ನಾಡಿನಲ್ಲಿ ಸಂಚಾರಿಸುತ್ತಿರುವ ಚಿರತೆ : ಸಾರ್ವಜನಿಕರಲ್ಲಿ ಹೆಚ್ಚಿದ ಆತಂಕ

ಮಣಿಪಾಲ : ಕಳೆದ ಒಂದು ವಾರದಿಂದ ಮಣಿಪಾಲ ಪರಿಸರದಲ್ಲಿ ನಿರಂತರ ಚಿರತೆ ಓಡಾಡುತ್ತಿದ್ದು, ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿದೆ. ಅರಣ್ಯ ಇಲಾಖೆಯಿಂದ ಅತೀ ಶೀಘ್ರ ಚಿರತೆಯ ಜಾಡು ಹಿಡಿಯುವ ಕಾರ್ಯ ಆಗಬೇಕು ಎಂಬ ಆಗ್ರಹ ಜನರಿಂದ ವ್ಯಕ್ತವಾಗಿದೆ.

ಕಳೆದ ಶುಕ್ರವಾರ ರಾತ್ರಿ ಪೆರಂಪಳ್ಳಿಯ ಮನೆಯ ಆವರಣದೊಳಗೆ ಚಿರತೆ ಕಾಣಿಸಿಕೊಂಡಿತ್ತು. ಇದೀಗ ಸೋಮವಾರ ತಡರಾತ್ರಿ ಅನಂತ ನಗರ, ಸಿಂಡಿಕೇಟ್‌ ವೃತ್ತ, ಎಂಡ್‌ ಪಾಯಿಂಟ್‌ ಪ್ರದೇಶಗಳಲ್ಲಿ ಚಿರತೆಯನ್ನು ನೋಡಿ ಸ್ಥಳೀಯರು ಭಯಭೀತರಾಗಿದ್ದಾರೆ.

ಪೆರಂಪಳ್ಳಿಯಲ್ಲಿ ಚಿರತೆ ಚಲನವಲನ ಪತ್ತೆಯಾದ ಅನಂತರ ಅರಣ್ಯ ಇಲಾಖೆಯಿಂದ ಕಾರ್ಯಾಚರಣೆ ನಡೆಸಿದರೂ ಚಿರತೆ ಪತ್ತೆಯಾಗಿರಲಿಲ್ಲ. ಈಗ ಅನಂತ ನಗರದಲ್ಲಿ ಚಿರತೆ ಓಡಾಡಿದ ಕುರುಹು ಪತ್ತೆಯಾಗಿದೆ. ಪೆರಂಪಳ್ಳಿಯಲ್ಲಿ ಓಡಾಡಿದ ಚಿರತೆಯೇ ಇಲ್ಲಿಗೂ ಬಂದಿರಬಹುದೇ ಅಥವಾ ಈ ಪರಿಸರದಲ್ಲಿ ಬೇರೆ 2-3 ಚಿರತೆ ಇರಬಹುದೇ ಎಂಬ ಆತಂಕ ಸ್ಥಳೀಯರಲ್ಲಿ ಮನೆಮಾಡಿದೆ.
ಇಲ್ಲಿನ ಸ್ಥಳೀಯರೊಬ್ಬರು ಪಾರ್ಕ್‌ ಮಾಡಿದ ಕಾರಿಗೆ ಹಾನಿಯಾಗಿದ್ದು, ಇದು ಚಿರತೆಯಿಂದಾಗಿರುವುದು ಎನ್ನಲಾಗಿದೆ. ಕಾರಿನ ಟೈರ್‌ ಮೇಲ್ಭಾಗದಲ್ಲಿ ಪರಚಿ ಜಖಂಗೊಳಿಸಿದಂತಿದೆ. ಈ ಪರಿಸರದಲ್ಲಿ ಚಿರತೆ ಓಡಾಡಿರುವ ಕಾಲಿನ ಹೆಜ್ಜೆ ಗುರುತು ಪತ್ತೆಯಾಗಿದ್ದು, ಅನುಮಾನಕ್ಕೆ ಇನ್ನಷ್ಟು ಪುಷ್ಟಿ ಸಿಕ್ಕಿದೆ.

Related posts

ಉಡುಪಿ ಜಿಲ್ಲೆಯಲ್ಲಿ ಮಂಗನಕಾಯಿಲೆ ಪ್ರಕರಣ ಬಾರದಂತೆ ಮುನ್ನೆಚ್ಚರಿಕೆ ವಹಿಸಿ : ಆರೋಗ್ಯ ಇಲಾಖೆಗೆ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಸೂಚನೆ

ನಿಷೇಧಾಜ್ಞೆ, ಸಂತೆ, ಜಾತ್ರೆ ನಿಷೇಧ ಆದೇಶ ಹಿಂದೆಗೆತ : ಉಡುಪಿ ಜಿಲ್ಲಾಧಿಕಾರಿ

ಶಾಲಾ ವಾಹನಕ್ಕೆ ಬೈಕ್ ಢಿಕ್ಕಿಯಾಗಿ ಸವಾರ ಮೃತ್ಯು