ಉಡುಪಿ ಜಿಲ್ಲೆಯ ಜನರೊಂದಿಗೆ ಸದಾ ಇರುವೆ, ಟೋಲ್‌ಗೇಟ್ ರದ್ದತಿ ಕುರಿತಂತೆ ಕ್ರಮ : ಲಕ್ಷ್ಮೀ ಹೆಬ್ಬಾಳಕರ್ ಭರವಸೆ

ಪಡುಬಿದ್ರಿ : ಪಡುಬಿದ್ರಿ-ಬೆಳ್ಳಣ್ಣು-ಕಾರ್ಕಳ ರಾಜ್ಯ ಹೆದ್ದಾರಿಯಲ್ಲಿ ನಿರ್ಮಿಸಲು ಮುಂದಾಗಿರುವ ಟೋಲ್‌ಗೇಟ್ ವಿರುದ್ಧ ಸ್ಥಳೀಯರು ಪ್ರತಿಭಟನೆ ನಡೆಸುತ್ತಿರುವ ಸ್ಥಳಕ್ಕೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಭೇಟಿ ನೀಡಿ ಮನವಿ ಸ್ವೀಕರಿಸಿದರು.

ಈ ವೇಳೆ ಮಾತನಾಡಿದ ಸಚಿವರು, ಸ್ಥಳೀಯರ ವಿರೋಧದ ನಡುವೆ ಟೋಲ್‌ಗೇಟ್ ನಿರ್ಮಿಸುವುದು‌ ಸರಿಯಲ್ಲ. ದಿನಂಪ್ರತಿ ಓಡಾಡುವ ರಸ್ತೆಗೆ ಎರಡೆರಡು ಬಾರಿ ಟೋಲ್ ಶುಲ್ಕ ಕಟ್ಟಲು ಸಾಧ್ಯವಿಲ್ಲ. ಈ ಕುರಿತು ಸಂಬಂಧಪಟ್ಟ ಸಚಿವರು ಹಾಗೂ ಅಧಿಕಾರಿಗಳೊಂದಿಗೆ ಮಾತನಾಡುವುದಾಗಿ ಭರವಸೆ ನೀಡಿದರು.

ನಾನು ಕೊಟ್ಟ ಮಾತನ್ನು ಎಂದೂ ತಪ್ಪಿದವಳಲ್ಲ. ಕಳೆದ ತಿಂಗಳು ಬ್ರಹ್ಮಾವರದ ಕೃಷಿ ಡಿಪ್ಲೊಮಾ ಕಾಲೇಜಿನ ರದ್ದತಿ ಆದೇಶವನ್ನು ವಾಪಸ್ ಪಡೆಯಲಾಗಿದೆ. ಕೊಟ್ಟ ಮಾತಿನಂತೆ ನಡೆದ ಫಲವಾಗಿ ಇಂದು ನೌಕರರು ನೆಮ್ಮದಿಯಿಂದ ಇದ್ದಾರೆ. ಈಗ ಟೋಲ್‌ಗೇಟ್ ವಿಚಾರದಲ್ಲಿ ಜನರ ಪರ ಇರುವೆ ಎಂದು ಸಚಿವರು ತಿಳಿಸಿದರು.

ಈ ವೇಳೆ ಕಾಪು ಶಾಸಕ ಸುರೇಶ್ ಶೆಟ್ಟಿ ಗುರ್ಮೆ, ಜಿಲ್ಲಾಧಿಕಾರಿ ಡಾ.ಕೆ. ವಿದ್ಯಾಕುಮಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಕೆ. ಅರುಣ್, ಜಿಲ್ಲಾ ಪಂಚಾಯತ್ ಸಿಇಒ ಪ್ರತೀಕ್ ಬಾಯಲ್, ಮುಖಂಡರಾದ ಪ್ರಸಾದ್ ಕಾಂಚನ್ ಹಾಜರಿದ್ದರು.

ಜನರ ಅಹವಾಲು ಸ್ವೀಕರಿಸಿದ ಸಚಿವೆ : ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡುವುದಕ್ಕೂ ಮುನ್ನ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು, ಉಡುಪಿ ನಗರದಲ್ಲಿರುವ ಗೃಹ ಕಚೇರಿಯಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು. ಕಿಕ್ಕಿರಿದು ಸೇರಿದ ಜನರಿಂದ ಹಾಗೂ ಕಾಂಗ್ರೆಸ್ ಕಾರ್ಯಕರ್ತರಿಂದ ಸಮಾಧಾನಚಿತ್ತದಿಂದ ಅಹವಾಲು ಸ್ವೀಕರಿಸಿ, ಅವರ ಸಮಸ್ಯೆಗಳಿಗೆ ಕಿವಿಯಾದರು.

ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾಕುಮಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಕೆ. ಅರುಣ್ ಅವರಿಂದ ಜಿಲ್ಲೆಯ ಪ್ರಚಲಿತ ವಿದ್ಯಮಾನಗಳ ಬಗ್ಗೆ ಮಾಹಿತಿ ಪಡೆದರು. ಕಾಂಗ್ರೆಸ್ ಮುಖಂಡರಾದ ಉದಯ್ ಕುಮಾರ್ ಶೆಟ್ಟಿ, ರಮೇಶ್ ಕಾಂಚನ್ ಉಪಸ್ಥಿತರಿದ್ದರು.

Related posts

ಕರ್ನಾಟಕ ಕ್ರೀಡಾಕೂಟದಲ್ಲಿ ಸಮರಾಗೆ ಚಿನ್ನದ ಪದಕ

ಯಕ್ಷಗಾನ ಪ್ರದರ್ಶನಕ್ಕೆ ಅಡ್ಡಿ – ಬ್ರಿಟಿಷ್ ಆಡಳಿತವನ್ನೂ ಮೀರಿಸಿದ ಸಿದ್ಧರಾಮಯ್ಯ ಸರ್ಕಾರ : ಯಶ್‌ಪಾಲ್ ಸುವರ್ಣ

ಮಾರಿದ ಹಳೆಯ ಬಸ್ಸನ್ನು ಕದ್ದು ತಂದ ಆರೋಪ – ತಂದೆ ಮಗನ ವಿರುದ್ಧ ದೂರು ದಾಖಲು !