತೆಯ ಹೆಚ್ಚಳ’ ಉಪಕ್ರಮವನ್ನು ಮಾಹೆಯ ಕಾರ್ಯತಂತ್ರ ಮತ್ತು ಯೋಜನ ವಿಭಾಗದ ಸಹ-ಉಪಕುಲಪತಿಗಳಾದ ಡಾ. ಎನ್‌. ಎನ್‌. ಶರ್ಮ ಮತ್ತು ಮಾಹೆಯ ಕುಲಸಚಿವ [ರಿಜಿಸ್ಟ್ರಾರ್‌] ಡಾ. ಪಿ. ಗಿರಿಧರ ಕಿಣಿ ಉದ್ಘಾಟಿಸಿದರು.
ಅಧ್ಯಯನಾಕಾಂಕ್ಷಿಗಳನ್ನು ಪ್ರೋತ್ಸಾಹಿಸುವ ‘ಅಧ್ಯಯನಾರ್ಥಿಗಳಿಗೆ ಪ್ರೇರಣೆ’ ಕಾರ್ಯಕ್ರಮವು ಸ್ನಾತಕ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ವಿಶೇಷವಾಗಿ ಪ್ರಯೋಜನಕಾರಿಯಾಗಲಿದೆ. ‘ಸಂಶೋಧನಾ ಸಹಭಾಗಿತ್ವ’ ಕಾರ್ಯಕ್ರಮವು ಸಂಶೋಧನಾರ್ಥಿಗಳಿಗೆ ವಿಚಾರಗಳನ್ನು ವಿನಿಮಯ ಮಾಡಿಕೊಳ್ಳಲು ಮತ್ತು ಪರಸ್ಪರ ಪಾಲ್ಗೊಳ್ಳುವಿಕೆಗೆ ವೇದಿಕೆಯನ್ನು ಒದಗಿಸಲಿದೆ.
ಮಾಹೆ ಮಣಿಪಾಲದ ಆರೋಗ್ಯ ವಿಜ್ಞಾನಗಳ ಸಹ ಕುಲಪತಿ ಡಾ. ಶರತ್ ಕುಮಾರ್ ರಾವ್ ಅವರ ಮಾರ್ಗದರ್ಶನದಲ್ಲಿ ನಡೆದ 2024 ರ ಸಂಪೂರ್ಣ ಮಾಹೆ ಆರೋಗ್ಯ ವಿಜ್ಞಾನ ಸಂಶೋಧನಾ ದಿನವು ಭವ್ಯವಾಗಿ ಯಶಸ್ವಿಯಾಗಿದೆ. ಅವರ ನಾಯಕತ್ವ ಮತ್ತು ದೃಷ್ಟಿ ಆರೋಗ್ಯ ಸಂಶೋಧನೆಯಲ್ಲಿ ಉತ್ಕೃಷ್ಟತೆಯನ್ನು ಹೆಚ್ಚಿಸುವ ಸಹಯೋಗದ ವಾತಾವರಣವನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ.

Related posts

ಕೋಟತಟ್ಟುವಿನಲ್ಲಿ ಹೆಜ್ಜೇನು ದಾಳಿ : ಇಬ್ಬರ ಸ್ಥಿತಿ ಗಂಭೀರ

ಬಾಕಿ ಇರುವ ಮನೆಹಾನಿ, ಬೆಳೆಹಾನಿ ಪರಿಹಾರ ತಕ್ಷಣ ವಿತರಿಸಿ – ಅಧಿಕಾರಿಗಳಿಗೆ ಎಡಿಸಿ ಸೂಚನೆ

ಸಿಬ್ಬಂದಿಗಳಿಗೆ ಝೂನೋಟಿಕ್ ರೋಗಗಳ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕುರಿತ ತರಬೇತಿ ಸಾಧನಗಳನ್ನು ಪ್ರಾರಂಭಿಸಿದ ಪ್ರಸನ್ನ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್