ಮಂಗಳೂರು : ವಿಟ್ಲ ಪಟ್ಟಣ ಪಂಚಾಯತ್‌ನ ಪ್ರಥಮ ಅವಧಿಗೆ ಅಧ್ಯಕ್ಷರಾಗಿ ಕರುಣಾಕರ ನಾಯ್ತೋಟ್ಟು, ಉಪಾಧ್ಯಕ್ಷೆಯಾಗಿ ಸಂಗೀತಾ ಜಗದೀಶ ಪಾಣೆಮಜಲು ಆಯ್ಕೆಯಾಗಿದ್ದಾರೆ.
ವಿಟ್ಲ ಪಟ್ಟಣ ಪಂಚಾಯತ್‌ಗೆ ಚುನಾವಣೆ ನಡೆದು 2 ವರ್ಷ 8 ತಿಂಗಳು ಕಳೆದ ಬಳಿಕ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದಿದೆ. ಒಟ್ಟು 18 ವಾರ್ಡ್‌ಗಳಲ್ಲಿ ಬಿಜೆಪಿ ಬೆಂಬಲಿತರು 12, ಕಾಂಗ್ರೆಸ್ ಬೆಂಬಲಿತರು 5 ಮತ್ತು ಎಸ್‌ಡಿಪಿಐ ಬೆಂಬಲಿತರು 1 ಚುನಾಯಿತರಾಗಿದ್ದರು. ಅಧ್ಯಕ್ಷ ಸ್ಥಾನವು ಹಿಂದುಳಿದ ವರ್ಗ ಬಿ ಮತ್ತು ಉಪಾಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ಎ ಮಹಿಳೆ ಮೀಸಲಾಗಿತ್ತು.
ಬಿಜೆಪಿಯಿಂದ ಅಧ್ಯಕ್ಷ ಸ್ಥಾನಕ್ಕೆ ಕರುಣಾಕರ, ಉಪಾಧ್ಯಕ್ಷ ಸ್ಥಾನಕ್ಕೆ ಸಂಗೀತಾ ಪಾಣೆಮಜಲು ನಾಮಪತ್ರ ಸಲ್ಲಿಸಿದ್ದರು. ಆದರೆ ಕಾಂಗ್ರೆಸ್‌ನಲ್ಲಿ ಅಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಪ್ರಕಾರ ಅರ್ಹ ಅಭ್ಯರ್ಥಿಗಳಿಲ್ಲದ ಕಾರಣ ಕರುಣಾಕರ ಅವಿರೋಧವಾಗಿ ಆಯ್ಕೆಯಾದರು. ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ನಿಂದ ಪದ್ಮಿನಿ ನಾಮಪತ್ರ ಸ್ಪರ್ಧಿಸಿದ್ದರು. ತಹಶೀಲ್ದಾರ್ ಅರ್ಚನಾ ಭಟ್ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು.
ಸಂಸದ ಕ್ಯಾ.ಬ್ರಿಜೇಶ್ ಚೌಟ, ಮಾಜಿ ಶಾಸಕ ಸಂಜೀವ ಮಠಂದೂರು ಅವರು ನೂತನ ಅಧ್ಯಕ್ಷ-ಉಪಾಧ್ಯಕ್ಷರನ್ನು ಅಭಿನಂದಿಸಿದರು.