ಬೇರೊಬ್ಬನ ಜೊತೆ ಮದುವೆಗೆ ಮುಂದಾದ ಪ್ರೇಯಸಿಯ ಕೊಲೆ ಮಾಡಿದ ಪ್ರಿಯತಮನಿಗೆ ಜೀವಾವಧಿ ಶಿಕ್ಷೆ

ಮಂಗಳೂರು : ಬೇರೆ ವ್ಯಕ್ತಿಯನ್ನು ಮದುವೆ ಆಗಲು ಸಿದ್ದವಾಗಿದ್ದ ತನ್ನ ಪ್ರೇಯಸಿಯ ಕೊಲೆ ಪ್ರಕರಣದಲ್ಲಿ ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ರಾಂಪೂರದ ಬೆನೆಕಟ್ಟಿ ತಾಂಡಾದ ಸಂದೀಪ್ ರಾಥೋಡ್ (23)ಗೆ ಮಂಗಳೂರಿನ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಜೀವಾವಧಿ ಶಿಕ್ಷೆ ಹಾಗೂ ರೂ 25 ಸಾವಿರ ದಂಡ ವಿಧಿಸಿದೆ.

ಅಪರಾಧಿಯು ದಂಡ ಪಾವತಿಸಲು ತಪ್ಪಿದರೆ ಮತ್ತೆ 3 ತಿಂಗಳ ಸಾದಾ ಸಜೆ ಅನುಭವಿಸಬೇಕು. ಕೊಲೆ ನಡೆಸಿದ ಮನೆಯಿಂದ ಕಳವು ನಡೆಸಿದ್ದಕ್ಕೆ ಮತ್ತೆ ಮೂರು ತಿಂಗಳು ಸಜೆ ಮತ್ತು ರೂ 1 ಸಾವಿರ ದಂಡ ವಿಧಿಸಲಾಗಿದೆ. ಈ ದಂಡವನ್ನು ಪಾವತಿಸಲು ವಿಫಲವಾದರೆ 15 ದಿನಗಳ ಸಾದಾ ಸಜೆ ಅನುಭವಿಸಬೇಕು. ಯುವತಿಯ ಹಣವನ್ನು ಸ್ವಂತಕ್ಕೆ ಬಳಸಿಕೊಂಡಿದ್ದಕ್ಕೆ ಮೂರು ತಿಂಗಳು ಸಜೆ ಮತ್ತು ರೂ 500 ದಂಡ ವಿಧಿಸಲಾಗಿದೆ. ಈ ದಂಡವನ್ನು ಪಾವತಿಸಲು ತಪ್ಪಿದರೆ ಅಪರಾಧಿಯು ಮತ್ತೆ 15 ದಿನಗಳ ಸಾದಾ ಸಜೆ ಅನುಭವಿಸಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ರವೀಂದ್ರ ಎಮ್. ಜೋಶಿ ಅವರು ತೀರ್ಪಿನಲ್ಲಿ ತಿಳಿಸಿದ್ದಾರೆ.

ಸಂತ್ರಸ್ತ ಯುವತಿಯ ಪರಿಹಾರ ಯೋಜನೆ ಅಡಿಯಲ್ಲಿ ಕಾನೂನು ಸೇವಾ ಪ್ರಾಧಿಕಾರದ ವತಿಯಿಂದ ಆಕೆಯ ಮನೆಯವರಿಗೆ ಪರಿಹಾರ ನೀಡಬೇಕೆಂದು ನಿರ್ದೇಶನ ನೀಡಲಾಗಿದೆ.

