ಉಡುಪಿ : 1965ರಲ್ಲಿ ರಂಗಭೂಮಿಯನ್ನು ಆರಂಭಿಸುವಲ್ಲಿ ಮುಖ್ಯ ಕಾರಣೀಕರ್ತರು ಹಾಗೂ ಸುಮಾರು 43 ವರ್ಷಗಳ ಕಾಲ ಪ್ರಧಾನ ಕಾರ್ಯದರ್ಶಿಯಾಗಿ ಆನಂತರ 2 ವರ್ಷಗಳ ಕಾಲ ಸಂಸ್ಥೆಯ ಅಧ್ಯಕ್ಷರಾಗಿ ಹೀಗೆ 45 ವರ್ಷಗಳ ಕಾಲ ರಂಗಭೂಮಿಯನ್ನು ಮುನ್ನಡೆಸಿದ್ದ ದಿ. ಕುತ್ಪಾಡಿ ಆನಂದ ಗಾಣಿಗರ ಸಂಸ್ಮರಣಾರ್ಥ ಸಂಸ್ಥೆಯು ಪ್ರತೀ ವರ್ಷ ನಡೆಸುವಂತೆ ಈ ವರ್ಷದ ರಂಗಭೂಮಿ ಆನಂದೋತ್ಸವ 2024 ಕಾರ್ಯಕ್ರಮ ಉಡುಪಿ ಎಂ.ಜಿ.ಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಜೂನ್ 16 ರಂದು ಭಾನುವಾರ ಸಂಜೆ 5.45ಕ್ಕೆ ನೆರವೇರಲಿದೆ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷರು, ತಲ್ಲೂರ್ ಫ್ಯಾಮಿಲಿ ಟ್ರಸ್ಟ್‌ನ ಪ್ರವರ್ತಕರು, ರಂಗಭೂಮಿ (ರಿ.) ಉಡುಪಿಯ ಅಧ್ಯಕ್ಷರಾದ ಡಾ।। ತಲ್ಲೂರು ಶಿವರಾಮ ಶೆಟ್ಟಿಯವರು ತಿಳಿಸಿದ್ದಾರೆ.
ಅಂದು ಯಕ್ಷಗಾನ, ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ, ಸಾಂಸ್ಕೃತಿಕ ಹಾಗೂ ಉದ್ಯಮ ಕ್ಷೇತ್ರದಲ್ಲಿ ಅಭೂತಪೂರ್ವ ಸಾಧನೆ ಮಾಡಿದ ಸರಳ ಸಜ್ಜನಿಕೆಯ ಸಾಕಾರ ಮೂರ್ತಿಯೆನಿಸಿದ ಕೋಟ ಮಣೂರಿನ ಗೀತಾನಂದ ಪ್ರತಿಷ್ಠಾನದ ಪ್ರವರ್ತಕರಾದ ಶ್ರೀ ಆನಂದ ಸಿ.ಕುಂದರ್ ಇವರಿಗೆ ತಲ್ಲೂರ್ಸ್ ಫ್ಯಾಮಿಲಿ ಟ್ರಸ್ಟ್ ಪ್ರಾಯೋಜಿತ ತಲ್ಲೂರು ಗಿರಿಜಾ ಶಿವರಾಮ ಶೆಟ್ಟಿ ಸಂಸ್ಕೃತಿ ಸಾಧಕ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಲಿದೆ.
ಸಮಾರಂಭದ ಉದ್ಘಾಟನೆ ಮತ್ತು ಅಧ್ಯಕ್ಷತೆಯನ್ನು ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಅಂಬಲಪಾಡಿ ಇದರ ಪ್ರವರ್ತಕರಾದ ನಾಡೋಜ ಡಾ| ಜಿ.ಶಂಕರ್‌ರವರು ವಹಿಸಲಿರುವರು. ಮುಖ್ಯ ಅತಿಥಿಗಳಾಗಿ ಶ್ರೀ ನರೇಂದ್ರ ಕುಮಾರ್ ಕೋಟಿ (ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕರು ಹಾಗೂ ಸಾಹಿತಿ) ಮಂಗಳೂರಿನ ಖ್ಯಾತ ರಂಗಕರ್ಮಿ ಶ್ರೀ ಶಶಿರಾಜ್ ರಾವ್ ಕಾವೂರು, ಉಡುಪಿ ಜಿಲ್ಲೆಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪನಿದೇಶಕರಾದ ಶ್ರೀಮತಿ ಪೂರ್ಣಿಮಾ, ಮಹಾತ್ಮ ಗಾಂಧೀಜಿ ಸ್ಮಾರಕ (ಎಂ.ಜಿ.ಎಮ್) ಕಾಲೇಜಿನ ಪ್ರಾಚಾರರಾದ ಪ್ರೊ ಲಕ್ಷ್ಮೀ ನಾರಾಯಣ ಕಾರಂತರು ಉಪಸ್ಥಿತರಿರಲಿದ್ದಾರೆ.
ಸಭಾ ಕಾರ್ಯಕ್ರಮದ ನಂತರ ಮಂಗಳೂರಿನ ರಂಗ ಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನ ಪ್ರಸ್ತುತ ಪಡಿಸುವ ಕನ್ನಡ ನಾಟಕ ನೆಮ್ಮದಿ ಅಪಾರ್ಟ್ ಮೆಂಟ್ ಬ್ಲಾಕ್ ಬಿ. (ನೆಮ್ಮದಿ ಅಪಾರ್ಟ್‌ಮೆಂಟಿನ ಫ್ಲಾಟ್ ನಂ. 252 ನಾಟಕದ ಮುಂದುವರಿದ ಭಾಗ) ಪ್ರದರ್ಶನಗೊಳ್ಳಲಿದೆ. ಕಲಾಭಿಮಾನಿಗಳು ನಾಟಕ ರಸಿಕರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಸಮಾರಂಭವನ್ನು ಚಂದಗಾಣಿಸಿ ಕೊಡಬೇಕೆಂದು ರಂಗಭೂಮಿ (ರಿ.) ಅಧ್ಯಕ್ಷರಾದ ಡಾ. ತಲ್ಲೂರು ಶಿವರಾಮ ಶೆಟ್ಟಿಯವರು ವಿನಂತಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ರಂಗಭೂಮಿ (ರಿ.) ಉಪಾಧ್ಯಕ್ಷರಾದ ಶ್ರೀ ಎನ್. ರಾಜ್ ಗೋಪಾಲ್ ಬಲ್ಲಾಳ್, ಶ್ರೀ ಭಾಸ್ಕರ ರಾವ್ ಕಿದಿಯೂರು, ಪ್ರಧಾನ ಕಾರ್ಯದರ್ಶಿ ಪ್ರದೀಪ್ ಚಂದ್ರ ಕುತ್ಪಾಡಿ, ಜೊತೆ ಕಾರ್ಯದರ್ಶಿ ಶ್ರೀಪಾದ ಹೆಗಡೆ ಹಾಗೂ ಕೋಶಾಧಿಕಾರಿ ಯು. ಭೋಜ, ಅಮಿತಾoಜಲಿ ಕಿರಣ್ ಉಪಸ್ಥಿತರಿದ್ದರು.