ಮಾಹೆ ಮತ್ತು ಟೀಚ್‌ಸ್ಪೂನ್‌ ಎಡ್‌ಟೆಕ್‌ ಪ್ರೈ. ಲಿ. ಒಡಂಬಡಿಕೆ

ಮಣಿಪಾಲ : ಮಣಿಪಾಲ್‌ ಅಕಾಡೆಮಿ ಆಫ್‌ ಹೈಯರ್‌ ಎಜುಕೇಶನ್‌ [ಮಾಹೆ] ಮತ್ತು ಟೀಚ್‌ಸ್ಪೂನ್‌ ಎಡ್‌ಟೆಕ್‌ ಪ್ರೈ. ಲಿ. ಇತ್ತೀಚೆಗೆ ಪರಸ್ಪರ ಒಪ್ಪಂದ ಪತ್ರಕ್ಕೆ ಸಹಿ ಹಾಕಿದ್ದು ಈ ಸಹಭಾಗಿತ್ವವು ಶೈಕ್ಷಣಿಕ-ಔದ್ಯಮಿಕ ಕ್ಷೇತ್ರಗಳ ಮಹತ್ತ್ವದ ಒಡಂಬಡಿಕೆಯಾಗಿದೆ. ಜಂಟಿ ಕಾರ್ಯತಂತ್ರ ನಿರ್ವಹಣೆಯ ಕುರಿತ ಈ ಸಹಯೋಗವು ಡಿಜಿಟಲ್‌ ಕಲಿಕೆಗೆ ಅವಕಾಶ ನೀಡುವ ಉಪಕ್ರಮಗಳು, ಶಿಕ್ಷಣ ವಿಷಯಕ ಕಾರ್ಯಾಗಾರ ಮತ್ತು ಅಂತರ್ಜಾಲಗೋಷ್ಠಿ [ವೆಬಿನಾರ್‌] ಗಳ ಆಯೋಜನೆ ಮತ್ತು ಜಂಟಿ ಸಂಶೋಧನಾತ್ಮಕ ಚಟುವಟಿಕೆಗಳ ಉತ್ತೇಜನೆ- ಮುಂತಾದವುಗಳತ್ತ ಗಮನ ಹರಿಸಲಿದೆ.

ಈ ಒಪ್ಪಂದ ಪತ್ರಕ್ಕೆ ಮಾಹೆಯ ಕುಲಸಚಿವ [ರಿಜಿಸ್ಟ್ರಾರ್‌] ರಾದ ಡಾ. ಗಿರಿಧರ್‌ ಪಿ. ಕಿಣಿ ಮತ್ತು ಟೀಚ್‌ಸ್ಪೂನ್‌ ಎಡ್‌ಟೆಕ್‌ ಪ್ರೈ. ಲಿ. ನ ಸ್ಥಾಪಕಿ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಪಲಕ್‌ ಭಂಡಾರಿ ಅವರು ಸಹಿಹಾಕಿದರು. ಟೀಚ್‌ಸ್ಪೂನ್‌ ಎಡ್‌ಟೆಕ್‌ ಪ್ರೈ. ಲಿ. ಸಂಸ್ಥೆಯು ಶಿಕ್ಷಣ ಮತ್ತು ಕಲಿಕೆಗೆ ಸಂಬಂಧಿಸಿದ ನವೋದ್ಯಮವಾಗಿದ್ದು ಇದರ ಸ್ಥಾಪಕರಾದ ಡಾ. ಪಲಕ್‌ ಭಂಡಾರಿ ಅವರು ಮಂಗಳೂರಿನ ಮಣಿಪಾಲ್‌ ಕಾಲೇಜ್‌ ಆಫ್‌ ಡೆಂಟಲ್‌ ಸಾಯನ್ಸಸ್‌ [ಎಂಸಿಒಡಿಎಸ್‌] ನ ಹಳೆವಿದ್ಯಾರ್ಥಿಯಾಗಿದ್ದಾರೆ.

ಡಾ. ಗಿರಿಧರ ಕಿಣಿಯವರು, ‘ಮಾಹೆ ಮತ್ತು ಟೀಸ್ಪೂನ್‌ ಎಡ್‌ಟೆಕ್‌ ಪ್ರೈ ಲಿ. ನಡುವಿನ ಈ ಸಹಭಾಗಿತ್ವವು ಜ್ಞಾನ ಮತ್ತು ಅನುಭವವನ್ನು ವಿನಿಮಯ ಮಾಡಿಕೊಳ್ಳುವ ಮಹತ್ತ್ವದ ಪ್ರಯತ್ನವಾಗಿದೆ. ಈ ಒಪ್ಪಂದದ ಮುಖ್ಯ ಆಶಯವು ಡಿಜಿಟಲ್‌ ಕಲಿಕೆಯನ್ನು ವೃದ್ಧಿಪಡಿಸುವುದಾಗಿದೆ. ಈ ಮೂಲಕ ಮಾಹೆಯಲ್ಲಿರುವ ವಿವಿಧ ಕ್ಷೇತ್ರಗಳ ತಜ್ಞರು ತಮ್ಮ ಜ್ಞಾನವನ್ನು ಸಹಭಾಗಿಗಳೊಂದಿಗೆ ಹಂಚಿಕೊಳ್ಳಬಹುದಾಗಿದೆ ಮತ್ತು ಸಮಷ್ಟಿ ಪ್ರಗತಿಯ ಮನೋಭಾವವನ್ನು ಬೆಳೆಸಿಕೊಳ್ಳಬಹುದಾಗಿದೆ’ ಎಂದರು.

