ಉಡುಪಿ : ಮಾನವನಿಗೆ 48 ವರ್ಷಗಳು ತುಂಬಿದೆ ಎಂದರೆ ವಯಸ್ಸಾಗುತ್ತಾ ಬಂತು ಎಂದರ್ಥ ಆದರೆ ಯಾವುದೇ ಸಂಸ್ಥೆಗೆ ವಯಸ್ಸು ಹೆಚ್ಚುತ್ತಾ ಬಂದರೆ ಅದು ಯೌವ್ವನಕ್ಕೆ ಕಾಲಿಟ್ಟಿದೆ ಎಂದರ್ಥ. ಪ್ರಸ್ತುತ 48 ವಾರ್ಷಿಕೋತ್ಸವವನ್ನು ಆಚರಿಸುತ್ತಿರುವ ಬೈಂದೂರಿನ ಲಾವಣ್ಯ ಸಂಸ್ಥೆ ಸಾಂಸ್ಕೃತಿಕ ರಂಗಕ್ಕೆ ನೀಡಿದ ಕೊಡುಗೆ ಅಪಾರ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು.
ಅವರು ಮಂಗಳವಾರ ಬೈಂದೂರಿನ ಶ್ರೀ ಸೇನೇಶ್ವರ ದೇವಳದ ಮುಂಭಾಗದ ಶ್ರೀ ಶಾರದಾ ವೇದಿಕೆಯಲ್ಲಿ ನಡೆಯುತ್ತಿರುವ ಲಾವಣ್ಯ ಬೈಂದೂರು ಇದರ 48ನೇ ವಾರ್ಷಿಕೋತ್ಸವ ಹಾಗೂ ಮಾಜಿ ಶಾಸಕ ದಿ.ಕೆ. ಲಕ್ಷ್ಮೀ ನಾರಾಯಣ ಬೈಂದೂರು ಸ್ಮರಣಾರ್ಥ ಹಮ್ಮಿಕೊಂಡ, ‘ರಂಗಪoಚಮಿ -2025’ ರಂಗೋತ್ಸವದ 4ನೇ ದಿನದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಮಾಜದಲ್ಲಿ ರಂಗಭೂಮಿಯ ಕೊಡುಗೆಯನ್ನು ಪ್ರಸ್ತಾಪಿಸಿದ ಅವರು, ರಂಗಭೂಮಿ ಉಡುಪಿ ಇದೀಗ ತನ್ನ 60ನೇ ಸಂಭ್ರಮೋತ್ಸವದ ಪ್ರಯುಕ್ತ ಪ್ರೌಢಶಾಲೆ ಹಾಗೂ ಕಾಲೇಜುಗಳಲ್ಲಿ ಪ್ರಾರಂಭಿಸಲಾದ ‘ರಂಗ ಶಿಕ್ಷಣ ‘ ಯೋಜನೆಯನ್ನು ಪ್ರಾಯೋಗಿಕವಾಗಿ 12 ಶಿಕ್ಷಣ ಸಂಸ್ಥೆಗಳಲ್ಲಿ ಪ್ರಾರಂಭಿಸಲಾಗಿದ್ದು, ಇದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮುಂದಿನ ದಿನಗಳಲ್ಲಿ ಈ ಯೋಜನೆಯನ್ನು ಇನ್ನಷ್ಟು ಶಾಲೆಗಳಿಗೆ ವಿಸ್ತರಿಸುವ ಚಿಂತನೆ ನಡೆದಿದೆ. ಈ ಮೂಲಕ ಮಕ್ಕಳಿಗೆ ರಂಗತರಬೇತಿಯನ್ನು ನೀಡಿ ಅವರಲ್ಲಿ ರಂಗಪ್ರಜ್ಞೆಯ ಜೊತೆಗೆ ನೈತಿಕತೆಯ ಪಾಠವನ್ನು ಕಲಿಸುವ ಉದ್ದೇಶವಿದೆ. ನೈತಿಕತೆಯ ಜೊತೆಗೆ ಮಕ್ಕಳಿಗೆ ಸಂಸ್ಕಾರ ಕೊಡುವುದು ಅತೀ ಅಗತ್ಯವಾಗಿದೆ. ಇದರಿಂದ ಅಲ್ಲಲ್ಲಿ ವೃದ್ಧಾಶ್ರಮಗಳು ತಲೆ ಎತ್ತುವ ಪ್ರಶ್ನೆಯೇ ಬರುವುದಿಲ್ಲ. ಗುರುಹಿರಿಯರಿಗೆ ಗೌರವ ಕೊಡುವುದು, ತಂದೆತಾಯಿಗಳಿಗೆ ವಿಧೇಯಕರಾಗಿರುವುದನ್ನು ಕಲಿಸಿಕೊಡುತ್ತದೆ. ಇದೇ ಉದ್ದೇಶದಿಂದ ಉಡುಪಿಯಲ್ಲಿ ಪ್ರಾರಂಭಿಸಲಾದ ಯಕ್ಷ ಶಿಕ್ಷಣಕ್ಕೆ ಇಂದು 90 ಶಿಕ್ಷಣ ಸಂಸ್ಥೆಗಳು ಕೈ ಜೋಡಿಸಿದ್ದು, ಸುಮಾರು 3,000ಕ್ಕೂ ಅಧಿಕ ಮಕ್ಕಳು ಯಕ್ಷಗಾನವನ್ನು ಅಭ್ಯಾಸಿಸುತ್ತಿದ್ದಾರೆ. ಇದಕ್ಕೆ ಶಿಕ್ಷಣಾಧಿಕಾರಿಗಳು, ಪೋಷಕರು ಎಲ್ಲರಿಂದಲೂ ಉತ್ತಮ ಪ್ರೋತ್ಸಾಹ ಸಿಕ್ಕಿದೆ ಎಂದು ಅವರು ತಿಳಿಸಿದರು.