‘ಸಂದೀಪ್ ರಾಥೋಡ್ಗೆ 2018ರ ಜುಲೈನಲ್ಲಿ ಅಂಜನಾ ವಸಿಷ್ಠ ಎಂಬುವರು ಪರಿಚಯವಾಗಿದ್ದರು. ಆಕೆ ಉಜಿರೆಯಲ್ಲಿ ಹಾಸ್ಟೆಲ್‌ನಲ್ಲಿ ಇದ್ದುಕೊಂಡು ಎಂ.ಎಸ್ಸಿ ವ್ಯಾಸಂಗ ಮಾಡುತ್ತಿದ್ದರು. ನಂತರ ಅವರಿಬ್ಬರು ಪರಸ್ಪರ ಪ್ರೀತಿಸಿದ್ದರು. ಸಂದೀಪ್‌ಗೆ ಉದ್ಯೋಗ ಸಿಕ್ಕಿದ ಬಳಿಕ ವಿವಾಹವಾಗಲು ನಿರ್ಧರಿಸಿದ್ದರು. ಸಂದೀಪ್ ಪೊಲೀಸ್ ಸಬ್‌ಇನ್ಸ್ಪೆಕ್ಟರ್ ನೇಮಕಾತಿ ಪರೀಕ್ಷೆಗೆ ತಯಾರಿ ನಡೆಸಲು ನಗರದ ಹಂಪನಕಟ್ಟೆಯ ರಾಯಲ್ ಕೋಚಿಂಗ್ ಸೆಂಟರ್‌ನಲ್ಲಿ 2019ರ ಜೂನ್ 1ರಂದು ಹೆಸರು ನೋಂದಾಯಿಸಿದ್ದ. ತರಬೇತಿ ವೇಳೆ ಉಳಿದುಕೊಳ್ಳಲು ನಗರದ ಅತ್ತಾವರದಲ್ಲಿ ಕೊಠಡಿಯನ್ನು ತಿಂಗಳಿಗೆ ರೂ 2,500ರಂತೆ ಬಾಡಿಗೆಗೆ ಪಡೆದಿದ್ದ. ಈ ವೇಳೆ ತಮ್ಮನ್ನು ಗಂಡ–ಹೆಂಡತಿ ಎಂದು ಪರಿಚಯಿಸಿಕೊಂಡಿದ್ದರು. ‘ಎಸ್.ಐ ಹುದ್ದೆಗೆ ಆಯ್ಕೆಯಾಗಿರುವ ನಾನು, ತರಬೇತಿ ಸಲುವಾಗಿ ಇಲ್ಲಿಗೆ ಬಂದಿದ್ದೇನೆ’ ಎಂಬುದಾಗಿ ಅವರಲ್ಲಿ ಸಂದೀಪ್ ತಿಳಿಸಿದ್ದನು.

‘ಈ ನಡುವೆ ಅಂಜನಾ ವಸಿಷ್ಠ ತನ್ನ ಊರಿಗೆ ಮರಳಿದಾಗ ತಂದೆ ತಾಯಿ ಆಕೆಯನ್ನು ಬೇರೊಬ್ಬ ವ್ಯಕ್ತಿ ಜೊತೆ ವಿವಾಹ ಮಾಡಲು ನಿರ್ಧರಿಸಿದ್ದರು. ಈ ವಿಚಾರವನ್ನು ಸಂದೀಪ್‌ಗೆ ತಿಳಿಸಿದ್ದ ಆಕೆ, ತನ್ನನ್ನು ಮರೆತುಬಿಡುವಂತೆ ವಿನಂತಿಸಿದ್ದರು. ಸಂದೀಪ್ ಆಕೆಯನ್ನು ಪುಸಲಾಯಿಸಿ 2019ರ ಜೂನ್ 7ರಂದು ನಗರದ ಅತ್ತಾವರದ ಬಾಡಿಗೆ ಕೊಠಡಿಗೆ ಕರೆಸಿಕೊಂಡಿದ್ದನು. ಅಂದು ಆಕೆಯ ಕುತ್ತಿಗೆಗೆ ಕೇಬಲ್ ಟಿ.ವಿ.ಕೇಬಲ್ ಬಿಗಿದು ಕೊಲೆ ಮಾಡಿದ್ದ. ಮೃತದೇಹದ ಫೋಟೊ ಹಾಗೂ ವಿಡಿಯೊವನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದ. ಮೃತಳ ಎ.ಟಿ.ಎಂ ಕಾರ್ಡ್ ಹಾಗೂ ಮೊಬೈಲ್ ಫೋನನ್ನು ಕದ್ದು ನಗರದ ಬಿಜೈನ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಬಳಿಯಿರುವ ಕಾರ್ಪೊರೇಶನ್ ಬ್ಯಾಂಕ್ ಎ.ಟಿ.ಎಂನಲ್ಲಿ ರೂ 15 ಸಾವಿರ ಹಣ ಪಡೆದಿದ್ದ. ಬಳಿಕ ವಿಜಯಪುರ ಸಿಂದಗಿಗೆ ತೆರಳಿ ಅಲ್ಲಿನ ರೂ 2,700 ಖರ್ಚು ಮಾಡಿ ಸಂಗಮ್ ಡೀಲಕ್ಸ್ ಹೋಟೆಲ್ನಲ್ಲಿ ಉಳಿದುಕೊಂಡಿದ್ದ.

