ಕಾಪು : ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ಪ್ರಥಮ ಹಂತದ ಜೀರ್ಣೋದ್ಧಾರ ಕಾಮಗಾರಿಗಳು ಪೂರ್ಣಗೊಂಡು ಫೆಬ್ರವರಿ 25ರಿಂದ ಮಾರ್ಚ್ 5ರ ವರೆಗೆ ಜರಗಲಿರುವ ಅಮ್ಮನ ಪ್ರತಿಷ್ಠಾ ಬ್ರಹ್ಮಕಲಶೋತ್ಸವಕ್ಕೆ ಭರದಿಂದ ಸಿದ್ಧತೆ ನಡೆಯುತ್ತಿದೆ. ಫೆಬ್ರವರಿ 14ರಂದು ಹರಿದ್ವಾರದಿಂದ ಕಾಪುವಿಗೆ ಗಂಗಾಜಲ ಆಗಮನವಾಗಲಿದೆ ಎಂದು ಗಂಗಾಜಲ ಸ್ವಾಗತ ಸಮಿತಿಯ ಅಧ್ಯಕ್ಷ ಡಾ| ದೇವಿಪ್ರಸಾದ್ ಶೆಟ್ಟಿ ಬೆಳಪು ಹೇಳಿದ್ದಾರೆ.
12ರಂದು ಕ್ಷೇತ್ರದ ಪ್ರಧಾನ ತಂತ್ರಿ ವಿ| ಕೆ.ಪಿ. ಕುಮಾರಗುರು ತಂತ್ರಿ ಅವರ ನೇತೃತ್ವದಲ್ಲಿ ಹರಿದ್ವಾರದಲ್ಲಿ ನವಕುಂಭಗಳಲ್ಲಿ ಗಂಗಾಜಲವನ್ನು ತುಂಬಿಸಿ, ಧಾರ್ಮಿಕ ವಿಧಿಗಳಿಂದ ಪೂಜಿಸಿ ಮಂಗಳೂರು ವಿಮಾನ ನಿಲ್ದಾಣಕ್ಕೆ ತರಲಾಗುತ್ತದೆ. ಆ ಬಳಿಕ ಸಮಿತಿ ಅಧ್ಯಕ್ಷ ಎಂಆರ್‌ಜಿ ಗ್ರೂಪ್ಸ್ ಸಿಎಂಡಿ ಕೆ. ಪ್ರಕಾಶ್ ಶೆಟ್ಟಿ ಅವರ ನೇತೃತ್ವದಲ್ಲಿ ಫೆಬ್ರವರಿ 14ರಂದು ಗಂಗಾಜಲವಿರುವ ನವಕುಂಭಗಳನ್ನು ಟ್ಯಾಬ್ಲೋದಲ್ಲಿ ಇರಿಸಿ ವೈಭವದ ಮೆರವಣಿಗೆ ಮೂಲಕ ಶ್ರೀ ಲಕ್ಷ್ಮೀ ಜನಾರ್ದನ ದೇವರ ಸನ್ನಿಧಾನಕ್ಕೆ ತರಲಾಗುವುದು. ಅಲ್ಲಿ 9 ದಿನ ವಿಶೇಷ ಪೂಜೆ ಸಲ್ಲಿಸಿದ ಅನಂತರ ಅಮ್ಮನ ಸನ್ನಿಧಾನಕ್ಕೆ ತರಲಾಗುವುದು ಎಂದರು.
ಸಮಿತಿ ಅಧ್ಯಕ್ಷ ಕೆ. ಪ್ರಕಾಶ್ ಶೆಟ್ಟಿ ದಂಪತಿ, ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ ದಂಪತಿ, ಕಾರ್ಯಾಧ್ಯಕ್ಷ ಮತ್ತು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಸಮಿತಿ ಕಾರ್ಯಾಧ್ಯಕ್ಷ ಉದಯ ಸುಂದರ್ ಶೆಟ್ಟಿ ದಂಪತಿ, ಪ್ರಧಾನ ತಂತ್ರಿ ವಿ| ಕೆ. ಪಿ. ಕುಮಾರಗುರು ತಂತ್ರಿ ದಂಪತಿ ಗಂಗಾ ಜಲ ತರಲು ಹರಿದ್ವಾರಕ್ಕೆ ತೆರಳಿದ್ದಾರೆ ಎಂದರು.
ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ರತ್ನಾಕರ ಶೆಟ್ಟಿ ನಡಿಕೆರೆ, ಸಮಿತಿಯ ಕಾರ್ಯಾಧ್ಯಕ್ಷ ಯೋಗೀಶ್ ಶೆಟ್ಟಿ ಬಾಲಾಜಿ, ಪ್ರ. ಕಾರ್ಯದರ್ಶಿ ಸುಹಾಸ್ ಹೆಗ್ಡೆ ನಂದಳಿಕೆ, ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷರಾದ ಕಾಪು ದಿವಾಕರ ಶೆಟ್ಟಿ, ಮಾಧವ ಆರ್. ಪಾಲನ್, ಪ್ರಧಾನ ಕಾರ್ಯದರ್ಶಿ ರಮೇಶ್ ಹೆಗ್ಡೆ, ಸಿಇಒ ಕೆ. ರವಿಕಿರಣ್ ಮತ್ತಿತರರು ಭಾಗವಹಿಸಿದ್ದರು.