ಬೈಂದೂರಿನ ಜನತೆಗೆ ಮಾತ್ರವಲ್ಲದೆ ದೇಶದ ಉದ್ದಗಲಕ್ಕೂ ರಂಗಭೂಮಿಯ ಕಂಪನ್ನು ಹರಡಿರುವ ಲಾವಣ್ಯ ಸಂಸ್ಥೆ ಕೂಡಾ ಬೈಂದೂರು ತಾಲೂಕಿನಲ್ಲಿ ಇದೇ ಮಾದರಿಯಲ್ಲಿ ಮಕ್ಕಳಿಗೆ ರಂಗಶಿಕ್ಷಣ ನೀಡುವ ಕಾರ್ಯಕ್ಕೆ ಮುಂದಾಗಬೇಕು. ಈ ಮೂಲಕ ಭವಿಷ್ಯದಲ್ಲಿ ರಂಗ ಕಲಾವಿದರು ಹಾಗೂ ಸದಾಭಿರುಚಿಯ ಪ್ರೇಕ್ಷಕರ ಕೊರತೆಯಾಗದಂತೆ ಮುತುವರ್ಜಿ ವಹಿಸಬೇಕು. ಲಾವಣ್ಯದ ಈ ಕೆಲಸಕ್ಕೆ ಸಮಾಜದ ಸಂಘಸoಸ್ಥೆಗಳು, ದಾನಿಗಳ ಪ್ರೋತ್ಸಾಹ ಸಿಗಲಿ. ಸಂಸ್ಥೆ ಶತಮಾನೋತ್ತರ ಸಂಭ್ರಮಾಚರಣೆಯನ್ನು ಕಾಣುವಂತಾಗಲಿ ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ಸಾಫ್ಟ್ವೇರ್ ಎಂಜಿನಿಯರ್ ಪ್ರವೀಣ್ ಶೆಟ್ಟಿ ಶುಭಾಶಂಸನೆಗೈದರು.
ಕಾಲ್ತೋಡು ಗ್ರಾಮ ಪಂಚಾಯಿತಿ ಅಧ್ಯಕ್ಷ ಅಣ್ಣಪ್ಪ ಶೆಟ್ಟಿ ಭಟ್ನಾಡಿ, ಉಡುಪಿ ಜಿಲ್ಲಾ ಪಂಚಾಯಿತಿಯ ಮಾಜಿ ಅಧ್ಯಕ್ಷ ರಾಜು ಪೂಜಾರಿ, ಆಲೂರು ತಾರಿಬೇರು ಶ್ರೀ ಸೋಮನಾಥೇಶ್ವರ ದೇವಳದ ಅಧ್ಯಕ್ಷ ರಾಜರಾಮ್ ಭಟ್ ಉಪ್ಪುಂದ, ಬೈಂದೂರು ತಾಲೂಕು ಗ್ಯಾರೇಜು ಮಾಲಕರ ಸಂಘದ ಅಧ್ಯಕ್ಷ ಕೃಷ್ಣಯ್ಯ ಮದ್ದೋಡಿ,, ಉದ್ಯಮಿ ಸತೀಶ್ ಶೆಟ್ಟಿ, ಜೆಸಿಐ ಉಪ್ಪುಂದ ಅಧ್ಯಕ್ಷ ಭರತ ದೇವಾಡಿಗ, ಬೈಂದೂರು ಡಾ.ಬಿ.ಆರ್.ಅಂಬೇಡ್ಕರ್ ಯುವಕ ಸಂಘದ ಅಧ್ಯಕ್ಷ ರಂಗ ಯಡ್ತರೆ, ಲಾವಣ್ಯ ಅಧ್ಯಕ್ಷ ನರಸಿಂಹ ನಾಯಕ್ ಹಾಗೂ ಕಾರ್ಯದರ್ಶಿ ವಿಶ್ವನಾಥ್ ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಹಿರಿಯ ಮದ್ದಲೆ ವಾದಕ ನಾರಾಯಣ ದೇವಾಡಿಗ ಹಾಗೂ ಕೊಂಕಣಿ ರಂಗ ಕಲಾವಿದ ಜೋಸೆಫ್ ಫೆರ್ನಾಂಡಿಸ್ ಬೈಂದೂರು ಅವರನ್ನು ಸನ್ಮಾನಿಸಲಾಯಿತು. ಹಿರಿಯ ಸಹಕಾರಿ ಧುರೀಣ ಪ್ರಕಾಶ್ಚಂದ್ರ ಶೆಟ್ಟಿ ಅವರಿಗೆ ಗೌರವಾರ್ಪಣೆ ನಡೆಯಿತು. ಸಭಾ ಕಾರ್ಯಕ್ರಮದ ಬಳಿಕ ನಟನಾ ಮೈಸೂರು ತಂಡದಿoಧ ‘ಪ್ರಮೀಳಾರ್ಜುನೀಯಂ ‘ ನಾಟಕ ಪ್ರದರ್ಶನಗೊಂಡಿತು.