ಈ ವೇಳೆ ಪೊಲೀಸರು ಆತನನ್ನು ಬಂಧಿಸಿ, ಆತನಿಂದ ಮೃತಳ ಮೊಬೈಲ್, ಎಟಿಎಂ ಕಾರ್ಡ್ ಮತ್ತು ಯುವತಿಯ ಮೃತದೇಹದ ಫೋಟೋ ತೆಗೆದು ವಿಡಿಯೊ ಮಾಡಿದ್ದ ಆತನ ಮೊಬೈಲ್ ವಶಪಡಿಸಿಕೊಂಡಿದ್ದರು. ಆಕೆಯ ಎಟಿಎಂ ಕಾರ್ಡ್ ಬಳಸಿ ಪಡೆದಿದ್ದ ಹಣದಲ್ಲಿ ಉಳಿದಿದ್ದ ರೂ 12,300 ನಗದನ್ನೂ ವಶಪಡಿಸಿಕೊಂಡಿದ್ದರು. ಮಂಗಳೂರು ದಕ್ಷಿಣ ಠಾಣೆಯ ಆಗಿನ ಪಿಎಸ್ಐ ರಾಜೇಂದ್ರ ಬಿ. ಹಾಗೂ ಇನ್ಸ್ಪೆಕ್ಟರ್ ಎಂ.ಕುಮಾರ್ ಆರಾಧ್ಯ ಅವರು ಪ್ರಕರಣದ ತನಿಖೆ ನಡೆಸಿದ್ದರು. ಇನ್ಸ್ಪೆಕ್ಟರ್ ಲೋಕೇಶ್ ಎ.ಸಿ. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302, 380, 403 ರ ಅಡಿ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರವನ್ನು ಸಲ್ಲಿಸಿದ್ದರು.
ಈ ಪ್ರಕರಣದಲ್ಲಿ ಒಟ್ಟು 45 ಸಾಕ್ಷಿದಾರರನ್ನು ವಿಚಾರಿಸಲಾಗಿದ್ದು, 100 ದಾಖಲೆಗಳನ್ನು ಗುರುತಿಸಲಾಗಿತ್ತು.

ಸರ್ಕಾರಿ ವಕೀಲ ಬಿ. ಶೇಖರ್ ಶೆಟ್ಟಿ (ಈಗ ನಿವೃತ್ತ) ಹಾಗೂ ಜುಡಿತ್ ಒಲ್ಗಾ ಮಾರ್ಗರೇಟ್ ಕ್ರಾಸ್ತಾ ಸಾಕ್ಷಿಗಳ ವಿಚಾರಣೆ ಮಾಡಿ ವಾದ ಮಂಡಿಸಿದ್ದರು.

Related posts

ಕರ್ನಾಟಕ ಕ್ರೀಡಾಕೂಟದಲ್ಲಿ ಸಮರಾಗೆ ಚಿನ್ನದ ಪದಕ

ಮಾರಿದ ಹಳೆಯ ಬಸ್ಸನ್ನು ಕದ್ದು ತಂದ ಆರೋಪ – ತಂದೆ ಮಗನ ವಿರುದ್ಧ ದೂರು ದಾಖಲು !

ತಾಯಿ ಹಾಗೂ ಇಬ್ಬರು ಮಕ್ಕಳು ನಾಪತ್ತೆ