ಮಂಗಳೂರು : ಕಾರ್ಕಳದಲ್ಲಿ ಯುವತಿಯ ಅತ್ಯಾಚಾರ ಪ್ರಕರಣದಲ್ಲಿ ಡ್ರಗ್ಸ್ ಪೂರೈಕೆ ಮಾಡಿರುವ ಅಭಯ್ ಆಗಲಿ, ಅಹಮ್ಮದ್ ಆಗಲಿ ಆತನ ಮೇಲೆ ನಿರ್ದಾಕ್ಷಿಣ್ಯ ಕ್ರಮವಾಗಲಿ. ಅದೇ ರೀತಿ ಡ್ರಗ್ಸ್ ಪೂರೈಕೆ ಮಾಡಿರುವುದು ಹಿಂದೂ ಎಂಬ ಕಾರಣಕ್ಕೆ ಸರಕಾರ ಪ್ರಕರಣವನ್ನು ತಿರುಚುವ ಯತ್ನ ಮಾಡುವುದು ಬೇಡ ಎಂದು ವಿಎಚ್‌ಪಿ ಪ್ರಾಂತ ಕಾರ್ಯದರ್ಶಿ ಶರಣ್ ಪಂಪ್‌ವೆಲ್ ಆಗ್ರಹಿಸಿದರು.
ನಗರದ ಕದ್ರಿಯ ವಿಶ್ವಶ್ರೀಯಲ್ಲಿ ಮಾತನಾಡಿದ ಅವರು, ಡ್ರಗ್ಸ್ ಮಾಫಿಯಾದಲ್ಲಿ ತೊಡಗಿಸಿಕೊಂಡ ಯಾರೇ ಆಗಲಿ ಅವರ ಮೇಲೆ ನಿರ್ದ್ಯಾಕ್ಷಿಣ್ಯ ಕ್ರಮವಾಗಲಿ. ಹಾಗೆಂದು ಪ್ರಕರಣವನ್ನು ಇನ್ನಾವುದಕ್ಕೋ ಲಿಂಕ್ ಮಾಡಿ ತಿರುಚುವ ಯತ್ನವನ್ನು ವಿಎಚ್‌ಪಿ ಸಹಿಸುವುದಿಲ್ಲ. ಆದ್ದರಿಂದ ಸರಿಯಾಗಿ ತನಿಖೆ ನಡೆಸಿ ಕೃತ್ಯದ ಹಿಂದಿರುವ ಆರೋಪಿಗಳಿಗೆ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದರು.
ಡ್ರಗ್ಸ್ ಅಥವಾ ಇನ್ನಿತರ ಸಮಾಜಬಾಹಿರ ಕೃತ್ಯಗಳಲ್ಲಿ ತೊಡಗಿಸಿಕೊಂಡವರಿಗೆ ನಮ್ಮ ಸಂಘಟನೆಯಲ್ಲಿ ಇರಲು ಅವಕಾಶವಿಲ್ಲ. ಹಾಗೇನಾದರೂ ಇದ್ದಲ್ಲಿ ತಕ್ಷಣ ಅವರನ್ನು ಸಂಘಟನೆಯಿಂದ ಹೊರಗೆ ಹಾಕುವ ಕೆಲಸವನ್ನು ಮಾಡಲಾಗುತ್ತದೆ ಎಂದರು.
ಐವನ್ ಡಿಸೋಜ ನೀಡಿರುವುದು ಅಕ್ಷರಶಃ ರಾಷ್ಟ್ರದ್ರೋಹದ ಹೇಳಿಕೆ. ಅವರು ಹೇಳಿಕೆ ನೀಡಿದ ತಕ್ಷಣ ಬಸ್ಸಿಗೆ ಕಲ್ಲು ಬಿಸಾಡಲಾಗಿದೆ. ಆದರೂ ಪೊಲೀಸ್ ಇಲಾಖೆ ಅವರ ಮೇಲೆ ಇನ್ನೂ ಕ್ರಮ ಕೈಗೊಂಡಿಲ್ಲ. ಅವರ ಮೇಲೆ ಪ್ರಕರಣ ದಾಖಲಿಸಲು ಪೊಲೀಸರು ಇನ್ನೂ ಯಾಕೆ ಹಿಂದೇಟು ಹಾಕುತ್ತಿದ್ದಾರೆ ಗೊತ್ತಾಗುತ್ತಿಲ್ಲ. ಪೊಲೀಸರ ಈ ದ್ವಂದ್ವ ನಿಲುವು ಸರಿಯಲ್ಲ. ಹಿಂದೂ ಸಂಘಟನೆಯವರಿಗೆ, ಒಂದು ಕಾನೂನು ಐವನ್ ಡಿಸೋಜರಿಗೆ ಮತ್ತೊಂದು ಕಾನೂನು ಬೇಡ. ಈಗಾಗಲೇ ಬಿಜೆಪಿ ಇದರ ವಿರುದ್ಧ ಹೋರಾಟ ಮಾಡುತ್ತಿದೆ. ಆದರೂ ಕ್ರಮವಾಗದಿದ್ದಲ್ಲಿ ಮುಂದಿನ ನಿರ್ಧಾರವನ್ನು ನಾವು ತೆಗೆದುಕೊಳ್ಳುತ್ತೇವೆ ಎಂದುಶರಣ್ ಪಂಪ್‌ವೆಲ್ ಆಗ್ರಹಿಸಿದರು.