ಕಮಲಾಕ್ಷಿ ಸೊಸೈಟಿ ಗ್ರಾಹಕರಿಗೆ ನೂರಾರು ಕೋಟಿ ವಂಚನೆ ಸದನದಲ್ಲಿ ಪ್ರಸ್ತಾಪ : ಯಶ್‌ಪಾಲ್ ಸುವರ್ಣ

ಉಡುಪಿ : ಉಡುಪಿಯ ಕಮಲಾಕ್ಷಿ ವಿವಿಧೋದ್ದೇಶ ಸಹಕಾರಿ ಸೊಸೈಟಿಯಲ್ಲಿ ನೂರಾರು ಕೋಟಿ ಠೇವಣಿ ಸಂಗ್ರಹಿಸಿ ವಂಚನೆ ಮಾಡಿರುವ ಪ್ರಕರಣದ ಬಗ್ಗೆ ಈಗಾಗಲೇ ಇಲಾಖೆಯ ಅಧಿಕಾರಿಗಳಿಂದ ಮಾಹಿತಿ ವಿಸ್ತೃತ ಮಾಹಿತಿ ಕೋರಿದ್ದು, ತನಿಖೆಯ ಪ್ರಗತಿಯ ಬಗ್ಗೆಯೂ ಮುಂಬರುವ ಬೆಳಗಾವಿ ಅಧಿವೇಶನದಲ್ಲಿ ಪ್ರಸ್ತಾಪಿಸಿ ವಂಚನೆಗೊಳಗಾದ ಠೇವಣಿದಾರರಿಗೆ ನ್ಯಾಯ ಒದಗಿಸಲು ರಾಜ್ಯ ಸರ್ಕಾರವನ್ನು ಅಗ್ರಹಿಸುವುದಾಗಿ ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ತಿಳಿಸಿದ್ದಾರೆ.

ಈಗಾಗಲೇ ಹಲವಾರು ಮಂದಿ ಸಂತ್ರಸ್ತ ಠೇವಣಿದಾರರು ಶಾಸಕರ ಕಚೇರಿಗೆ ಭೇಟಿ ನೀಡಿ ತನಿಖೆ ಚುರುಕುಗೊಳಿಸಿ ಠೇವಣಿ ಹಣ ವಾಪಾಸು ಕೊಡಿಸುವಂತೆ ಮನವಿ ಮಾಡುತ್ತಿದ್ದಾರೆ.

ಈಗಾಗಲೇ ಮುಖ್ಯಮಂತ್ರಿಗಳು ಹಣಕಾಸು ಸಂಸ್ಥೆಗಳ ವಂಚನೆಯಿಂದ ಠೇವಣಿದಾರರ ಹಿತಾಸಕ್ತಿ ರಕ್ಷಣೆ ಮಾಡುವ ಸಂಬಂಧ ಕಾನೂನು ತಿದ್ದುಪಡಿಗೆ ಕರ್ನಾಟಕ ಹಣಕಾಸು ಸಂಸ್ಥೆಗಳಲ್ಲಿ ಠೇವಣಿದಾರರ ಹಿತಾಸಕ್ತಿ ಸಂರಕ್ಷಣೆ (ತಿದ್ದುಪಡಿ) ವಿಧೇಯಕ 2024 ಈಗಾಗಲೇ ಸಚಿವ ಸಂಪುಟ ಅನುಮೋದಿಸಿದ್ದು, ಬೆಳಗಾವಿ ಅಧಿವೇಶನದಲ್ಲಿ ವಿಧೇಯಕ ಮಂಡಿಸಲು ಮುಂದಾಗಿದ್ದು, ಇದೇ ಸಂದರ್ಭದಲ್ಲಿ ಸರ್ಕಾರ ತಕ್ಷಣ ಸಂತ್ರಸ್ತರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ವಂಚನೆ ಮಾಡಿದ ವ್ಯಕ್ತಿಗಳ ಹಾಗೂ ಸಂಸ್ಥೆಯ ಆಸ್ತಿಗಳನ್ನು ಮುಟ್ಟುಗೋಲು ಹಾಕಿ ಹರಾಜು ಮಾಡಿ ಹಣವನ್ನು ಠೇವಣಿದಾರರಿಗೆ ನೀಡಿ, ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲು ಮುಂದಾಗಬೇಕು ಎಂದು ತಿಳಿಸಿದ್ದಾರೆ.

ಉಡುಪಿಯ ಪರಿವಾರ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಬ್ಯಾಂಕಿಂಗ್ ನಿಯಮಾವಳಿಯನ್ನು ಮೀರಿ ಬೇನಾಮಿ ಹೆಸರಿನಲ್ಲಿ ಠೇವಣಿ ಇರಿಸಿದ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸುವಂತೆ ಸಾರ್ವಜನಿಕರ ದೂರಿನ ಮೇರೆಗೆ ಮುಖ್ಯಮಂತ್ರಿಗಳ ವಿಶೇಷ ಕರ್ತವ್ಯಾಧಿಕಾರಿಗಳ ಸೂಚನೆಯ ಮೇರೆಗೆ ಸಹಕಾರಿ ಸಂಘಗಳ ಜಂಟಿ ನಿರ್ದೇಶಕರು ಉಡುಪಿ ಜಿಲ್ಲಾ ಸಹಕಾರಿ ಸಂಘಗಳ ಉಪ ನಿಬಂಧಕರಿಗೆ ತಕ್ಷಣ ಪರಿಶೀಲನೆ ನಡೆಸಿ ಮುಂದಿನ ಕ್ರಮಕ್ಕೆ ಸ್ಪಷ್ಟ ಅಭಿಪ್ರಾಯ ಹಾಗೂ ಪೂರಕ ದಾಖಲೆಯೊಂದಿಗೆ ಜರೂರು ವರದಿ ನೀಡುವಂತೆ ಸೂಚನೆ ನೀಡಿದ್ದು, ಸಹಕಾರಿ ವ್ಯವಸ್ಥೆಯ ಮೇಲೆ ವಿಶ್ವಾಸಾರ್ಹತೆಯನ್ನು ಕಾಪಾಡುವ ನಿಟ್ಟಿನಲ್ಲಿ ಗಂಭೀರವಾಗಿ ಪರಿಗಣಿಸಿ ತಕ್ಷಣ ವರದಿ ನೀಡುವಂತೆ ಆಗ್ರಹಿಸುವುದಾಗಿ ಯಶ್ ಪಾಲ್ ಸುವರ್ಣ ತಿಳಿಸಿದ್ದಾರೆ.

Related posts

ಕರ್ನಾಟಕ ಕ್ರೀಡಾಕೂಟದಲ್ಲಿ ಸಮರಾಗೆ ಚಿನ್ನದ ಪದಕ

ಯಕ್ಷಗಾನ ಪ್ರದರ್ಶನಕ್ಕೆ ಅಡ್ಡಿ – ಬ್ರಿಟಿಷ್ ಆಡಳಿತವನ್ನೂ ಮೀರಿಸಿದ ಸಿದ್ಧರಾಮಯ್ಯ ಸರ್ಕಾರ : ಯಶ್‌ಪಾಲ್ ಸುವರ್ಣ

ಮಾರಿದ ಹಳೆಯ ಬಸ್ಸನ್ನು ಕದ್ದು ತಂದ ಆರೋಪ – ತಂದೆ ಮಗನ ವಿರುದ್ಧ ದೂರು ದಾಖಲು !