ಇಹಲೋಕ‌ ತ್ಯಜಿಸಿದ ಹಿರಿಯ ಯಕ್ಷಗಾನ ಕಲಾವಿದ ಕುಂಬಳೆ ಶ್ರೀಧರ್ ರಾವ್

ಮಂಗಳೂರು : ಹಿರಿಯ ಯಕ್ಷಗಾನ ಕಲಾವಿದ ಕುಂಬಳೆ ಶ್ರೀಧರ್ ರಾವ್ ಅವರು ಹೃದಯಘಾತದಿಂದ ಇಹಲೋಕ ತ್ಯಜಿಸಿದ್ದಾರೆ.

ಯಕ್ಷಗಾನ ಪ್ರವರ್ತಕ ಪಾರ್ತಿಸುಬ್ಬನ ಊರು ಕಾಸರಗೋಡಿನ ಕುಂಬಳೆಯಲ್ಲಿ 1948ರಲ್ಲಿ ಜನಿಸಿದ ಇವರು ಕುಂಬಳೆ ಶ್ರೀಧರ ರಾವ್ ಎಂದೇ ಪ್ರಖ್ಯಾತರು. ಮೂರನೇ ತರಗತಿ ವ್ಯಾಸಂಗ ಮಾಡಿದ ಇವರು ದಿ.ಕೊರಗ ಶೆಟ್ಟಿಯವರ ಇರಾ(ಕುಂಡಾವು) ಮೇಳದಿಂದ ಯಕ್ಷಗಾನದ ವೃತ್ತಿ ಬದುಕು ಆರಂಭಿಸಿದರು. ಅಲ್ಲಿಂದ ಕೂಡ್ಲು, ಮತ್ತೆ ಇರಾ, ಮುಲ್ಕಿ, ಕರ್ನಾಟಕ ಮೇಳಗಳ ತಿರುಗಾಟ ನಡೆಸಿದರು. ಆ ಬಳಿಕ ಧರ್ಮಸ್ಥಳ ಮೇಳದಲ್ಲಿ ತಿರುಗಾಟ ಆರಂಭಿಸಿದ ಇವರು ನಿರಂತರ 40ವರ್ಷಗಳ ಕಾಲ ಇದೊಂದೇ ಮೇಳದಲ್ಲಿ ಗೆಜ್ಜೆಕಟ್ಟಿದವರು.

ಆರಂಭದಲ್ಲಿ ಸ್ತ್ರೀವೇಷಧಾರಿಯಾಗಿ ಪ್ರಸಿದ್ಧಿ ಗಳಿಸಿದ ಇವರು, ಕಯಾದು, ಲಕ್ಷ್ಮಿ, ದಮಯಂತಿ, ಚಿತ್ರಾಂಗದೆ, ಸುಭದ್ರೆ, ಯಶೋಧೆ, ಕುಂತಿ ಮುಂತಾದ ಪಾತ್ರಗಳನ್ನು ಸಮರ್ಥವಾಗಿ ನಿರ್ವಹಿಸಿದರು. ಗರತಿ ಪಾತ್ರದಲ್ಲಿ ಎಲ್ಲರಿಗೂ ಇಷ್ಟವಾಗುವ ಇವರು ಧರ್ಮಸ್ಥಳ ಮೇಳ ಸೇರುವ ಕಾಲಕ್ಕೆ ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆಯ ಅಮ್ಮು ಬಲ್ಲಾಳ್ತಿ ಪಾತ್ರಕ್ಕೊಂದು ರೂಪುಕೊಟ್ಟಿದ್ದರು. ಆ ಬಳಿಕ ಈ ಪಾತ್ರವನ್ನು ತಮ್ಮದೇ ಆದ ದೃಷ್ಟಿಕೋನದಿಂದ ಬಹಳಷ್ಟು ಎತ್ತರಕ್ಕೆ ಏರಿಸಿದವರು ಕುಂಬಳೆ ಶ್ರೀಧರ ರಾಯರು‌. ವಿಶೇಷವೆಂದರೆ ಕುಂಬಳೆ ಶ್ರೀಧರ ರಾವ್ ಅವರು ಸ್ತ್ರೀ ಪಾತ್ರದಲ್ಲಿ ಉತ್ತುಂಗದಲ್ಲಿರುವಾಗಲೇ ಪುರುಷಪಾತ್ರಕ್ಕೆ ಯೂಟರ್ನ್ ಹೊಡೆದು ಅಲ್ಲೂ ಯಶಸ್ವಿಯಾದವರು.

ಸದ್ಯ ಪುತ್ತೂರಿನ 34 ನೆಕ್ಕಿಲಾಡಿ ಗ್ರಾಮದ ಬೇರಿಕೆಯಲ್ಲಿ ವಾಸವಾಗಿರುವ ಕುಂಬಳೆ ಶ್ರೀಧರ ರಾಯರಿಗೆ ಬೆಳಗ್ಗೆ ಎದೆನೋವು ಕಾಣಿಸಿಕೊಂಡಿತ್ತು‌. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು‌. ಆದರೆ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ‌.

ಮೃತರಿಗೆ ಯಕ್ಷಗಾನ ಅಕಾಡೆಮಿ ಪ್ರಶಸ್ತಿ, ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ‌.ಡಿ.ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕ ಸಂದರ್ಭದ ಪ್ರಶಸ್ತಿ, ಎಡನೀರು ಮಠದ ಸನ್ಮಾನ ದೊರಕಿದೆ.

Related posts

ವಿಶ್ವದ ವೇಗದ ಭಗವದ್ಗೀತಾ ಲೇಖಕ : ಕೇವಲ 5.30 ಗಂಟೆಗಳಲ್ಲಿ 18 ಅಧ್ಯಾಯ ಮತ್ತು 700 ಶ್ಲೋಕಗಳ ಬರಹ ಪೂರ್ಣಗೊಳಿಸಿದ ಅದ್ಭುತ ಸಾಧನೆ!

Worlds Fastest Bhagvad Gita Writer Completing 18 Chapters & 700 Verses in Just 5.30 Hours

ಕಚೇರಿಯ ಎದುರು ನಿಲ್ಲಿಸಿದ್ದ ಬೈಕ್‌ ಕಳವು