ಯಡಮೊಗೆ ಹಾಗೂ ತೊಂಬಟ್ಟುವಿನಲ್ಲಿ ಕಾಲು ಸಂಕ ಉದ್ಘಾಟಿಸಿದ ಗಂಟಿಹೊಳೆ

ಬೈಂದೂರು : ಬೈಂದೂರು ತಾಲ್ಲೂಕಿನ ಯಡಮೊಗೆ ಹಾಗೂ ತೊಂಬಟ್ಟುವಿನಲ್ಲಿ ಕಾಲುಸಂಕವನ್ನು ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಅವರು ಇಂದು ಉದ್ಘಾಟಿಸಿದರು.

ಸಮೃದ್ಧ ಬೈಂದೂರು ಪರಿಕಲ್ಪನೆಯಲ್ಲಿ ಬೆಂಗಳೂರಿನ ಡಾ. ಆರ್. ಅರುಣಾಚಲಮ್ ಚಾರಿಟೇಬಲ್ ಟ್ರಸ್ಟ್ ಸಹಕಾರದೊಂದಿಗೆ ಯಡಮೊಗೆಯ ರಾಂಪಯ್ಯಜಡ್ಡು ಹಾಗೂ ಕುಮ್ಟಿಬೇರು ಸಂಪರ್ಕಿಸುವ ಮತ್ತು ತೊಂಬಟ್ಟುವಿನ ಕಬ್ಬಿನಾಲೆ – ಗುಡ್ಡಿಮನೆ ಸಂಪರ್ಕಿಸುವಲ್ಲಿ ಅತ್ಯಾಧುನಿಕ ಮಾದರಿಯ ಮತ್ತು ಹಳೆಯ ಬಸ್‌, ಲಾರಿಗಳ ಚಾಸಿಸಿ ಬಳಸಿ ನಿರ್ಮಾಣಗೊಂಡ ಕಾಲುಸಂಕ ಲೋಕಾರ್ಪಣೆಗೊಳಿಸಿ ಮಾತನಾಡಿದ ಶಾಸಕರು ಗ್ರಾಮೀಣ ಜನರ ಅನೇಕ ದಶಕಗಳ ಕನಸನ್ನು ನನಸು ಮಾಡಿರುವುದರ ಬಗ್ಗೆ ಹೆಮ್ಮೆಯಿದೆ ಎಂದು ಹೇಳಿದರು.

ಸರ್ಕಾರಿ ವ್ಯವಸ್ಥೆಯ ಮೂಲಕ ಕಾಲು ಸಂಕ ನಿರ್ಮಿಸಲು ಅಸಾಧ್ಯ ಎನ್ನುವುದು ನಮ್ಮ ಗಮನದಲ್ಲಿತ್ತು. ಆದರೆ ಹಾಗೆಯೇ ಬಿಟ್ಟರೆ ನಮ್ಮ ಜನರ ಸಮಸ್ಯೆಯೂ ಬಗೆಹರಿಯುವುದಿಲ್ಲ ಎನ್ನುವುದೂ ಕೂಡಾ ಅರಿವಿತ್ತು. ಇದಕ್ಕಾಗಿ ನಾನು ಮತ್ತು ಅನುದೀಪ್ ಹೆಗ್ಡೆ ಅವರು ಸೇತುವೆಯ ರೀತಿಯಲ್ಲಿ ದಾನಿಗಳನ್ನು ಜೋಡಿಸುವ ಕೆಲಸ ಮಾಡಿದ್ದೇವೆ ಅಷ್ಟೇ, ಉಳಿದೆಲ್ಲವೂ ಕೂಡಾ ದೇವರು ದಾನಿಗಳ ಮೂಲಕ ಮಾಡಿಸಿದ್ದಾರೆ. ದೂರದ ಬೆಂಗಳೂರಿನಲ್ಲಿ ಕುಳಿತು ಅರುಣಾಚಲಮ್ ಟ್ರಸ್ಟ್ ನಮ್ಮ ಬೈಂದೂರಿನ ಕ್ಷೇತ್ರದ ಗ್ರಾಮೀಣ ಭಾಗದ ಬಗ್ಗೆ ಯೋಚಿಸುತ್ತದೆ ಎಂದರೆ ಅಂತಹ ಸಂಸ್ಥೆಗೆ ನಾವು ಎಷ್ಟು ಚಿರಋಣಿಗಳಾಗಿದ್ದರೂ ಸಾಲದು ಎಂದು ಅಭಿಪ್ರಾಯಿಸಿ ಟ್ರಸ್ಟ್ ಸಹಕಾರ ಮತ್ತು ಸ್ಥಳೀಯ ಜನರ ಶ್ರಮದಿಂದ ಇಂದು ಸುಸಜ್ಜಿತ ಕಾಲು ಸಂಕ ನಿರ್ಮಾಣಗೊಂಡಿದೆ. ಅರುಣಾಚಲಂ ಟ್ರಸ್ಟ್ ಮುಖ್ಯಸ್ಥರಿಗೆ, ಪದಾಧಿಕಾರಿಗಳಿಗೆ ಹಾಗೂ ಸ್ಥಳೀಯರಿಗೆ ಧನ್ಯವಾದ ಸಲ್ಲಿಸಿದರು.

