ತೆಂಕನಿಡಿಯೂರು ತ್ಯಾಜ್ಯ ಸಂಸ್ಕರಣಾ ಘಟಕದಲ್ಲಿ ಅವೈಜ್ಞಾನಿಕವಾಗಿ ಹೂತಿರುವ ಕಸ ತಕ್ಷಣ ತೆರವು ಮಾಡಿ : ಯಶ್‌ಪಾಲ್ ಸುವರ್ಣ ಸೂಚನೆ

ಉಡುಪಿ : ತೆಂಕನಿಡಿಯೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕೆಲಾರ್ಕಲಬೆಟ್ಟುವಿನ ತ್ಯಾಜ್ಯ ಸಂಸ್ಕರಣಾ ಘಟಕದ ಒಳಗಡೆ ಗ್ರಾಮಕ್ಕೆ ನೀರು ಪೂರೈಸುವ ಬೋರ್‌ವೆಲ್ ಬಳಿ ದೊಡ್ಡ ಹೊಂಡ ತೋಡಿ ಕಸ ಹಾಕಿ ವಿಲೇವಾರಿ ಮಾಡಿದ ಪರಿಣಾಮ ಮಳೆ ನೀರಿಗೆ ಸಮೀಪದ ನೂರಾರು ಮನೆ ಬಾವಿ, ಬೋರ್ ವೆಲ್ ನೀರು ಹಾಳಾಗಿ, ವಿಪರೀತ ದುರ್ವಾಸನೆ ಹಾಗೂ ಸಾಂಕ್ರಾಮಿಕ ರೋಗದ ಭಯ ಅವರಿಸುವ ಬಗ್ಗೆ ಸಾರ್ವಜನಿಕರ ದೂರಿನ ಮೇರೆಗೆ ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ತಕ್ಷಣ ತೆರವಿಗೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ತೀರ ಅವೈಜ್ಞಾನಿಕವಾಗಿ ಜನವಸತಿ ಪ್ರದೇಶ ಹಾಗೂ ಗ್ರಾಮಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಬಾವಿಯ ಬಳಿ ಕಸವನ್ನು ಹಾಕಿ ಜನರ ಆರೋಗ್ಯದ ಜೊತೆ ಚೆಲ್ಲಾಟವಾಡಿದಂತಿದೆ. ಗ್ರಾಮ ಪಂಚಾಯತ್‌ನಲ್ಲಿ ಈ ಬಗ್ಗೆ ಯಾವುದೇ ಸಭೆ ನಡೆಸಿ ಚರ್ಚೆ ನಡೆಸದೇ ಏಕಪಕ್ಷೀಯವಾಗಿ ನಿರ್ಧಾರ ಕೈಗೊಂಡಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

ಸ್ಥಳದಲ್ಲಿ ಉಪಸ್ಥಿತರಿದ್ದ ಆರೋಗ್ಯ ಇಲಾಖೆಯ ತಾಲೂಕು ಆರೋಗ್ಯ ಅಧಿಕಾರಿ ಡಾ. ವಾಸುದೇವ, ಸಾಂಕ್ರಾಮಿಕ ರೋಗಗಳ ನಿಯಂತ್ರಣಾಧಿಕಾರಿ ಡಾ. ಪ್ರಶಾಂತ್ ಭಟ್, ಕೆಮ್ಮಣ್ಣು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳಿಗೆ ತಕ್ಷಣ ಈ ಬಗ್ಗೆ ವರದಿ ನೀಡುವಂತೆ ಆದೇಶ ನೀಡಿದರು.

ಗ್ರಾಮಸ್ಥರು ಗ್ರಾಮ ಪಂಚಾಯತ್ ವಿರುದ್ಧ ಈ ಬಗ್ಗೆ ಪ್ರತಿಭಟನೆ ನಡೆಸಿದರೂ ಕಸ ತೆರವಿಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಜಿಲ್ಲೆಯಾದ್ಯಂತ ಡೆಂಗ್ಯೂ ಸಹಿತ ವಿವಿಧ ಸಾಂಕ್ರಾಮಿಕ ರೋಗಗಳು ಹೆಚ್ಚುತ್ತಿರುವ ಸಂದರ್ಭದಲ್ಲಿ ಜನರ ಆರೋಗ್ಯದ ದೃಷ್ಟಿಯಿಂದ ಆರೋಗ್ಯ ಇಲಾಖೆಯ ವರದಿಗೆ ತಕ್ಷಣ ಸ್ಪಂದಿಸಿ ಹೂತಿರುವ ಕಸವನ್ನು ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳುವಂತೆ ಪಂಚಾಯತ್ ಅಭಿವೃದ್ಧಿ ಅಧಿಕಾರಿಗೆ ಹೇಳಿದರು.

ಈ ಸಂದರ್ಭದಲ್ಲಿ ಉಡುಪಿ ತಾಲೂಕು ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ವಿಜಯ, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ದಯಾನಂದ, ಗ್ರಾಮ ಪಂಚಾಯತ್ ಉಪಾಧ್ಯಕ್ಷ ಶ್ರೀ ಅರುಣ್, ಪಂಚಾಯತ್ ಸದಸ್ಯ ವಿನೋದ್, ಸಾರ್ವಜನಿಕರು ಉಪಸ್ಥಿತರಿದ್ದರು.

Related posts

ಕರ್ನಾಟಕ ಕ್ರೀಡಾಕೂಟದಲ್ಲಿ ಸಮರಾಗೆ ಚಿನ್ನದ ಪದಕ

ಯಕ್ಷಗಾನ ಪ್ರದರ್ಶನಕ್ಕೆ ಅಡ್ಡಿ – ಬ್ರಿಟಿಷ್ ಆಡಳಿತವನ್ನೂ ಮೀರಿಸಿದ ಸಿದ್ಧರಾಮಯ್ಯ ಸರ್ಕಾರ : ಯಶ್‌ಪಾಲ್ ಸುವರ್ಣ

ಮಾರಿದ ಹಳೆಯ ಬಸ್ಸನ್ನು ಕದ್ದು ತಂದ ಆರೋಪ – ತಂದೆ ಮಗನ ವಿರುದ್ಧ ದೂರು ದಾಖಲು !