ಸೆ.7 ರಿಂದ ಮೂರು ದಿನ ಕೋಡಿಕಲ್ ಗಣೇಶೋತ್ಸವ

ಮಂಗಳೂರು : ಕೋಡಿಕಲ್ ಗಣೇಶೋತ್ಸವವು ನಿರಂತರ ಹದಿನೈದು ವರ್ಷಗಳಿಂದ ವಿಶ್ವ ಹಿಂದೂ ಪರಿಷದ್, ಬಜರಂಗದಳ ಕೋಡಿಕಲ್ ಶಾಖೆ ಮತ್ತು ಶ್ರೀ ಗಣೇಶೋತ್ಸವ ಸಮಿತಿಯ ವತಿಯಿಂದ ಬಹಳ ವಿಜೃಂಭಣೆಯಿಂದ ನಡೆದು ಬಂದಿದೆ. ಈ ಬಾರಿ ಸಪ್ಟೆಂಬರ್ ತಿಂಗಳ 7 ಶನಿವಾರದಿಂದ ಸೆ. 9 ಸೋಮವಾರದವರೆಗೆ ನಡೆಸಲು ನಿರ್ಧರಿಸಲಾಗಿದೆ ಎಂದುವಿಶ್ವ ಹಿಂದು ಪರಿಷತ್ ಬಜರಂಗದಳ, ಕೋಡಿಕಲ್‌ ಶಾಖೆ ಮತ್ತು ಶ್ರೀ ಗಣೇಶೋತ್ಸವ ಸಮಿತಿ ಕೋಡಿಕಲ್‌ನ ಅಧ್ಯಕ್ಷ ಮಹಾಬಲ ಚೌಟ ತಿಳಿಸಿದರು.

ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ವೇ। ಮೂ| ವಿಶ್ವಕುಮಾ‌ರ್ ಜೋಯಿಸರ ಪೌರೋಹಿತ್ಯದಲ್ಲಿ 7ರ ಬೆಳಿಗ್ಗೆ ಗಣೇಶನನ್ನು ಸ್ಥಾಪಿಸಿ 9ರ ಸಾಯಂಕಾಲ ವೈಭವದ ಶೋಭಾಯಾತ್ರೆಯಲ್ಲಿ ಸಾಗಿ ಫಲ್ಗುಣಿ ನದಿಯಲ್ಲಿ ಜಲಸ್ಥಂಭನಗೊಳಿಸಲಾಗುವುದು. “ಕೋಡಿಕಲ್ ಶ್ರೀ ಗಣೇಶೋತ್ಸವ” ಎಂದೇ ಖ್ಯಾತಿಯಾದ ಈ ಸಂಭ್ರಮದಲ್ಲಿ ಮೂರು ದಿನಗಳಲ್ಲಿ ವಿಶೇಷ ಸೇವೆಗಳೊಂದಿಗೆ ವಿಶೇಷ ಧಾರ್ಮಿಕ ಪ್ರಕ್ರಿಯೆಗಳೂ ಜರಗಲಿದೆ ಎಂದರು.

ಶ್ರೀ ಗಣೇಶ ಕ್ರೀಡೋತ್ಸವ : ಈ ಪ್ರಯುಕ್ತ ಸೆ.1 ರವಿವಾರ ಶಾಲಾ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ದೈಹಿಕ ಹಾಗೂ ಬೌದ್ಧಿಕ ಸ್ಪರ್ಧೆಗಳನ್ನು ಕೋಡಿಕಲ್ ಸರಕಾರಿ ಶಾಲೆಯಲ್ಲಿ ಆಯೋಜಿಸಲಾಗುತ್ತಿದೆ. ಪ್ರಶಸ್ತಿಗಳನ್ನು ಗಣೇಶ ಮಂಟಪದಲ್ಲಿ ನೀಡಲಾಗುವುದು. ದ.ಕ. ಜಿಲ್ಲೆಯ ಎಲ್ಲಾ ಶಾಲಾ ಕಾಲೇಜಿನ ವಿದ್ಯಾರ್ಥಿಗಳ ಸಹಿತ ಸಾರ್ವಜನಿಕರೂ ಭಾಗವಹಿಸಲಿರುವರು ಗಣ್ಯರು ಕ್ರೀಡೋತ್ಸವವನ್ನು ಉದ್ಘಾಟಿಸಲಿರುವರು ಎಂದರು.

ಸಾಂಸ್ಕೃತಿಕ ಕಾರ್ಯಕ್ರಮ : ಸೆ. 7ರಂದು ಸಂಜೆ 6 ಗಂಟೆಗೆ ಧಾರ್ಮಿಕ ಕಾರ್ಯಕ್ರಮ, ರಾತ್ರಿ 8 ಕ್ಕೆ ರಂಗಪೂಜೆ ಹಾಗೂ ಮಹಾಪೂಜೆಯ ನಂತರ ರಾತ್ರಿ 9 ಕ್ಕೆ ಜೀವನ್ ಮಂಜೇಶ್ವರ ಸಾರಥ್ಯದ ಯಶಸ್ವೀ ಕಲಾವಿದರು ಮಂಜೇಶ್ವರ ಇವರ ಅಭಿನಯದ ತುಳು ಭಯಾನಕ ಹಾಸ್ಯಮಯ ನಾಟಕ ಅಬ್ಬರ ಪ್ರದರ್ಶನಗೊಳ್ಳಲಿದೆ ಎಂದರು.

