ಕುಂದಾಪುರ : ಕೊಂಕಣ ರೈಲ್ವೇ ಇಲಾಖೆಯ ಸಿಬ್ಬಂದಿ, ಟ್ರ್ಯಾಕ್‌ಮೇನ್ ಹೈಟ್‌ಗೇಜ್‌ಗೆ ಪೈಂಟ್ ಮಾಡುತ್ತಿದ್ದ ವೇಳೆ ಆಯ ತಪ್ಪಿ ಬಿದ್ದು ಗಂಭೀರ ಗಾಯಗೊಂಡು ಬ್ರೈನ್‌ಡೆಡ್ ಆದ ಘಟನೆ ಸೋಮವಾರ ಮಧ್ಯಾಹ್ನ ಕುಂದಾಪುರ ರೈಲ್ವೇ ಸ್ಟೇಷನ್‌ನಲ್ಲಿ ನಡೆದಿದೆ.
ಬೈಂದೂರು ತಾಲೂಕಿನ ಬಿಜೂರು ನಿವಾಸಿ ಆನಂದನ್ (43) ಬ್ರೈನ್‌ಡೆಡ್ ಆಗಿ ಮಣಿಪಾಲ ಖಾಸಗೀ ಆಸ್ಪತ್ರೆಯ ಐಸಿಯುನಲ್ಲಿ ದಾಖಲಾಗಿದ್ದಾರೆ.
ಬಿಜೂರು ನಿವಾಸಿ ಆನಂದನ್ ಕಳೆದ ಹತ್ತು ವರ್ಷಗಳಿಂದ ಕೊಂಕಣ ರೈಲ್ವೇ ಇಲಾಖೆಯಲ್ಲಿ ಟ್ರ್ಯಾಕ್ ಮೇನ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಸೋಮವಾರ ಕುಂದಾಪುರದ ರೈಲ್ವೇ ಸ್ಟೇಷನ್‌ನಲ್ಲಿ ಹೈಟ್‌ಗೇಜ್‌ಗೆ ಪೈಂಟ್ ಮಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಫ್ಲಾಟ್ ಫಾರ್ಮ್ ಮೇಲೆ ಬಿದ್ದಿದ್ದಾರೆ. ಬಿದ್ದ ರಭಸಕ್ಕೆ ತಲೆ ಒಡೆದು ಹೋಗಿದ್ದು, ತಕ್ಷಣ ಮಣಿಪಾಲ ಆಸ್ಪತ್ರೆಗೆ ಸಿಬ್ಬಂದಿಗಳ ಸಹಾಯದಿಂದ ಕರೆದೊಯ್ಯಲಾಯಿತು. ಆಸ್ಪತ್ರೆಯಲ್ಲಿ ಪರೀಕ್ಷಿಸಿದ ವೈದ್ಯರು ಆನಂದನ್ ಅವರ ಮೆದುಳು ನಿಷ್ಕ್ರಿಯವಾಗಿದೆ ಎಂದು ದೃಢಪಡಿಸಿದ್ದಾರೆ ಎನ್ನಲಾಗಿದೆ. ಇದೀಗ ಆನಂದನ್ ಅವರ ಅಂಗಾಂಗ ದಾನ ಮಾಡಲು ಕುಟುಂಬಸ್ಥರು ಸಿದ್ದರಾಗಿದ್ದು ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.
ಆನಂದನ್ ಉತ್ತಮ ಸ್ಪೋರ್ಟ್ಸ್ ಮ್ಯಾನ್ ಕೂಡಾ ಆಗಿದ್ದು, ಕ್ರಿಕೆಟ್‌ನಲ್ಲಿ ಹಲವಾರು ಟ್ರೋಫಿಗಳನ್ನು ತನ್ನದಾಗಿಸಿಕೊಂಡಿದ್ದರು. ಸದಾ ಕ್ರಿಯಾಶೀಲವಾಗಿದ್ದ ಆನಂದನ್ ಸ್ಥಳೀಯವಾಗಿ ಸಮಾಜಸೇವೆಯಲ್ಲಿಯೂ ತೊಡಗಿಸಿಕೊಂಡಿದ್ದರು. ಆನಂದನ್ ಅವರ ಪತ್ನಿ ನಾಗಶ್ರೀ ಪೂಜಾರಿ ಅವರು ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ಹಿಂದೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಕೆಲಸ ಮಾಡುತ್ತಿದ್ದ ಅವರು ಇತ್ತೀಚೆಗಷ್ಟೇ ಕುಂದಾಪುರ ಠಾಣೆಗೆ ವರ್ಗವಾಗಿದ್ದರು. ಇಬ್ಬರು ಪುಟ್ಟ ಮಕ್ಕಳಿದ್ದಾರೆ. ಈ ಕುರಿತು ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.