ಕೇಂದ್ರ ಸರಕಾರದ ವಿವಿಧ ಯೋಜನೆಗಳ ಮಾಹಿತಿ ಕಾರ್ಯಾಗಾರ

ಮೂಡುಬಿದಿರೆ : ಪವರ್ ಫ್ರೆಂಡ್ಸ್ ಬೆದ್ರ ಹಾಗೂ ಕರುಣಾಳು ಬಾ ಬೆಳಕು ಪ್ರತಿಷ್ಠಾನ (ರಿ.) ಕಾರ್ಕಳ ಇವುಗಳ ನೇತೃತ್ವದಲ್ಲಿ ಭಾರತೀಯ ಅಂಚೆ ಇಲಾಖೆ ಪುತ್ತೂರು ವಿಭಾಗ ಇದರ ಸಹಯೋಗದಲ್ಲಿ ಕೇಂದ್ರ ಸರಕಾರದ ವಿವಿಧ ಯೋಜನೆಗಳ ಮಾಹಿತಿ ಕಾರ್ಯಾಗಾರ ಮತ್ತು ಪ್ರಧಾನ ಮಂತ್ರಿ ಜನಸೇವಾ ಸೌಲಭ್ಯಗಳ ಅಭಿಯಾನವು ಸಮಾಜ ಮಂದಿರದಲ್ಲಿ ಶುಕ್ರವಾರ ನಡೆಯಿತು.

ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಮೂಡುಬಿದಿರೆ ಇದರ ಅಧ್ಯಕ್ಷ ಕೆ. ಶ್ರೀಪತಿ ಭಟ್ ಅಧ್ಯಕ್ಷತೆ ವಹಿಸಿ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಭಾರತೀಯ ಅಂಚೆ ಇಲಾಖೆಗೆ ಸುಮಾರು 170 ವರ್ಷಗಳ ಇತಿಹಾಸವಿದ್ದು ಭ್ರಷ್ಟಚಾರ ರಹಿತವಾಗಿ ಕೆಲಸ ಮಾಡುತ್ತಾ ಬಂದಿದೆ. ಕೇಂದ್ರ ಸರಕಾರದ ಜನಪರವಾದ ವಿವಿಧ ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಕಾರ್ಯವನ್ನು ಮಾಡುತ್ತಿರುವ ಈ ಇಲಾಖೆಯ ಜತೆಗೆ ಸಾಮಾಜಿಕ ಕಳಕಳಿಯನ್ನು ಹೊಂದಿರುವ ಪವರ್ ಫ್ರೆಂಡ್ಸ್ ಎಂಬ ಸಂಸ್ಥೆಯು ಇದರ ಜತೆಗೆ ಕೈ ಜೋಡಿಸಿಕೊಂಡು ಆರೋಗ್ಯ ಶಿಬಿರ, ರಕ್ತದಾನ ಮುಂತಾದ ಕಾರ್ಯಕ್ರಮಗಳನ್ನು ಆಯೋಜಿಸುವುದಲ್ಲದೆ ಇಲಾಖೆಯಿಂದ ಜನಸಾಮಾನ್ಯರಿಗೆ ಸಿಗುವ ಯೋಜನೆಗಳ ಬಗ್ಗೆ ತಮ್ಮ ಸುತ್ತಮುತ್ತ ಇರುವ ಜನರಿಗೆ ತಿಳಿಸಿಕೊಡುವಂತಹ ಕೆಲಸವನ್ನು ಮಾಡುತ್ತಿರುವುದು ಶ್ಲಾಘನೀಯ ಎಂದರು.

ಪುತ್ತೂರು ವಿಭಾಗದ ಹಿರಿಯ ಅಂಚೆ ಅಧೀಕ್ಷಕ ಹರೀಶ್ ಬಿ.ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಜನರೊಂದಿಗೆ ಸಂಪರ್ಕವನ್ನು ಬೆಸೆಯಲೆಂದು ಆರಂಭಗೊಂಡಿರುವ ಅಂಚೆ ಇಲಾಖೆಯು ಇದೀಗ ಹಲವಾರು ಸೇವೆಗಳನ್ನು ನೀಡುತ್ತಾ ಬರುತ್ತಿದೆ. ಆಧುನಿಕ ತಂತ್ರಜ್ಞಾನಗಳ ಭರಾಟೆಯಲ್ಲಿ ಖಾಸಗಿ ಪತ್ರ ವ್ಯವಹಾರಗಳು ನಡೆಯದೆ ಇದ್ದರೂ ಬ್ಯಾಂಕ್, ಕೋರ್ಟ್ ಕಛೇರಿಗಳ ಪತ್ರವ್ಯವಹಾರಗಳು ಈಗಲೂ ನಡೆಯುತ್ತಿವೆ.

