ಯುವಜನತೆಯಲ್ಲಿ ರಕ್ತದಾನದ ಪ್ರಜ್ಞೆ ಬೆಳೆಸುವುದು ಅಗತ್ಯ : ಡಾ. ಸುರೇಶ್ ಶೆಣೈ; ಉಡುಪಿ ಜಾಮೀಯ ಮಸೀದಿಯಲ್ಲಿ ರಕ್ತದಾನ ಶಿಬಿರ ಉದ್ಘಾಟನೆ

ಉಡುಪಿ : ರಕ್ತ ಅಂದರೆ ಜೀವ. ರಕ್ತದಾನ ಮಾಡುವುದರಿಂದ ಮನಸ್ಸಿಗೆ ತೃಪ್ತಿ ಸಿಗುತ್ತದೆ. ಯುವಜನತೆಯಲ್ಲಿ ರಕ್ತದಾನದ ಮಹತ್ವವನ್ನು ತಿಳಿಸಿ ಅವರಲ್ಲಿ ರಕ್ತದಾನದ ಪ್ರಜ್ಞೆಯನ್ನು ಬೆಳೆಸಬೇಕು. ರಕ್ತದಾನದಿಂದ ಆರೋಗ್ಯಕ್ಕೆ ಹೆಚ್ಚು ಪ್ರಯೋಜನ ಇದೆ ಎಂದು ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ ಉಡುಪಿ ಕರಾವಳಿ ಅಧ್ಯಕ್ಷ ಡಾ. ಸುರೇಶ್ ಶೆಣೈ ಹೇಳಿದ್ದಾರೆ.

ಉಡುಪಿ ಮುಸ್ಲಿಮ್ ವೆಲ್‌ಫೇರ್ ಅಸೋಸಿಯೇಶನ್ ಮತ್ತು ಮಣಿಪಾಲ ಕೆಎಂಸಿ ಬ್ಲಡ್ ಸೆಂಟರ್ ಸಹಯೋಗದೊಂದಿಗೆ ಉಡುಪಿ ಜಾಮೀಯ ಮಸೀದಿ ವಠಾರದಲ್ಲಿ ಮಂಗಳವಾರ ಆಯೋಜಿಸಲಾದ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಕೆಎಂಸಿ ಬ್ಲಡ್ ಸೆಂಟರ್‌ನ ಮುಖ್ಯಸ್ಥೆ ಡಾ.ಶಮೀ ಶಾಸ್ತ್ರೀ ಮಾತನಾಡಿ, ರಕ್ತದಾನ ಎಂಬುದು ಪುಣ್ಯದ ಕೆಲಸ. ಒಬ್ಬ ರಕ್ತದಾನ ಮಾಡುವುದರಿಂದ 3-4 ಮಂದಿಯ ಜೀವ ಉಳಿಸಬಹುದಾಗಿದೆ. ಪ್ರತಿದಿನ ನಮ್ಮ ಕೇಂದ್ರದಲ್ಲಿ 100-150 ಮಂದಿ ರಕ್ತದಾನ ಮಾಡುತ್ತಿದ್ದು, ಅವರಲ್ಲಿ ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡುವವರು ಕೇವಲ ಶೇ.10ರಷ್ಟು ಮಾತ್ರ. ಆದುದರಿಂದ ರಕ್ತದಾನ ಕುರಿತು ಜನರಲ್ಲಿರುವ ತಪ್ಪು ಕಲ್ಪನೆ ದೂರ ಮಾಡಬೇಕಾಗಿದೆ ಎಂದರು.

ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಅಧ್ಯಕ್ಷ ಮುಹಮ್ಮದ್ ವೌಲಾ ಮಾತನಾಡಿ, ವೈದ್ಯಕೀಯ ಕ್ಷೇತ್ರ ಸಾಕಷ್ಟು ಮುಂದುವರೆದರೂ ಈವರೆಗೆ ರಕ್ತಕ್ಕೆ ಪರ್ಯಾಯವಾಗಿ ಕೃತಕ ರಕ್ತವನ್ನು ಸೃಷ್ಠಿ ಮಾಡಲು ಯಾರಿಗೂ ಸಾಧ್ಯವಾಗಲಿಲ್ಲ. ಮನುಷ್ಯ ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡುವುದರಿಂದ ಮಾತ್ರ ಈ ಕೊರತೆ ನೀಗಿಸಲು ಸಾಧ್ಯ. ರಕ್ತದಾನ ಎಂಬುದು ಸಾಮಾಜಿಕ ಜವಾಬ್ದಾರಿ ಆಗಬೇಕು ಎಂದು ಅಭಿಪ್ರಾಯ ಪಟ್ಟರು.

ಉಡುಪಿ ಜಾಮೀಯ ಮಸೀದಿ ಅಧ್ಯಕ್ಷ ರಿಯಾಝ್ ಅಹಮದ್, ಸಾಮಾಜಿಕ ಕಾರ್ಯಕರ್ತ ಮುನೀರ್ ಕಲ್ಮಾಡಿ ಮುಖ್ಯಅತಿಥಿಗಳಾಗಿದ್ದರು. ಅಸೋಸಿಯೇಶನ್ ಅಧ್ಯಕ್ಷ ಮುನೀರ್ ಮುಹಮ್ಮದ್ ಉಪಸ್ಥಿತರಿದ್ದರು. ಅಸೋಸಿಯೇಶನ್ ಪ್ರಧಾನ ಕಾರ್ಯದರ್ಶಿ ವಿ.ಎಸ್.ಉಮರ್ ಸ್ವಾಗತಿಸಿದರು. ರಿಯಾಝ್ ಕುಕ್ಕಿಕಟ್ಟೆ ಕಿರಾತ್ ಪಠಿಸಿ, ವಂದಿಸಿದರು. ಇಕ್ಬಾಲ್ ಮನ್ನಾ ಕಾರ್ಯಕ್ರಮ ನಿರೂಪಿಸಿದರು.

Related posts

ರಂಗೋಲಿ ಕಲಾ ಸಾಧಕಿ, ಭಾರತಿ ಮರವಂತೆಗೆ ‘ಮಧುರಚೆನ್ನ ರಾಜ್ಯ ಪ್ರಶಸ್ತಿ’ ಪ್ರದಾನ

ಮೂಡಲಪಾಯ ಯಕ್ಷಗಾನದ ಅಭ್ಯುದಯವನ್ನು ಬೆಂಬಲಿಸಲು ಅಕಾಡೆಮಿ ಬದ್ಧವಾಗಿದೆ : ಡಾ. ತಲ್ಲೂರು

National Fame Award of India Books of Award – Sushanth Brahmavar