ಎರಡು ಪ್ರೇತಾತ್ಮಗಳಿಗೆ ಅದ್ದೂರಿಯಾಗಿ ನಡೆದ ಕುಲೆ ಮದಿಮೆ

ಬೆಳ್ತಂಗಡಿ : ಮದುವೆಯಾಗದೆ ಅಕಾಲಿಕವಾಗಿ ಮೃತಪಟ್ಟವರ ಪ್ರೇತಾತ್ಮಕ್ಕೆ ನಡೆಯುವ ಕುಲೆ ಮದಿಮೆಯ ಬಗ್ಗೆ ಸಾಕಷ್ಟು ಮಂದಿ ಕೇಳಿರುತ್ತೇವೆ. ಆದರೆ ನೋಡಿದವರು ಕಡಿಮೆ. ಆಟಿ ತಿಂಗಳಲ್ಲಿ ನಡೆಸಲಾಗುವ ಈ ಸಂಪ್ರದಾಯದ ಮದುವೆಯೊಂದು ಬೆಳ್ತಂಗಡಿಯಲ್ಲಿ ಅದ್ದೂರಿಯಾಗಿ ನಡೆದಿದೆ.

ಬೆಳ್ತಂಗಡಿ ತಾಲೂಕಿನ ಬರ್ಕಜೆ ದುರ್ಗಾಪರಮೇಶ್ವರಿ ಮತ್ತು ನವಗುಳಿಗ ಕ್ಷೇತ್ರದಲ್ಲಿ ಧರ್ಮದರ್ಶಿ ರಮೇಶ್‌ ಅವರ ಪೌರೋಹಿತ್ಯದಲ್ಲಿ ಕುಲೆ ಮದಿಮೆ ನಡೆಯಿತು. ನೂರಕ್ಕೂ ಹೆಚ್ಚು ಮಂದಿ ಮದುವೆಯಲ್ಲಿ ಪಾಲ್ಗೊಂಡರು.

35 ವರ್ಷಗಳ ಹಿಂದೆ ಅಕಾಲಿಕವಾಗಿ ಮೃತಪಟ್ಟಿದ್ದ ಎರಡು ಗಂಡು ಹಾಗೂ ಎರಡು ಹೆಣ್ಣು ಮಕ್ಕಳ ಪ್ರೇತಾತ್ಮಕ್ಕೆ ಮದುವೆ ನೆರವೇರಿಸಲಾಯಿತು.

ಬೆಳ್ತಂಗಡಿ ತಾಲೂಕಿನ ಶಾರದಾ ಎಂಬ ವಧು ಮತ್ತು ಬಂಟ್ವಾಳ ತಾಲೂಕಿನ ಕಲ್ಲಡ್ಕದ ಸದಾಶಿವ ಎಂಬ ವರನ ಕುಟುಂಬ ಮತ್ತು ಜಾರಗುಡ್ಡೆಯ ಯಾದವ ಹಾಗೂ ಬಂಟ್ವಾಳ ತಾಳೂಕಿನ ನಯನಾಡ್‌ನ ಯಶೋಧಾ ಎಂಬ ವಧುವಿನ ಕುಟುಂಬದ ನಡುವೆ ಪ್ರೇತಾತ್ಮ ಮದುವೆ ನಡೆಯಿತು. ಬೆಳ್ಳಿಯ ತಗಡಿನ ಮೂಲಕ ವರ ಹಾಗೂ ವಧುವಿನ ಮೂರ್ತಿ ತಯಾರಿಸಿ ಆ ರೂಪಕ್ಕೆ ಧಾರೆ ಎರೆಯಲಾಯಿತು.

ಕುಲೆ ಮದಿಮೆ ಎಂದರೆ ಇದು ಕಾಟಾಚಾರದ ಮದುವೆಯಲ್ಲ. ಮಾಮೂಲಿ ಮದುವೆ ಹೇಗೆ ನಡೆಯುತ್ತದೋ ಹಾಗೆಯೇ ಕುಲೆ ಮದಿಮೆಯೂ ಅದ್ದೂರಿಯಾಗಿ ನಡೆದಿದೆ. ಗಂಡು ನೋಡುವ ಶಾಸ್ತ್ರ, ನಿಶ್ಚಿತಾರ್ಥ, ವರನ ಮನೆಗೆ ದಿಬ್ಬಣ ಬರುವುದು, ಹೆಣ್ಣಿಗೆ ಸೀರೆ, ರವಿಕೆ, ಕರಿಮಣಿ, ಕಾಲುಂಗುರ, ಬಳೆ, ಗಂಡಿಗೆ ಪಂಚೆ, ಶರ್ಟ್‌ ಸಿದ್ಧಪಡಿಸಿ ಶಾಸ್ತ್ರಬದ್ಧವಾಗಿಯೇ ಮದುವೆಯಾಗಿದೆ. ಬಳಿಕ ಮದುವೆ ಊಟವನ್ನೂ ಆಯೋಜಿಸಲಾಗಿತ್ತು.

Related posts

ಕರ್ನಾಟಕ ಕ್ರೀಡಾಕೂಟದಲ್ಲಿ ಸಮರಾಗೆ ಚಿನ್ನದ ಪದಕ

ಪ್ರಥಮ ಬಾರಿಗೆ ಯಕ್ಷ ರಂಗದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ

ನಾಪತ್ತೆಯಾಗಿರುವ ಮೀನುಗಾರನ ಕುಟುಂಬಕ್ಕೆ ಪರಿಹಾರ ಒದಗಿಸಲು ಗಂಟಿಹೊಳೆ ಆಗ್ರಹ