ಮಕ್ಕಳ ರಕ್ಷಣೆಗೆ ಇರುವ ಕಾಯ್ದೆಗಳು ಸಮರ್ಪಕವಾಗಿ ಅನುಷ್ಠಾನಗೊಳ್ಳಬೇಕು – ನ್ಯಾ. ಕಿರಣ್ ಎಸ್. ಗಂಗಣ್ಣನವರ್

ಉಡುಪಿ : ತಂದೆ, ತಾಯಿಗಳ ಮಧ್ಯೆ ವಿರಸ ಉಂಟಾದಾಗ ಮಕ್ಕಳಲ್ಲಿ ಅಸುರಕ್ಷಿತ ಭಾವನೆ ಉಂಟಾಗುತ್ತದೆ. ಇದು ಮಕ್ಕಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಇಂತಹ ಸನ್ನಿವೇಶದಲ್ಲಿ ಹಿರಿಯರು ಜಾಗರೂಕತೆ ವಹಿಸಬೇಕು ಎಂದು ಉಡುಪಿಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಧೀಶ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಕಿರಣ್ ಎಸ್. ಗಂಗಣ್ಣನವರ್ ಅಭಿಪ್ರಾಯಪಟ್ಟರು.

ಅವರು ಬನ್ನಂಜೆಯ ಎಸ್ಪಿ ಕಚೇರಿಯಲ್ಲಿ ಜಿಲ್ಲಾಡಳಿತ, ಜಿ.ಪಂ, ಜಿಲ್ಲಾ ಕಾ‌ನೂನು ಸೇವೆಗಳ ಪ್ರಾಧಿಕಾರ, ಪೋಲಿಸ್ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಇವರ ಸಹಯೋಗದಲ್ಲಿ ಮಕ್ಕಳ ರಕ್ಷಣೆಗೆ ಸಂಬಂಧಿಸಿದ ಕಾಯ್ದೆಗಳ ಕುರಿತು ಠಾಣೆಯ ಮಕ್ಕಳ ಕಲ್ಯಾಣ ಪೋಲಿಸ್ ಅಧಿಕಾರಿ (ಪಿಎಸ್ಐ) & ಸಹಾಯಕ ಮಕ್ಕಳ ಕಲ್ಯಾಣ ಪೋಲಿಸ್ ಅಧಿಕಾರಿಗಳಿಗೆ ಒಂದು ದಿನದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು‌.

ನೀಚ ಮತ್ತು ಕೆಟ್ಟ ಕೆಲಸ ಮಾಡಿದವರ ವಿರುದ್ದ ತನಿಖೆಯನ್ನು ನಡೆಸಿದ ಪೋಲಿಸರಿಗೆ ಮಾತ್ರ ವಾಸ್ತವಾಂಶ ತಿಳಿದಿರುತ್ತದೆ. ಆದರೆ ನ್ಯಾಯಾಲಯವು ಸೂಕ್ತ ಸಾಕ್ಷ್ಯಗಳನ್ನು ಕೇಳುತ್ತವೆ. ಇಂತಹ ಸಂದರ್ಭದಲ್ಲಿ ಮನಸ್ಸು ಮತ್ತು ವಿವೇಕದಿಂದ ಕೆಲಸಗಳನ್ನು ಮಾಡಿದಾಗ ಯಶಸ್ಸು ಲಭ್ಯ ಎಂದರು.

ಮಕ್ಕಳ ರಕ್ಷಣೆಗೆ ಇರುವ ಕಾಯ್ದೆಗಳು ಸಮರ್ಪಕವಾಗಿ ಅನುಷ್ಠಾನಗೊಳ್ಳಬೇಕು. ಇಂತಹ ಪ್ರಕರಣಗಳಲ್ಲಿ ತನಿಖಾಧಿಕಾರಿಗಳು ಅಂತರಾತ್ಮ ಹಾಗು ಅಂತರ್‌ಚಕ್ಷುವಿನಿಂದ ಕರ್ತವ್ಯ ನಿರ್ವಹಿಸಬೇಕು. ಇದರ ಮೂಲಕ ತಮ್ಮ ಸಾಧನೆಯ ಬೆಳಕನ್ನು ಚೆಲ್ಲಬೇಕು ಎಂದು ನುಡಿದರು.

ಜಿಲ್ಲಾ ಎಸ್ಪಿ ಡಾ.ಅರುಣ್ ಕೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಯೋಗೇಶ್ ಪಿ.ಆರ್, 2‌ನೇ ಹೆಚ್ಚುವರಿ ಸಿವಿಲ್ ನ್ಯಾಯಧೀಶರು ಮತ್ತು ಹೆಚ್ಚುವರಿ ಮುಖ್ಯ ನ್ಯಾಯಿಕ ದಂಡಾಧಿಕಾರಿ ಹಾಗು ಬಾಲ ನ್ಯಾಯ ಮಂಡಳಿ ಅಧ್ಯಕ್ಷ ಮನುಪಟೇಲ್, ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿ ನಾಗರತ್ನಾ ನಾಯಕ್, ಹೆಚ್ಚುವರಿ ಎಸ್ಪಿಗಳಾದ ಎಸ್‌.ಟಿ ಸಿದ್ದಲಿಂಗಪ್ಪ, ಪಿ.ಎ ಹೆಗಡೆ, ಹಿರಿಯ ಮಕ್ಕಳ ಪೋಲಿಸ್ ಕಲ್ಯಾಣಾಧಿಕಾರಿ ಪ್ರಭು ಡಿಟಿ ಉಪಸ್ಥಿತರಿದ್ದರು.

Related posts

ಅಲೈನ್ಸ್ ಕ್ಲಬ್ ಉಡುಪಿಯಿಂದ ವೈದ್ಯರ ದಿನಾಚರಣೆ : ಪ್ರಸಿದ್ಧ ವೈದ್ಯ ಡಾ.ಆರ್.ಎನ್.ಭಟ್ ಅವರಿಗೆ ಸನ್ಮಾನ

ಶತಾವಧಾನಿ ಡಾ. ಆರ್. ಗಣೇಶ್ ಅವರಿಗೆ ತಲ್ಲೂರು ಕನಕ ಅಣ್ಣಯ್ಯ ಶೆಟ್ಟಿ ಪ್ರಶಸ್ತಿ ಪ್ರದಾನ

ರಂಗೋಲಿ ಕಲಾ ಸಾಧಕಿ, ಭಾರತಿ ಮರವಂತೆಗೆ ‘ಮಧುರಚೆನ್ನ ರಾಜ್ಯ ಪ್ರಶಸ್ತಿ’ ಪ್ರದಾನ