ಸೆ. 8 ರಂದು 6 ಗಂಟೆಗೆ ಧಾರ್ಮಿಕ ಸಭಾ ಕಾರ್ಯಕ್ರಮ ಜರಗಲಿದೆ. ರಾತ್ರಿ ರಂಗಪೂಜೆಯ ಬಳಿಕ ಕಲರ್ಸ್ ಕನ್ನಡ ವಾಹಿನಿಯ ಎದೆತುಂಬಿ ಹಾಡುವೆನು ಖ್ಯಾತಿಯ ಸಂದೇಶ್ ನೀರುಮಾರ್ಗ ಮತ್ತು ಬಳಗದವರಿಂದ ಭಕ್ತಿಗಾನಾಮೃತ ಸುಗಮ ಸಂಗೀತ ಹಾಗೂ ರಾಜ್ಯಮಟ್ಟದ ಪ್ರಶಸ್ತಿ ವಿಜೇತ ಸುದರ್ಶನ್ ಆಚಾರ್ಯ ಮುದರಂಗಡಿ ಇವರಿಂದ ಮಿಮಿಕ್ರಿ ಕಾರ್ಯಕ್ರಮ ಪ್ರದರ್ಶನಗೊಳ್ಳಲಿದೆ ಎಂದರು.

ವೈಭವದ ಶೋಭಾಯಾತ್ರೆ: ನಾಡಿನ ಅನೇಕ ಗಣ್ಯರು, ಧಾರ್ಮಿಕ ಮುಂದಾಳುಗಳು, ಗಣ್ಯರು ದಿನವೂ ಅತಿಥಿಗಳಾಗಿ ಭಾಗವಹಿಸಿ ಗಣೇಶೋತ್ಸವವನ್ನು ಸಂಪನ್ನಗೊಳಿಸುತ್ತಾರೆ. 9ರ ಸಂಜೆ 6.30 ಗಂಟೆಗೆ ವಿಸರ್ಜನಾ ಪೂಜೆ ಜರಗಿ, ಗಣೇಶ ಮಂಟಪದಿಂದ ಶ್ರೀ ವಿನಾಯಕನ ವೈಭವದ ಶೋಭಾಯಾತ್ರೆ ಕೋಡಿಕಲ್‌ನ ಮುಖ್ಯ ರಸ್ತೆಗಳಲ್ಲಿ ಸಂಚರಿಸಿ ರಾಷ್ಟ್ರೀಯ ಹೆದ್ದಾರಿಯ ಮೂಲಕ ಉರ್ವಸ್ಟೋರಿಗೆ ಬಂದು ನಂತರ ಅಶೋಕನಗರಕ್ಕೆ ಸಾಗಿ ದಂಬೆಲ್‌ನ ಫಲ್ಗುಣಿ ನದಿಯಲ್ಲಿ ವಿಸರ್ಜಿಸಲ್ಪಡುತ್ತದೆ. ಅನೇಕ ಭಜಕರ ಕಣ್ಣುಗಳಿಗೆ ಹಬ್ಬವನ್ನುಂಟು ಮಾಡುವ ಈ ಶೋಭಾಯಾತ್ರೆ ಆಕರ್ಷಣೀಯವಾಗಿರುತ್ತದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಗೌರವಾಧ್ಯಕ್ಷ ಕಿರಣ್ ಜೋಗಿ, ಉಪಾಧ್ಯಕ್ಷರುಗಳಾದ ಪುಷ್ಪರಾಜ್ ಶೆಟ್ಟಿ, ಕಿರಣ್ ಕುಮಾರ್ ಕೋಡಿಕಲ್, ಮನೋಜ್ ಕುಮಾರ್, ಸಾಂಸ್ಕೃತಿಕ ಕಾರ್ಯದರ್ಶಿ ವರ್ಕಾಡಿ ರವಿ ಅಲೆವೂರಾಯ, ಕಾರ್ಯದರ್ಶಿ ಸತೀಶ್ ಶೆಟ್ಟಿ ಉಪಸ್ಥಿತರಿದ್ದರು.

Related posts

ಸಿಬ್ಬಂದಿಗಳಿಗೆ ಝೂನೋಟಿಕ್ ರೋಗಗಳ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕುರಿತ ತರಬೇತಿ ಸಾಧನಗಳನ್ನು ಪ್ರಾರಂಭಿಸಿದ ಪ್ರಸನ್ನ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್

ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಉಡುಪಿ ಜಿಲ್ಲೆಯ ಪ್ರತಿಭಾವಂತ ವಿದ್ಯಾರ್ಥಿ ದೀಪೇಶ್ ದೀಪಕ್ ಶೆಣೈ ದ್ವಿತೀಯ

ಉಪಚುನಾವಣೆ ಫಲಿತಾಂಶಕ್ಕೆ ಇನ್ನೊಂದೇ ದಿನ ಬಾಕಿ – ಡಿಕೆಶಿಯಿಂದ ಕೊಲ್ಲೂರು ಮೂಕಾಂಬಿಕೆ ದರ್ಶನ