ಇಂದ್ರಾಳಿ ರೈಲ್ವೇ ಮೇಲ್ಸೇತುವೆ – ಜನವರಿ 10ರಿಂದ ವಾಹನ ಬಳಕೆಗೆ ಮುಕ್ತಗೊಳಿಸುವಂತೆ ಡಿಸಿ ಸೂಚನೆ

ಉಡುಪಿ : ರಾಷ್ಟ್ರೀಯ ಹೆದ್ದಾರಿಯ ಇಂದ್ರಾಳಿ ರೈಲ್ವೇ ಮೇಲ್ಸೇತುವೆ ಕಾಮಗಾರಿಯನ್ನು ಪೂರ್ಣಗೊಳಿಸಿ ಜನವರಿ 10ರಿಂದ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಅಭಿಯಂತರು ಹಾಗೂ ಗುತ್ತಿಗೆದಾರರಿಗೆ ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾಕುಮಾರಿ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜರಗಿದ ಇಂದ್ರಾಳಿ ರೈಲ್ವೇ ಮೇಲ್ಸೇತುವೆ ಕಾಮಗಾರಿ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ‌ವಹಿಸಿ ಅವರು ಮಾತನಾಡಿದರು. ಇಂದ್ರಾಳಿ ರೈಲ್ವೇ ಮೇಲ್ಸೇತುವೆ ಕಾಮಗಾರಿಯನ್ನು ಕೈಗೊಳ್ಳಲು 2018‌ರಿಂದಲೇ ಪತ್ರ ವ್ಯವಹಾರಗಳು ನಡೆದಿದ್ದವು. ನಿಗದಿತ ಕಾಲಾವಧಿಯಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸದಿರುವುದರಿಂದ ಆಗುತ್ತಿರುವ ತೊಂದರೆ ಬಗ್ಗೆ ಸಾರ್ವಜನಿಕರಿಂದ ಪ್ರತಿದಿನವೂ ಜಿಲ್ಲಾಡಳಿತಕ್ಕೆ ದೂರುಗಳು ಬರುತ್ತಿವೆ. ವಾರಕ್ಕೊಮ್ಮೆ ಕಾಮಗಾರಿಯ ಮಾಹಿತಿ ನೀಡುವಂತೆ ಡಿಸಿ ಸೂಚಿಸಿದರು.

ಕಾಮಗಾರಿ ಕೈಗೊಳ್ಳಲು ರೈಲ್ವೇ ಇಲಾಖೆ ಅನುಮತಿ ನೀಡಿದ್ದು, ಸಿವಿಲ್‌ ಕಾಮಗಾರಿ ಹಾಗೂ ಕಬ್ಬಿಣದ ಬ್ರಿಡ್ಜ್‌ ಜೋಡಣೆ ಕಾಮಗಾರಿಗಳನ್ನು ಹಗಲು ಹಾಗೂ ರಾತ್ರಿ ಎರಡು ಪಾಳಿಯಲ್ಲಿ ಮಾಡಬೇಕು. ಜನವರಿ 7ರ ಒಳಗೆ ಪೂರ್ಣ ಪ್ರಮಾಣದಲ್ಲಿ ಕಾಮಗಾರಿಗಳನ್ನು ಮುಗಿಸಬೇಕು ಎಂದರು.
ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ| ಅರುಣ್‌ ಕೆ., ಕೊಂಕಣ ರೈಲ್ವೇಯ ಸೀನಿಯರ್‌ ಎಂಜಿನಿಯರ್‌ ಗೋಪಾಲಕೃಷ್ಣ, ಶೃಂಗೇರಿ-ಚಿಕ್ಕಮಗಳೂರು ರಾ.ಹೆ.ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತ ಮಂಜುನಾಥ್‌, ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ್‌ ಬಿ., ಮತ್ತಿತರರು ಉಪಸ್ಥಿತರಿದ್ದರು.

Related posts

ಪೊಲೀಸರಿಂದ ಸಾರ್ವಜನಿಕರಿಗೆ ಜಾಗೃತಿ – ಜಾಥಾಗೆ ನೂರಾರು ವಿದ್ಯಾರ್ಥಿಗಳ ಸಾಥ್

ಉಚ್ಚಿಲದಲ್ಲಿ ಕೆಎಸ್ಆರ್‌ಟಿ‌ಸಿ ಬಸ್ ಡಿಕ್ಕಿ; ಪಾದಾಚಾರಿ ಸಾವು

ಹೊಸವರ್ಷದ ಆಚರಣೆಗೆ ತರಿಸಿದ್ದ 9ಲಕ್ಷ ರೂ. ಮೌಲ್ಯದ ಮಾದಕದ್ರವ್ಯ ಸೀಝ್- ಮೂವರು ಅರೆಸ್ಟ್