ಮಂಗಳೂರು : “ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯರವರ ರಾಜೀನಾಮೆ ಕೇಳುವುದು ಬಿಜೆಪಿ ಅವರ ಮೂರ್ಖತನ. ಯಾಕೆಂದರೆ ಸಿದ್ದರಾಮಯ್ಯ ವಿರುದ್ಧ ದಾಖಲಾಗಿರುವ ಮೊಕದ್ದಮೆ ರಾಜಕೀಯ ಪ್ರೇರಿತವಾಗಿರುವುದರಿಂದ ರಾಜೀನಾಮೆ ಕೊಡುವ ಅವಶ್ಯಕತೆ ಇರುವುದಿಲ್ಲ. ಕಾಂಗ್ರೆಸ್ ಪಕ್ಷವು ಸಿದ್ದರಾಮಯ್ಯರವರ ಹಿಂದೆ ಸಂಪೂರ್ಣವಾಗಿ ಬೆಂಬಲಕ್ಕೆ ನಿಂತಿದೆ. ನ್ಯಾಯಾಲಯದ ಆದೇಶವನ್ನು ನಾವು ಮುಂದಿನ ಕಾನೂನು ಹೋರಾಟವನ್ನಾಗಿ ರೂಪಿಸುತ್ತೇವೆ. ನ್ಯಾಯಕ್ಕೆ ಜಯ ಸಿಗುತ್ತದೆ. ಯಾವುದೇ ಕಾರಣಕ್ಕೂ ರಾಜೀನಾಮೆ ಕೊಡುವ ಅವಶ್ಯಕತೆ ಇರುವುದಿಲ್ಲ“ ಎಂದು ವಿಧಾನ ಪರಿಷತ್ ಶಾಸಕ, ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ್ ಭಂಡಾರಿ ಅವರು ಹೇಳಿದ್ದಾರೆ.
“ಕೇಂದ್ರ ಸರ್ಕಾರವು ರಾಜ್ಯಪಾಲರನ್ನು ಉಪಯೋಗಿಸಿ ಪ್ರಜಾಪ್ರಭುತ್ವದ ಕಗ್ಗೊಲೆಯನ್ನು ಮಾಡುತ್ತಿದೆ. ಜನರಿಂದ ಚುನಾಯಿಸಲ್ಪಟ್ಟ ಸರ್ಕಾರಗಳನ್ನು ನಾಮಾಂಕಿತ ರಾಜ್ಯಪಾಲರಿಂದ ಉರುಳಿಸುವ ಕೆಲಸವನ್ನು ಮಾಡುತ್ತಿದೆ. ಕಾಂಗ್ರೆಸ್ ಸರ್ಕಾರಗಳಿರುವ ರಾಜ್ಯಗಳಲ್ಲಿ ಕಾಂಗ್ರೆಸ್ ಮುಖಂಡರನ್ನು ಗುರಿಯಾಗಿಸಿಕೊಂಡು ಇಡಿ, ಐಟಿ ಮತ್ತು ಸಿಬಿಐ ಕಾನೂನಿನ ದುರ್ಬಳಕೆ ಮಾಡಿ ಅಸ್ಥಿರಗೊಳಿಸುತ್ತಿರುವುದು ಪ್ರಜಾಪ್ರಭುತ್ವ ದೇಶದ ಸಂವಿಧಾನಕ್ಕೆ ಅಪಾಯಕಾರಿ ಬೆಳವಣಿಗೆ“ ಎಂದವರು ಹೇಳಿದರು.
”ಭಾರತೀಯ ಮುಖ್ಯ ನ್ಯಾಯಾಧೀಶರಾಗಿದ್ದವರನ್ನು ನಿವೃತ್ತಿಗೊಂಡ ತಕ್ಷಣ ರಾಜ್ಯಸಭಾ ಸದಸ್ಯರನ್ನಾಗಿಸಿದ್ದು. ಸುಪ್ರೀಂ ಕೋರ್ಟಿನ ನ್ಯಾಯಾಧೀಶರಾಗಿದ್ದವರನ್ನು ನಿವೃತ್ತಿಗೊಂಡ ನಂತರ ರಾಜ್ಯಪಾಲರನ್ನಾಗಿಸಿದ್ದು ಕೇಂದ್ರ ಸರಕಾರದ ಪ್ರಜಾಪ್ರಭುತ್ವ ವಿರೋಧಿ ನಡೆಗೆ ಉದಾಹರಣೆಯಾಗಿದೆ“ ಎಂದು ಭಂಡಾರಿ ಟೀಕಿಸಿದ್ದಾರೆ.