ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಕದಿರು ಹಬ್ಬ : ನೂರಾರು ಭಕ್ತರ ಮನೆಗಳಿಗೆ ಧಾನ್ಯಸಿರಿ ವಿತರಣೆ..!!

ಉಡುಪಿ : ವರ್ಷಂಪ್ರತಿಯಂತೆ ಉಡುಪಿ ಶ್ರೀಕೃಷ್ಣಮಠದಲ್ಲಿ ಕದಿರುಕಟ್ಟುವ ಪರ್ವವು ಶನಿವಾರ ನೆರವೇರಿತು. ಮಠದ ಪುರೋಹಿತರು ಸಮೀಪದ ಗದ್ದೆಯಲ್ಲಿ ನೂತನವಾಗಿ ಬೆಳೆದ ಭತ್ತದ ಕದಿರಿಗೆ ಪೂಜೆ ಸಲ್ಲಿಸಿದ ಬಳಿಕ ರಥಬೀದಿಗೆ ತಂದು ಸ್ವರ್ಣಪಲ್ಲಕ್ಕಿಯಲ್ಲಿಟ್ಟು ವಾದ್ಯ, ಮಂತ್ರಘೋಷ ಸಹಿತ ಸಾಂಪ್ರದಾಯಿಕ ಬಿರುದಾವಳಿಗಳೊಂದಿಗೆ ಮೆರವಣಿಗೆಯಲ್ಲಿ ಕೃಷ್ಣಮಠಕ್ಕೆ ಪರ್ಯಾಯ ಪುತ್ತಿಗೆ ಮಠದ ಉಭಯ ಶ್ರೀಗಳು ಆಸ್ಥಾನಪುರೋಹಿತರ ಮೂಲಕ ತರಲಾಯಿತು.‌

ವರ್ಷಕ್ಕೆರಡು ಬಾರಿ ತೆರೆಯುವ ಗರ್ಭಗುಡಿಯ ಮೂಡಣ ದ್ವಾರ

ಕದಿರನ್ನು ಶ್ರೀಕೃಷ್ಣನ ಗರ್ಭಗುಡಿಯ ಮೂಡಣದ್ವಾರದ ಮೂಲಕವೇ ಒಳ ತಂದು ಕೃಷ್ಣನ ಮುಂದಿಟ್ಟು ಶ್ರೀಗಳು ಮಂಗಳಾರತಿ ಬೆಳಗಿದರು. ವಿಶೇಷವೆಂದರೆ ಹೊಸ್ತಿಲು ಹುಣ್ಣಿಮೆಯ ದಿನ ಮತ್ತು ಕದಿರಾರೋಹಣದ ದಿನಗಳ ಎರಡು ದಿನಗಳಂದು ಮಾತ್ರ ಗರ್ಭಗುಡಿಯ ಮೂಡಣ ದ್ವಾರ ತೆರೆಯಲಾಗುತ್ತದೆ.

ಅಲ್ಲಿಂದ ಕದಿರನ್ನು ಧಾನ್ಯ ಸಂಗ್ರಹಾಗಾರವಿರುವ ಬಡಗು ಮಾಳಿಗೆಗೆ ತಂದು ಆರತಿ ಬೆಳಗಲಾಯಿತು. ಉಡುಪಿಯ ಅಷ್ಟ ಮಠಗಳು, ಇತರೆ ಮಠಗಳು ಹಾಗೂ ಆಸುಪಾಸಿನ ನೂರಾರು ಮನೆಗಳ ಭಕ್ತರಿಗೆ ಭತ್ತದ ತೆನೆಗಳನ್ನು ಪ್ರಸಾದವಾಗಿ ವಿತರಿಸಲಾಯಿತು.

ದಿವಾನರುಗಳಾದ ನಾಗರಾಜ ಆಚಾರ್ಯ, ಪ್ರಸನ್ನಾಚಾರ್ಯ, ವಿದ್ವಾಂಸರುಗಳಾದ ಮಧ್ವರಮಾನಾಚಾರ್ಯ, ಗೋಪಾಲಾಚಾರ್ಯ, ವೇದವ್ಯಾಸ ಪುರಾಣಿಕ, ಪುರೋಹಿತರಾದ ರಾಘವೇಂದ್ರ ಕೊಡಂಚ, ಕೊಟ್ಟಾರಿ ರಾಮ ಕೊಡಂಚ, ನಾಗರಾಜ ತಂತ್ರಿ ಮೊದಲಾದವರು ಉಪಸ್ಥಿತರಿದ್ದರು.

Related posts

ಅಲೈನ್ಸ್ ಕ್ಲಬ್ ಉಡುಪಿಯಿಂದ ವೈದ್ಯರ ದಿನಾಚರಣೆ : ಪ್ರಸಿದ್ಧ ವೈದ್ಯ ಡಾ.ಆರ್.ಎನ್.ಭಟ್ ಅವರಿಗೆ ಸನ್ಮಾನ

ಶತಾವಧಾನಿ ಡಾ. ಆರ್. ಗಣೇಶ್ ಅವರಿಗೆ ತಲ್ಲೂರು ಕನಕ ಅಣ್ಣಯ್ಯ ಶೆಟ್ಟಿ ಪ್ರಶಸ್ತಿ ಪ್ರದಾನ

ರಂಗೋಲಿ ಕಲಾ ಸಾಧಕಿ, ಭಾರತಿ ಮರವಂತೆಗೆ ‘ಮಧುರಚೆನ್ನ ರಾಜ್ಯ ಪ್ರಶಸ್ತಿ’ ಪ್ರದಾನ