ಸಮಾರಂಭದ ಮುಖ್ಯ ಉಪಸ್ಥಿತಿ ವಹಿಸಿದ್ದ ಡಾ. ಆರ್. ಅರುಣಾಚಲಮ್ ಚಾರಿಟೇಬಲ್ ಟ್ರಸ್ಟ್ ಇದರ ಟ್ರಸ್ಟಿಗಳು ಹಾಗೂ ದಾನಿಗಳಾದ ಡಾ. ಆರ್. ಅರುಣಾಚಲಮ್ ಅವರ ಸುಪುತ್ರರಾದ ಡಾ. ರಮೇಶ್‌ ಅರುಣ್‌ ಅವರು ಮಾತನಾಡಿ ಬೈಂದೂರಿಗೆ ಕಾಲು ಸಂಕಗಳ ಅನಿವಾರ್ಯತೆಯನ್ನು ಶಾಸಕರು ತಿಳಿಸಿದಾಗ ಜನರ ಪರಿಸ್ಥಿತಿ ನೆನೆದು ದುಃಖವಾಗಿತ್ತು. ಕೂಡಲೇ ತಂದೆಯ ಸೂಚನೆಯಂತೆ ಸ್ಥಳಕ್ಕೆ ಭೇಟಿ ನೀಡಿ ಜನರ ಸಂಕಷ್ಟಗಳನ್ನು ಅರಿತುಕೊಂಡು ಕಾಲುಸಂಕ ನಿರ್ಮಾಣಕ್ಕೆ ಸಹಕರಿಸುವ ಭರವಸೆ ನೀಡಿದ್ದೆವು. ಅದರಂತೆ ಇಂದು ಕಾಲುಸಂಕ ನಿರ್ಮಾಣಗೊಂಡಿದೆ. ಸಮಾಜಕಾರ್ಯ ಮಾಡಬೇಕೆಂದಾಗ ಅದಕ್ಕೆ ನಮ್ಮಲ್ಲಿನ ಬದ್ಧತೆಯ ಜೊತೆಗೆ ಸ್ಥಳೀಯರ ಇಚ್ಚಾ ಶಕ್ತಿಯು ಮುಖ್ಯವಾಗುತ್ತದೆ. ಬೈಂದೂರಿನಲ್ಲಿ ಶಾಸಕ ಗುರುರಾಜ್‌ ಗಂಟಿಹೊಳೆ ಅವರ ಇಚ್ಛಾಶಕ್ತಿ, ಬದ್ಧತೆ, ತೊಡಗಿಸಿಕೊಳ್ಳುವಿಕೆ ಅಭೂತಪೂರ್ವವಾಗಿತ್ತು. ಅದರ ಫಲವಾಗಿ ಇಂದು ಕಾಲುಸಂಕ ನಿರ್ಮಾಣಗೊಂಡಿದೆ. ಗ್ರಾಮೀಣ ಜನರ ಸೇವೆ ಮಾಡುವಂತಹ ಅವಕಾಶ ಕಲ್ಪಿಸಿದ ಗಂಟಿಹೊಳೆ ಹಾಗೂ ಅವರ ತಂಡಕ್ಕೆ ನಾನು ಆಭಾರಿಯಾಗಿದ್ದೇನೆ ಎಂದು ಹೇಳಿದರು.

