ಮೂಡಬಿದ್ರೆ : ಮೂಡಬಿದ್ರೆ ಪೊಲೀಸ್ ಠಾಣಾ ವ್ಯಾಪ್ತಿಯ ಮಾರ್ಪಾಡಿ ಗ್ರಾಮದ ಕಡಲಕೆರೆ ಇಂಡಸ್ಟ್ರೀಯಲ್ ಏರಿಯಾದ ವಿಲ್ಕರ್ಟ್ ಎಂಬ ಹೆಸರಿನ ಗೋಡೌನ್‌ನ ಶಟರಿನ ಬೀಗ ಮುರಿದು ಗೋಡೌನ ಒಳಗೆ ಪ್ರವೇಶಿಸಿ ಗೋಡೌನ್‌ನಲ್ಲಿದ್ದ 2 ಲ್ಯಾಪ್ಟಾಪ್ ಮತ್ತು ನಗದು ಹಣ ಇರುವ ಲಾಕರನ್ನು ಕಳ್ಳತನಗೈದ ಆರೋಪಿಯನ್ನು ಮೂಡಬಿದ್ರೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬಂಧಿತ ಆರೋಪಿಯನ್ನು ಅಂತರ್ ಜಿಲ್ಲಾ ಕಳ್ಳ ರಾಯಚೂರು ಮೂಲದ ಚಂದ್ರು( 33 ವ) ಎಂದು ಗುರುತಿಸಲಾಗಿದೆ.
ಆರೋಪಿಯನ್ನು ವಿಚಾರಣೆ ನಡೆಸಿದಾಗ ಈ ಮೇಲಿನ ಕೃತ್ಯವನ್ನು ಎಸಗಿರುವುದಾಗಿ ಒಪ್ಪಿಕೊಂಡಿರುತ್ತಾನೆ. ಬಂಧಿತ ಆರೋಪಿಯಿಂದ ಗೋಡೌನ್ ನಲ್ಲಿ ಕಳ್ಳತನ ಮಾಡಿದ ಎಚ್ ಪಿ ಕಂಪನೀಯ 2 ಲ್ಯಾಪ್ ಟಾಪ್ ಮತ್ತು ಲಾಕರ್ ಹಾಗೂ ಲಾಕರ್‌ನಲ್ಲಿದ್ದ ಸುಮಾರು 2,88,000/- ರೂ ನಗದು ಹಣ ಮತ್ತು ಕೃತ್ಯಕ್ಕೆ ಬಳಸಿದ ಮಹೀಂದ್ರ ಕಂಪನೀಯ ಬೊಲೇರೊ ಪಿಕಪ್ ವಾಹನ ಸಹಿತ ಅಂದಾಜು 6,50,000 /- ರೂ ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆಯಲಾಗಿದೆ.
ಮಂಗಳೂರು ನಗರದ ಪೊಲೀಸ್ ಆಯುಕ್ತರಾದ ಅನುಪಮ್ ಅಗರ್ವಾಲ್, ರವರ ಮಾರ್ಗದರ್ಶನದಂತೆ ಡಿಸಿಪಿ ಸಿದ್ಧಾರ್ಥ ಗೊಯಲ್ (ಕಾ & ಸು), ರವಿಶಂಕರ್ ಡಿಸಿಪಿ (ಅ & ಸಂ) ಮತ್ತು ಮಂಗಳೂರು ಉತ್ತರ ಉಪ ವಿಭಾಗದ ಎಸಿಪಿ ಶ್ರೀಕಾಂತ್.ಕೆ ರವರ ನಿರ್ದೇಶನದಂತೆ ಮೂಡಬಿದ್ರೆ ಠಾಣಾ ಪೊಲೀಸ್ ನಿರೀಕ್ಷಕರಾದ ಸಂದೇಶ್ ಪಿ.ಜಿ ರವರ ನೇತೃತ್ವದ ತಂಡ ಪಿ.ಎಸ್.ಐ. ಶ್ರೀಮತಿ ಪ್ರತಿಭ ಕೆ.ಸಿ, ಹಾಗೂ ಎ.ಎಸ್.ಐ ರಾಜೇಶ್ ಮತ್ತು ಹೆಚ್.ಸಿ ಗಳಾದ ರಾಜೇಶ್, ಮೊಹಮ್ಮದ್ ಇಕ್ಬಾಲ್, ಮೊಹಮ್ಮದ್ ಹುಸೇನ್, ಅಕೀಲ್ ಅಹಮ್ಮದ್, ನಾಗರಾಜ್ ಲಮಾಣಿ ಮತ್ತು ಪಿ.ಸಿ ವೆಂಕಟೇಶ್ ರವರು ಕಾರ್ಯಚರಣೆಯಲ್ಲಿ ಪಾಲ್ಗೊಂಡಿದ್ದರು