ಉಡುಪಿ : ಉಡುಪಿಯಲ್ಲಿ ಇತ್ತೀಚೆಗೆ ಬಿಜೆಪಿಯ ಐವರು ಶಾಸಕರು ಸುದ್ದಿಗೋಷ್ಠಿ ನಡೆಸಿ, ಸಿಎಂ ಸಿದ್ದರಾಮಯ್ಯ ಕರಾವಳಿಗೆ ಅನುದಾನ ಬಿಡುಗಡೆ ಮಾಡದಿದ್ದರೆ ಮುಖ್ಯಮಂತ್ರಿ ಮನೆ ಮುಂದೆ ಧರಣಿ ಕೂರುವುದಾಗಿ ಹೇಳಿಕೆ ನೀಡಿದ್ದರು. ಇದಕ್ಕೆ ತಿರುಗೇಟು ನೀಡಿರುವ ಕಾಂಗ್ರೆಸ್, ಕರಾವಳಿಯ ಸಂಸದರು ದಮ್ಮು ತಾಕತ್ತಿದ್ದರೆ ಪ್ರಧಾನಿ ನಿವಾಸದ ಮುಂದೆ ಧರಣಿ ಮಾಡಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳಿಗೆ ಅನುದಾನ ತರಲಿ ಎಂದು ಸವಾಲು ಹಾಕಿದೆ.
ಮಾದ್ಯಮದ ಜೊತೆ ಮಾತನಾಡಿದ ಕಾಂಗ್ರೆಸ್ ಮುಖಂಡ ರಮೇಶ್ ಕಾಂಚನ್, ಜಿಲ್ಲೆಯಲ್ಲಿ ಹಲವು ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳು ನೆನೆಗುದಿಗೆ ಬಿದ್ದಿವೆ. ಇಂದ್ರಾಳಿ ರೈಲ್ವೆ ಸೇತುವೆ ಕಾಮಗಾರಿ ಹತ್ತು ವರ್ಷಗಳಿಂದ ಕಾರ್ಯಾರಂಭ ಮಾಡಿಲ್ಲ. ಉಡುಪಿ ಮಲ್ಪೆ ರಸ್ತೆ ಸಂಚಾರಕ್ಕೆ ಯೋಗ್ಯವಾಗಿಲ್ಲ. ಇದು ಬಿಜೆಪಿ ಶಾಸಕರಿಗೆ ತಿಳಿದಿಲ್ಲವೇ? ಅನೇಕ ವರ್ಷಗಳಿಂದ ರಾಷ್ಟ್ರೀಯ ಹೆದ್ದಾರಿ ಅವ್ಯವಸ್ಥೆಗಳಿಂದಾಗಿ ಜನರು ಪರದಾಡುತ್ತಿದ್ದಾರೆ. ಬಿಜೆಪಿಯವರಿಗೆ ಧಮ್ಮು ತಾಕತ್ತಿದ್ದರೆ ಎಲ್ಲ ಕರಾವಳಿಯ ಸಂಸದರು ಹೋಗಿ ಪ್ರಧಾನಿ ನಿವಾಸದ ಮುಂದೆ ಧರಣಿ ನಡೆಸಿ ಅನುದಾನ ತರಲಿ ಎಂದು ಕಾಂಗ್ರೆಸ್ ಮುಖಂಡ ರಮೇಶ್ ಕಾಂಚನ್ ಸವಾಲು ಹಾಕಿದ್ದಾರೆ.