ಶ್ರೀ ಕೃಷ್ಣಮಠದಲ್ಲಿ ದಂಪತಿ.ಕಾಮ್‌ ಉಚಿತ ನೋಂದಣಿ ಕಚೇರಿ ಉದ್ಘಾಟನೆ

ಉಡುಪಿ : ಭಾರತ, ಅಮೆರಿಕ, ಕೆನಡಾ, ಆಸ್ಟ್ರೇಲಿಯಾ, ಇಂಗ್ಲೆಂಡ್‌ ಮೊದಲಾದ ದೇಶಗಳಲ್ಲಿರುವ ಉಡುಪಿ ಶ್ರೀ ಪುತ್ತಿಗೆ ಮಠದ ಶಾಖೆಗಳ ವಿಸ್ತೃತ ಸೇವಾ ಪ್ರಕಲ್ಪ ಜಾಗತಿಕ ಹಿಂದೂ ವಿವಾಹ ವೇದಿಕೆ “ದಂಪತಿ.ಕಾಮ್‌” ಉಚಿತ ನೋಂದಣಿ ಕಚೇರಿಯನ್ನು ಪರ್ಯಾಯ ಮಠಾಧೀಶರಾದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಮತ್ತು ಕಿರಿಯ ಯತಿ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರು ಫೆ. 12ರಂದು ಶತಾಯುಷಿ ಶ್ರೀ ಸುಧೀಂದ್ರತೀರ್ಥ ಶ್ರೀಪಾದರ ಆರಾಧನೆ ಮಹೋತ್ಸವ ಸಂದರ್ಭದಲ್ಲಿ ಉದ್ಘಾಟಿಸಿದರು.

ಶ್ರೀಕೃಷ್ಣ ಮಠದ ಸಮೀಪವಿರುವ ಗೀತಾಮಂದಿರದ ಮುಂಭಾಗದಲ್ಲಿ ರಾಜಾಂಗಣಕ್ಕೆ ತಾಗಿಕೊಂಡಂತೆ ಇರುವ ನೂತನ ಕಚೇರಿಯಲ್ಲಿ ದೀಪ ಬೆಳಗಿಸಿ ಶ್ರೀನಿವಾಸ-ಪದ್ಮಾವತಿಯರ ವಿಗ್ರಹಕ್ಕೆ ಆರತಿ ಬೆಳಗಿ ಆಶೀರ್ವದಿಸಿ, ಸನಾತನ ಹಿಂದೂ ಧರ್ಮದ ಉಳಿವಿಗಾಗಿ ಸಮಾನ ಸಂಸ್ಕೃತಿಯ ವಿವಾಹಗಳು ಈ ಕಾಲದ ತುರ್ತು ಅಗತ್ಯವಾಗಿದೆ. ಇದಕ್ಕಾಗಿಯೇ ದಂಪತಿ.ಕಾಮ್‌ ಕಾರ್ಯತತ್ಪರವಾಗಿದೆ. ನೂತನ ವಧೂವರರ ಜಾಗತಿಕ ಮೇಳಾಮೇಳಿ ಗಾಗಿ ವಿನೂತನ ತಂತ್ರಜ್ಞಾನ ಮಾಧ್ಯಮವನ್ನು ಅಳವಡಿಸಿಕೊಂಡ ಈ ಉಚಿತ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳುವಂತೆ ಶ್ರೀಪಾದರು ಕರೆ ನೀಡಿದರು.

ಶ್ರೀಮಠದ ದಿವಾನರಾದ ನಾಗರಾಜ ಆಚಾರ್ಯ, ಅಂತಾರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನ ಆಚಾರ್ಯ, ಶ್ರೀಪಾದರ ಆಪ್ತ ಕಾರ್ಯದರ್ಶಿ ರತೀಶ್‌ ತಂತ್ರಿ, ದಂಪತಿ.ಕಾಮ್‌ನ ಅಖೀಲ ಭಾರತ ಸಂಚಾಲಕ ಕೆ. ವಿ. ರಮಣಾಚಾರ್ಯ, ತಾಂತ್ರಿಕ ವಿಭಾಗದ ರಾಮಪ್ರಿಯ, ನಿರ್ವಾಹಕ ಬಳಗದ ವಿಕ್ರಂ ಕುಂಟಾರ್‌, ರವೀಂದ್ರ, ಅಂತರ್ಯಾಮಿಯ ಪ್ರಮೋದ್‌, ಶ್ರೀನಿವಾಸ್‌ ರಾವ್‌, ಸಾಂಸ್ಕೃತಿಕ ಸಮಿತಿಯ ಪ್ರಮುಖ ರಮೇಶ್‌ ಭಟ್‌, ಸುಗುಣಮಾಲಾ ಸಂಪಾದಕ ಮಹಿತೋಷ ಆಚಾರ್ಯ, ಕಚೇರಿ ಸಿಬಂದಿ ಸುಶ್ಮಿತಾ, ಅಕ್ಷಯ ಉಪಸ್ಥಿತರಿದ್ದರು.

ಕಚೇರಿಯು ಬೆಳಗ್ಗೆ 8ರಿಂದ ರಾತ್ರಿ 8ರ ವರೆಗೆ ತೆರೆದಿರಲಿದ್ದು, ಆಸಕ್ತ ಹಿಂದೂ ವಿವಾಹಾಪೇಕ್ಷಿಗಳು ಉಚಿತ ನೋಂದಣಿ ಮಾಡಿಕೊಳ್ಳಬಹುದಾಗಿದೆ ಎಂದು ಶ್ರೀಮಠದ ಪ್ರಕಟನೆ ತಿಳಿಸಿದೆ.

Related posts

ಇಂದು ಬಿಗ್ ಬಾಸ್ ಖ್ಯಾತಿಯ ಚೈತ್ರಾ ಕುಂದಾಪುರ ಮದುವೆ

ಮೆಹಂದಿ ಕಾರ್ಯಕ್ರಮದಲ್ಲಿ ನಿಯಮ ಉಲ್ಲಂಘಿಸಿ ಧ್ವನಿವರ್ಧಕ ಬಳಕೆ – ದೂರು ದಾಖಲು

ದೇಶದ ಸೈನಿಕರ ಶೌರ್ಯ, ಪರಾಕ್ರಮಕ್ಕೆ ಅಭಿನಂದನೆ – ಪರ್ಯಾಯ ಪುತ್ತಿಗೆ ಶ್ರೀ