ಅಪಘಾತಗೊಂಡ ವಾಹನದಲ್ಲಿ ಅಕ್ರಮ ಜಾನುವಾರು ಸಾಗಾಟ ಪತ್ತೆ : ಪೊಲೀಸರಿಂದ ತನಿಖೆ

ಉಡುಪಿ : ಅಪಘಾತವಾದ ವಾಹನದಲ್ಲಿ ಎಮ್ಮೆಗಳು ಪತ್ತೆಯಾಗಿ, ಇದೊಂದು ಅಕ್ರಮ ಜಾನುವಾರು ಸಾಗಾಟದ ಪ್ರಕರಣ ಎಂದು ಸಾರ್ವಜನಿಕರು ಸಂಶಯ ವ್ಯಕ್ತಪಡಿಸಿದ್ದಾರೆ.

ಉಡುಪಿ ಜಿಲ್ಲೆಯ ಅಂಬಾಗಿಲು ಪರಿಸರದಲ್ಲಿ ನಡುರಾತ್ರಿ 2.55 ವೇಳೆಗೆ ಪಿಕ್‌ಅಪ್ ವಾಹನ ಅಂಬಾಗಿಲು ಸರ್ಕಲ್‌ನಲ್ಲಿ ನಿಯಂತ್ರಣ ತಪ್ಪಿ, ಪಲ್ಟಿ ಹೊಡೆದಿತ್ತು. ತರಕಾರಿ ಸಾಗಾಟದ ವಾಹನ ಎಂದು ತಿಳಿದ ಸ್ಥಳೀಯರೆಲ್ಲರೂ ಬಂದು ಸಹಾಯ ಮಾಡಿದರು. ಸಲ್ಪ ಸಮಯದ ನಂತರ ವಾಹನದ ಹಿಂಭಾಗದಲ್ಲಿ ಶಬ್ದವಾಗುವುದನ್ನು ಗಮನಿಸಿದ ಸಾರ್ವಜನಿಕರು, ಅಡ್ಡಲಾಗಿ ಇಟ್ಟಿದ್ದ ಟೊಮೇಟೊ ಬಾಕ್ಸ್‌ಗಳನ್ನು ಸರಿಸಿ ನೋಡಿದರು. ಈ ವೇಳೆ ಪಿಕ್ ಅಪ್ ವಾಹನದ ಇಕ್ಕಟ್ಟಿನ ಸ್ಥಳದಲ್ಲಿ ಐದು ದೈತ್ಯಾಕಾರದ ಎಮ್ಮೆಗಳು ಇದ್ದವು. ಕೈ ಬಾಯಿ ಕಟ್ಟಿ ಹಾಕಿ ಅಷ್ಟು ಚಿಕ್ಕ ವಾಹನದಲ್ಲಿ ಇವುಗಳನ್ನು ಎಲ್ಲಿಗೆ ಸಾಗಿಸಲಾಗುತ್ತಿತ್ತು ಎಂಬ ಬಗ್ಗೆ ಸಾರ್ವಜನಿಕರು ಸಂಶಯ ವ್ಯಕ್ತಪಡಿಸಿದ್ದಾರೆ. ಈ ಐದು ಎಮ್ಮೆಗಳ ಪೈಕಿ ಒಂದು ಸಾವನ್ನಪ್ಪಿದೆ. ಉಳಿದ ನಾಲ್ಕು ಎಮ್ಮೆಗಳಿಗೆ ಗಾಯಗಳಾಗಿದ್ದು ನೀಲಾವರ ಗೋಶಾಲೆಗೆ ರವಾನಿಸಲಾಗಿದೆ.

ಪ್ರಕರಣದ ಬಗ್ಗೆ ಸಾರ್ವಜನಿಕರು ಸಂಶಯ ವ್ಯಕ್ತಪಡಿಸಿದ್ದು ಬೆಳಗಾವಿಯಿಂದ ಬರುತ್ತಿದ್ದ ಈ ಪಿಕಪ್ ವಾಹನ ಮಂಗಳೂರಿಗೆ ತೆರಳುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭ್ಯವಾಗಿದೆ. ಜಾನುವಾರು ಸಾಗಾಟದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Related posts

ಗುಜರಿ ಅಂಗಡಿ ಗೋಡೌನ್‌ನಲ್ಲಿ ಭಾರೀ ಬೆಂಕಿ ಅವಘಡ – ಅಗ್ನಿಶಾಮಕ ದಳದಿಂದ ಕಾರ್ಯಾಚರಣೆ

ಜಾತಿ ನಿಂದನೆ ಹಲ್ಲೆ ಪ್ರಕರಣ : ಆರೋಪಿಗೆ ಜೈಲು ಶಿಕ್ಷೆ

ಫುಟ್ಬಾಲ್‌ ಪಂದ್ಯಾಟದ ವೇಳೆ ಗ್ಯಾಲರಿ ಕುಸಿತ..!