ಮಂಗಳೂರು : ಕರಾವಳಿಯಲ್ಲಿ ಮುಂದಿನ ವಾರದಿಂದ ಕಂಬಳ ಕಲರವ ಶುರುವಾಗಲಿದೆ. ಈಗಾಗಲೇ ಕಂಬಳಕ್ಕೆ ಸಿದ್ಧತೆ ಪೂರ್ಣಗೊಂಡಿದ್ದು, ಎಪ್ರಿಲ್‌ವರೆಗೂ ಕಂಬಳ ಕೂಟ ನಡೆಯಲಿದೆ. ಆದರೆ ಅತೀ ನಿರೀಕ್ಷಿತ ಪಿಲಿಕುಳ ಕಂಬಳ ಹಾಗೂ ಬೆಂಗಳೂರು ಕಂಬಳಕ್ಕೆ ತೊಡಕು ಎದುರಾಗಿದೆ.
ನವೆಂಬರ್ 23ರಿಂದ ಕೊಡಂಗೆಯಲ್ಲಿ ಎಲ್ಲಾ ವಿಭಾಗದ ಕಂಬಳ ಕೂಟ ಆರಂಭಗೊಂಡು, ಎಪ್ರಿಲ್‌ವರೆಗೂ ಪ್ರತೀ ವಾರಾಂತ್ಯ ಕಂಬಳಗಳು ನಡೆಯಲಿದೆ. ಎಪ್ರಿಲ್ 19ರಂದು ಮಲೆನಾಡಿನ ಶಿವಮೊಗ್ಗದಲ್ಲಿ ಮೊದಲ ಕಂಬಳ ಕೂಟ ನಡೆಯಲಿದೆ.
ಇನ್ನು, ಮಂಗಳೂರಿನ ಪಿಲಿಕುಳದಲ್ಲಿ 10ವರ್ಷಗಳಿಂದ ಕಾರಣಾಂತರಗಳಿಂದ ನಿಂತಿದ್ದ ಕಂಬಳವನ್ನು ಈ ಬಾರಿ ಜಿಲ್ಲಾಡಳಿತದಿಂದ ನಡೆಸಲು ತೀರ್ಮಾನಿಸಲಾಗಿತ್ತು. ಆದರೆ ಪಿಲಿಕುಳ ಕಂಬಳಕ್ಕೆ ಕಾನೂನು ತೊಡಕು ಎದುರಾಗಿದೆ. ಪಿಲಿಕುಳದ ಜೈವಿಕ ಉದ್ಯಾನವನದ ಬಳಿ ಕಂಬಳ ನಡೆಸಿದ್ರೆ ವನ್ಯಜೀವಿಗಳಿಗೆ ತೊಂದರೆಯಾಗುತ್ತದೆಂದು ಪ್ರಾಣಿ ಪ್ರಿಯರು ಕೋರ್ಟ್ ಮೆಟ್ಟಿಲೇದ್ದಾರೆ. ಅಲ್ಲದೆ ಕಳೆದ ಬಾರೀ ಹೈಪ್ ಕ್ರಿಯೇಟ್ ಮಾಡಿದ್ದ ಬೆಂಗಳೂರು ಕಂಬಳವೂ ಈ ಬಾರಿ ನಡೆಯೋದು ಡೌಟ್ ಎನ್ನುವಂತಿದೆ.
ಒಟ್ಟಿನಲ್ಲಿ, ತುಳುನಾಡಿನ ಜನಪದ ಕ್ರೀಡೆ ಕಂಬಳ ಮುಂದಿನ ವಾರದಿಂದ ಅದ್ದೂರಿಯಾಗಿ ಆರಂಭ ಆಗಲಿದೆ. ಕಂಬಳ ಪ್ರಿಯರು ಕಂಬಳವನ್ನು ಕಣ್ತುಂಬಿಕೊಳ್ಳಲು ಕಾಯುತ್ತಿದ್ದಾರೆ. ಪ್ರಪಂಚದ ಯಾವ ಮೂಲೆಯಲ್ಲಿದ್ದರೂ ಸೈ ವಾರಾಂತ್ಯಕ್ಕೆ ಕರಾವಳಿಗೆ ಬಂದರೆ, ದಕ್ಷಿಣ ಕನ್ನಡ ಅಥವಾ ಉಡುಪಿ ಜಿಲ್ಲೆಗಳ ಎಲ್ಲಾದರೊಂದು ಕಡೆ ಕಂಬಳ ಇದ್ದೇ ಇರುತ್ತದೆ. ಆದ್ದರಿಂದ ಕಂಬಳ ಕರೆಯಲ್ಲಿ ಕೋಣಗಳ ಓಟ ನೋಡಿ ಎಂಜಾಯ್ ಮಾಡಬಹುದು.