ಅಕ್ರಮ ಬಾಂಗ್ಲಾ ವಲಸಿಗರು – ಪೊಲೀಸ್ ಇಲಾಖೆ, ಕರಾವಳಿ ಕಾವಲುಪಡೆಯಿಂದ ತೀವ್ರ ತಪಾಸಣೆ

ಉಡುಪಿ : ಮಲ್ಪೆಯಲ್ಲಿ 7 ಮಂದಿ ಬಾಂಗ್ಲಾ ಅಕ್ರಮ ವಲಸಿಗರನ್ನು ಪೊಲೀಸರು ಬಂಧಿಸಿದ ಬಳಿಕ ಜಿಲ್ಲಾ ಪೊಲೀಸ್‌ ಇಲಾಖೆ, ಕರಾವಳಿ ಕಾವಲು ಪಡೆ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದೆ.

ಜಿಲ್ಲೆಯ ವಿವಿಧ ಬಂದರು, ಕಟ್ಟಡ ನಿರ್ಮಾಣ ವಲಯ, ಫಿಶ್‌ಮೀಲ್‌ ಸಹಿತ ಹೊರ ರಾಜ್ಯದ ಕಾರ್ಮಿಕರು ಹೆಚ್ಚೆಚ್ಚು ಕಾರ್ಯನಿರ್ವಹಿಸುವ ಕಡೆಗಳಲ್ಲಿ ತೀವ್ರ ವಿಚಾರಣೆ ಹಾಗೂ ಮಾಹಿತಿ ಸಂಗ್ರಹ ಆರಂಭಿಸಿದ್ದಾರೆ.

ತಮ್ಮ ವ್ಯಾಪ್ತಿಯ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಹೊರ ರಾಜ್ಯದ ಕಾರ್ಮಿಕರ ವಿವರಗಳನ್ನು ತತ್‌ಕ್ಷಣವೇ ಸಲ್ಲಿಸಬೇಕು. ಎಷ್ಟು ಸಮಯದಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಯಾವ ರಾಜ್ಯದಿಂದ ಬಂದಿದ್ದಾರೆ. ಕರೆದುಕೊಂಡು ಬಂದಿರುವ ಏಜೆನ್ಸಿ ಹೀಗೆ ಹಲವು ಮಾಹಿತಿ ಸೇರಿದ ಗೂಗಲ್‌ ಫಾರ್ಮೆಟ್‌ ಭರ್ತಿ ಮಾಡಿ ಕಳುಹಿಸುವಂತೆ ಎಲ್ಲ ಸಂಸ್ಥೆಗಳಿಗೆ ಕರಾವಳಿ ಕಾವಲು ಪಡೆಯಿಂದ ಸಂದೇಶ ರವಾನಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಹೊರ ರಾಜ್ಯದ ಕಾರ್ಮಿಕರು ಎಷ್ಟಿದ್ದಾರೆ ಎಂಬ ನಿಖರ ಮಾಹಿತಿ ಕಾರ್ಮಿಕ ಇಲಾಖೆಯಲ್ಲಿ ಇಲ್ಲ. ಕಾರ್ಮಿಕ ಇಲಾಖೆ ಕೂಡ ಈ ಬಗ್ಗೆ ಹೆಚ್ಚು ಗಂಭೀರವಾದಂತಿಲ್ಲ. ಕರ್ನಾಟಕ ಹಾಗೂ ಜಿಲ್ಲೆಯ ಸಂಘಟಿತ, ಅಸಂಘಟಿತ ಕಾರ್ಮಿಕರ ಮಾತ್ರ ಮಾಹಿತಿ ಇಲಾಖೆ ಹೊಂದಿದೆ. ಆದರೆ ಹೊರ ರಾಜ್ಯದ ಎಷ್ಟು ಕಾರ್ಮಿಕರು ಜಿಲ್ಲೆಗೆ ಬರುತ್ತಿದ್ದಾರೆ. ಅದರಲ್ಲಿ ಎಷ್ಟು ಮಂದಿ ಮರಳಿದ್ದಾರೆ, ಬಂದವರು ಎಲ್ಲಿದ್ದಾರೆ ಎಂಬ ಬಗ್ಗೆ ಪೂರ್ಣ ಮಾಹಿತಿ ಇಲಾಖೆಯಲ್ಲಿಲ್ಲ. ಸೇವಾ ಸಿಂಧು ಮೂಲಕ ಅಪ್‌ಲೋಡ್‌ ಮಾಡಲು ಸೂಚಿಸಿ ಸುಮ್ಮನಾಗಿದ್ದಾರೆ. ಆದರೆ ಅಪ್‌ಲೋಡ್‌ ಮಾಡಿದವರ ಸಂಖ್ಯೆ ತೀರಾ ಕಡಿಮೆಯಿದೆ.

ಈತನಕ ಜಿಲ್ಲೆಯಲ್ಲಿ 10 ಮಂದಿ ವಲಸಿಗರ ಪತ್ತೆಯಾಗಿದ್ದು ಪೊಲೀಸರು ತೀವ್ರ ತನಿಖೆ ಕೈಗೊಂಡಿದ್ದಾರೆ. ಜಿಲ್ಲೆಯಾದ್ಯಂತ ಬಾಂಗ್ಲಾ ಅಕ್ರಮ ವಲಸಿಗರು ಹರಡಿಕೊಂಡರುವ ಸಾಧ್ಯತೆ ಬಗ್ಗೆಯೂ ತನಿಖೆ ಚುರುಕುಗೊಂಡಿದೆ.

Related posts

ಉಡುಪಿ ಜಿಲ್ಲೆಯಲ್ಲಿ ಮಂಗನಕಾಯಿಲೆ ಪ್ರಕರಣ ಬಾರದಂತೆ ಮುನ್ನೆಚ್ಚರಿಕೆ ವಹಿಸಿ : ಆರೋಗ್ಯ ಇಲಾಖೆಗೆ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಸೂಚನೆ

ನಿಷೇಧಾಜ್ಞೆ, ಸಂತೆ, ಜಾತ್ರೆ ನಿಷೇಧ ಆದೇಶ ಹಿಂದೆಗೆತ : ಉಡುಪಿ ಜಿಲ್ಲಾಧಿಕಾರಿ

ಶಾಲಾ ವಾಹನಕ್ಕೆ ಬೈಕ್ ಢಿಕ್ಕಿಯಾಗಿ ಸವಾರ ಮೃತ್ಯು