ಕೇಂದ್ರ ಸರಕಾರದ ವಿವಿಧ ಯೋಜನೆಗಳು ಅಂಚೆ ಇಲಾಖೆಯ ಮೂಲಕವೇ ನಡೆಯುತ್ತಿದೆ. ಹಿರಿಯ ನಾಗರಿಕರಿಗೆ ಖಾತೆ, ಹೆಣ್ಣು ಮಕ್ಕಳಿಗೆ ಸುಕನ್ಯಾ ಸಮೃದ್ಧಿ ಯೋಜನೆ, ಬಿಬಿಎಂ ಖಾತೆ ಸಹಿತ ಇತರ ಯೋಜನೆಗಳನ್ನು ಫಲಾನುಭವಿಗಳಿಗೆ ತಲುಪಿಸುವಲ್ಲಿ ಮುಂದಿದೆ ಎಂದರು.

ನ್ಯಾಯವಾದಿ, ಮೂಡುಬಿದಿರೆ ಕೋ-ಅಪರೇಟಿವ್ ಸರ್ವೀಸ್ ಬ್ಯಾಂಕಿನ ಅಧ್ಯಕ್ಷ ಎಂ.ಬಾಹುಬಲಿ ಪ್ರಸಾದ್, ಮಂಗಳೂರು ವಿಭಾಗದ ಪರ್ಯಾವರಣ ಸಂರಕ್ಷಣಾ ಗತಿನಿಧಿ ಸಹಸಂಯೋಜಕ ಮಂಜುನಾಥ, ಪುತ್ತೂರು ಸಹಾಯಕ ಅಂಚೆ ಅಧೀಕ್ಷಕ ಚಂದ್ರ ನಾಯ್ಕ್, ಪವರ್ ಫ್ರೆಂಡ್ಸ್ ಬೆದ್ರದ ಅಧ್ಯಕ್ಷ ವಿನಯ್ ಕುಮಾರ್, ಕರುಣಾಳು ಬಾ ಬೆಳಕು ಪ್ರತಿಷ್ಠಾನ (ರಿ) ಕಾರ್ಕಳ ಇದರ ಅಧ್ಯಕ್ಷೆ ರಮಿತಾ ಶೈಲೇಂದ್ರ, ಮೂಡುಬಿದಿರೆಯ ಅಂಚೆ ಪಾಲಕಿ ಉಷಾ, ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಪವರ್ ಫ್ರೆಂಡ್ಸ್‌ನ ಗೌರವ ಸಲಹೆಗಾರ, ನ್ಯಾಯವಾದಿ ಜಯಪ್ರಕಾಶ್ ಹೆಗ್ಡೆ ಸ್ವಾಗತಿಸಿದರು. ಕಾರ್ಯದರ್ಶಿ ಸುಧಾಕರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಅಂಚೆ ಇಲಾಖೆ ಪುತ್ತೂರು ವಿಭಾಗದ ಮಾರ್ಕೆಟಿಂಗ್ ಮೆನೇಜರ್ ಗುರುಪ್ರಸಾದ್ ವಂದಿಸಿದರು.

Related posts

ಸಿಬ್ಬಂದಿಗಳಿಗೆ ಝೂನೋಟಿಕ್ ರೋಗಗಳ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕುರಿತ ತರಬೇತಿ ಸಾಧನಗಳನ್ನು ಪ್ರಾರಂಭಿಸಿದ ಪ್ರಸನ್ನ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್

ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಉಡುಪಿ ಜಿಲ್ಲೆಯ ಪ್ರತಿಭಾವಂತ ವಿದ್ಯಾರ್ಥಿ ದೀಪೇಶ್ ದೀಪಕ್ ಶೆಣೈ ದ್ವಿತೀಯ

ಉಪಚುನಾವಣೆ ಫಲಿತಾಂಶಕ್ಕೆ ಇನ್ನೊಂದೇ ದಿನ ಬಾಕಿ – ಡಿಕೆಶಿಯಿಂದ ಕೊಲ್ಲೂರು ಮೂಕಾಂಬಿಕೆ ದರ್ಶನ