ಕಾಲುಸಂಕ ಉದ್ಘಾಟನಾ ಕಾರ್ಯಕ್ರಮದಲ್ಲಿ ಡಾ. ಆರ್. ಅರುಣಾಚಲಮ್ ಚಾರಿಟೇಬಲ್ ಟ್ರಸ್ಟ್ ಇದರ ಟ್ರಸ್ಟಿಗಳಾದ ಡಾ. ರಮೇಶ್‌ ಅರುಣ್‌, ಬೆಂಗಳೂರು ಟ್ರಿಪ್‌ ನಿರ್ವಿಘ್ನ ಮಾರ್ಕೆಟಿಂಗ್‌ ಇದರ ಮುಖ್ಯಸ್ಥರಾದ ಶ್ರೀ ಅನುದೀಪ್‌ ಹೆಗ್ಡೆ, ಸಮೃದ್ಧ ಜನಸೇವಾ ಚಾರಿಟೇಬಲ್ ಟ್ರಸ್ಟ್ (ರಿ), ಬೈಂದೂರು ಅಧ್ಯಕ್ಷರು ಶ್ರೀ ಬಿ.ಎಸ್.‌ ಸುರೇಶ್‌ ಶೆಟ್ಟಿ, ಯಡಮೊಗೆ ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷರಾದ ಪ್ರಾಣೇಶ್ ಯಡಿಯಾಲ್, ಯಡಮೊಗೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಸುಮತಿ ಗಾಣಿಗ, ಶ್ರೀ ಬ್ರಾಹ್ಮಿ ದುರ್ಗಾಪರಮೇಶ್ವರಿ ದೇವಸ್ಥಾನ, ಕಮಲಶಿಲೆ ಇದರ ಆಡಳಿತ ಮೊಕ್ತೆಸರರಾದ ಶ್ರೀ ಸಚ್ಚಿದಾನಂದ ಚಾತ್ರ, ಉಳ್ಳೂರು ಮಚ್ಚಟ್ಟು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಇದರ ಮಾಜಿ ಅಧ್ಯಕ್ಷರಾದ ಟಿ. ಚಂದ್ರಶೇಖರ ಶೆಟ್ಟಿ, ಉಳ್ಳೂರು ಮಚ್ಚಟ್ಟು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಇದರ ಉಪಾಧ್ಯಕ್ಷರಾದ ಶೇಖರ ಪೂಜಾರಿ, ಅಮಾಸೆಬೈಲು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಜಯಲಕ್ಷ್ಮಿ ಶೆಟ್ಟಿ, ಶ್ರೀ ಮಹಾಗಣಪತಿ ದೇವಸ್ಥಾನ ತೊಂಬಟ್ಟು ಧರ್ಮದರ್ಶಿಗಳು ಮತ್ತು ಆಡಳಿತ ಮೊಕ್ತೇಸರರಾದ ಸತ್ಯನಾರಾಯಣ ಉಡುಪ ಮತ್ತು ಪ್ರಮುಖರು ಉಪಸ್ಥಿತರಿದ್ದರು.

Related posts

ಬಹು ನಿರೀಕ್ಷೆಯ `ಗಜಾನನ ಕ್ರಿಕೆಟರ್ಸ್’ 2026 ಜನವರಿಯಲ್ಲಿ ತೆರೆಗೆ….

Much Awaited Tulu movie Gajanana Cricketers set for worldwide release in January 2026

ಅಲೈನ್ಸ್ ಕ್ಲಬ್ ಉಡುಪಿಯಿಂದ ವೈದ್ಯರ ದಿನಾಚರಣೆ : ಪ್ರಸಿದ್ಧ ವೈದ್ಯ ಡಾ.ಆರ್.ಎನ್.ಭಟ್ ಅವರಿಗೆ ಸನ್ಮಾನ