ಮಂಗಳೂರಿನ ಮಣಿಪಾಲ್‌ ಕಾಲೇಜ್‌ ಆಫ್‌ ಡೆಂಟಲ್‌ ಸಾಯನ್ಸಸ್‌ [ಎಂಸಿಒಡಿಎಸ್‌] ನ ಡೀನ್‌ ಡಾ. ಅಶಿತಾ ಉಪ್ಪೂರ್‌ ಅವರು ದಂತವೆದ್ಯಕೀಯ ಶಿಕ್ಷಣದಲ್ಲಿ ಶೈಕ್ಷಣಿಕ ಮತ್ತು ಔದ್ಯಮಿಕ ಕ್ಷೇತ್ರಗಳು ಸಹಯಾನ ನಡೆಸುವುದರ ಪ್ರಾಮುಖ್ಯವನ್ನು ವಿವರಿಸಿದರು. ಪ್ರಸ್ತುತ ಒಡಂಬಡಿಕೆಯು ಭವಿಷ್ಯದ ಶಿಕ್ಷಣ ಕ್ಷೇತ್ರಕ್ಕೆ ಪ್ರಯೋಜನಕಾರಿಯಾಗಲಿದೆ ಎಂಬ ಆಶಾವಾದವನ್ನು ಅವರು ವ್ಯಕ್ತಪಡಿಸಿದರು.
ಟೀಚ್‌ಸ್ಪೂನ್‌ ಎಡ್‌ಟೆಕ್‌ ಪ್ರೆ ಲಿ. ನ ಸ್ಥಾಪಕಿ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿರುವ ಡಾ. ಪಲಕ್‌ ಭಂಡಾರಿ ಅವರು ಮಾಹೆಯೊಂದಿಗೆ ತಮ್ಮ ಸಂಸ್ಥೆ ಸಹಭಾಗಿತ್ವ ಹೊಂದಿರುವ ಬಗ್ಗೆ ಅಭಿಮಾನ ವ್ಯಕ್ತಪಡಿಸಿದರು. ಡಿಜಿಟಲ್‌ ಕಲಿಕೆಯನ್ನು ಬೆಳೆಸುವುದು ಮತ್ತು ಉತ್ತೇಜಿಸುವ ಪ್ರಯತ್ನದಲ್ಲಿ ಎರಡೂ ಸಂಸ್ಥೆಗಳು ಕೈಜೋಡಿಸಲಿವೆ. ಅತ್ಯುತ್ತಮ ಗುಣಮಟ್ಟದ ಕಾರ್ಯಾಗಾರ ಮತ್ತು ವಿಜಾರಗೋಷ್ಠಿಗಳನ್ನು ಆಯೋಜಿಸಿ ಅಭಿವೃದ್ದಿ ಹೊಂದುತ್ತಿರುವ ಡಿಜಿಟಲ್‌ ಶಿಕ್ಷಣ ಕ್ಷೇತ್ರಕ್ಕೆ ಮಹತ್ತ್ವದ ಕೊಡುಗೆಗಳನ್ನು ನೀಡಲಿವೆ’ ಎಂದರು.

ಸಾಂಸ್ಥೀಯ ಸಂಬಂಧಗಳ ವಿಭಾಗ [ಕಾರ್ಪೊರೇಟ್‌ ರಿಲೇಶನ್ಸ್‌]ದ ನಿರ್ದೇಶಕ ಡಾ. ಹರೀಶ್‌ ಕುಮಾರ್‌ ಎಸ್‌. ಅತಿಥಿಗಳನ್ನು ಸ್ವಾಗತಿಸಿದರು. ಟೀಚ್‌ ಸ್ಪೂನ್‌ ಪ್ರೈ. ಲಿ. ನ ಸಾಮಗ್ರಿ ಸಿದ್ಧತಾ ವಿಭಾಗ [ಕಂಟೆಂಟ್‌ ಪ್ರೊಡಕ್ಷನ್‌] ವಿಭಾಗದ ಮುಖ್ಯಸ್ಥರಾದ ಡಾ. ಚಾಂದಿನಿ ಪಿಂಟೊ ಉಪಸ್ಥಿತರಿದ್ದರು.

Related posts

ಕರ್ನಾಟಕ ಕ್ರೀಡಾಕೂಟದಲ್ಲಿ ಸಮರಾಗೆ ಚಿನ್ನದ ಪದಕ

ಯಕ್ಷಗಾನ ಪ್ರದರ್ಶನಕ್ಕೆ ಅಡ್ಡಿ – ಬ್ರಿಟಿಷ್ ಆಡಳಿತವನ್ನೂ ಮೀರಿಸಿದ ಸಿದ್ಧರಾಮಯ್ಯ ಸರ್ಕಾರ : ಯಶ್‌ಪಾಲ್ ಸುವರ್ಣ

ಮಾರಿದ ಹಳೆಯ ಬಸ್ಸನ್ನು ಕದ್ದು ತಂದ ಆರೋಪ – ತಂದೆ ಮಗನ ವಿರುದ್ಧ ದೂರು ದಾಖಲು !