“ಶಾಸಕರು ಜನರ ಬದುಕಿನಲ್ಲಿ ಚೆಲ್ಲಾಟ ಆಡುತ್ತಿದ್ದಾರೆ” – ಸುರತ್ಕಲ್ ರೈಲ್ವೇ ಮೇಲ್ಸೇತುವೆ ಕಾಮಗಾರಿಗೆ ಒತ್ತಾಯಿಸಿ ಎಸ್‌ಡಿಪಿಐ ಪ್ರತಿಭಟನಾ ಜಾಥಾ

ಸುರತ್ಕಲ್ : “ಸುರತ್ಕಲ್ ರೈಲ್ವೇ ಮೇಲ್ಸೇತುವೆ ರಸ್ತೆಯು ಸಂಪೂರ್ಣ ಹದಗೆಟ್ಟಿದ್ದು ಕಾಮಗಾರಿ ನಡೆಸಲು 78 ಲಕ್ಷ ರೂ. ಅನುದಾನ ಬಿಡುಗಡೆಯಾಗಿದ್ದರೂ ಕಾಮಗಾರಿ ನಡೆಸಲಾಗಿಲ್ಲ. ಸಂಬಂಧಪಟ್ಟ ಮನಪಾ ಸದಸ್ಯರಿಂದ ಹಿಡಿದು ಶಾಸಕರವರೆಗೆ ಜನರ ಬದುಕಿನಲ್ಲಿ ಚೆಲ್ಲಾಟವಾಡುತ್ತಿದ್ದಾರೆ. ಮುಂದಿನ 15 ದಿನಗಳ ಒಳಗಾಗಿ ಕಾಮಗಾರಿ ನಡೆಸದಿದ್ದರೆ ರಸ್ತೆ ತಡೆ ನಡೆಸಿ ಉಗ್ರ ಪ್ರತಿಭಟನೆ ನಡೆಸುತ್ತೇವೆ” ಎಂದು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಎಸ್‌ಡಿಪಿಐ ಮುಖಂಡ ಯಾಸಿನ್ ಅರ್ಕುಳ ಎಚ್ಚರಿಕೆ ನೀಡಿದರು. ಅವರು ಸುರತ್ಕಲ್‌ನಲ್ಲಿ ನಡೆದ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತಾಡುತ್ತಿದ್ದರು.

”ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಭರತ್ ಶೆಟ್ಟಿ ಅವರಿಂದ ಅಭಿವೃದ್ಧಿ ಕಾರ್ಯಗಳು ಕುಂಠಿತಗೊಂಡಿದೆ. ಶಾಸಕರು ಹಿಂದೂ ಮುಸ್ಲಿಮರ ಮಧ್ಯೆ ದ್ವೇಷ ಹರಡುವ ಕೆಲಸ ಮಾಡುತ್ತಿದ್ದಾರೆ. ನೆನೆಗುದಿಗೆ ಬಿದ್ದ ಸುರತ್ಕಲ್ ಮಾರುಕಟ್ಟೆ, ರಸ್ತೆ ಅಭಿವೃದ್ಧಿಗೆ ಶಾಸಕರು ಪ್ರಾಮಾಣಿಕ ಪ್ರಯತ್ನ ನಡೆಸುತ್ತಿಲ್ಲ. ಸುರತ್ಕಲ್ ರೈಲ್ವೇ ಮೇಲ್ಸೇತುವೆ ದುರಸ್ತಿ ಪಡಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆಯನ್ನು ಎದುರಿಸಬೇಕಾದೀತು” ಎಂದು ಹೇಳಿದರು.

ಕಾನ ಮಸೀದಿ ಉಪಾಧ್ಯಕ್ಷ ಅನ್ಸಾರ್ ಮಾತಾಡಿ, “ಕೆಳದಿನಗಳ ಹಿಂದೆ ನಾನು ಇದೇ ಮೇಲ್ಸೇತುವೆ ಮೇಲೆ ಸ್ಕೂಟರ್‌ನಲ್ಲಿ ಹೋಗುತ್ತಿದ್ದಾಗ ಅಪಘಾತಕ್ಕೆ ತುತ್ತಾಗುತ್ತಿದ್ದೆ. ಆದರೆ ಸ್ವಲ್ಪದರಲ್ಲೇ ಬಚಾವ್ ಆದೆ. ನನ್ನ ಪರಿಸ್ಥಿತಿ ಬೇರೆ ಯಾರಿಗೂ ಬರಬಾರದು. ಕೂಡಲೇ ಸಂಬಂಧಪಟ್ಟ ಇಲಾಖೆ ಗಮನಹರಿಸಿ ರಸ್ತೆಯನ್ನು ಅಭಿವೃದ್ಧಿಪಡಿಸಬೇಕು” ಎಂದರು.

ಬಳಿಕ ಸುರತ್ಕಲ್ ಮನಪಾ ಉಪ ಕಚೇರಿಯವರೆಗೆ ಕಾಲ್ನಡಿಗೆ ಜಾಥಾ ನಡೆಯಿತು. ಅಲ್ಲಿ ಉಪ ಆಯುಕ್ತ ಕಾರ್ತಿಕ್ ಅವರಿಗೆ ಮನವಿ ಸಲ್ಲಿಸಲಾಯಿತು.

ಎಸ್‌ಡಿಪಿಐ ಕಾನ ವಾರ್ಡ್ ಅಧ್ಯಕ್ಷ ಬಶೀರ್, ಉಪಾಧ್ಯಕ್ಷ ಸಲಾಂ, ಸುರತ್ಕಲ್ ಬ್ಲಾಕ್ ಅಧ್ಯಕ್ಷ ನೌಶಾದ್, ಕಾರ್ಯದರ್ಶಿ ಶಬೀರ್, ಸಂಶುದ್ದಿನ್ ಕೃಷ್ಣಾಪುರ ಹಾಗೂ ಸ್ಥಳೀಯ ನಾಯಕರು ಉಪಸ್ಥಿತರಿದ್ದರು.

Related posts

ಮಂಗಳೂರು ವಿವಿಯಿಂದ ಯಕ್ಷ ಮಂಗಳ ಪ್ರಶಸ್ತಿ ಪ್ರದಾನ

National Fame Award of India Books of Award – Sushanth Brahmavar

ಯಕ್ಷಗಾನ ಹಾಸ್ಯಗಾರ ಮುಖ್ಯಪ್ರಾಣ ಕಿನ್ನಿಗೋಳಿ ನಿಧನಕ್ಕೆ ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಸಂತಾಪ