ಈ ನಕ್ಸಲ್ ಶರಣಾಗತಿ ಡ್ರಾಮಾ ಇಷ್ಟು ಕ್ಷಿಪ್ರವಾಗಿ ಅಂತ್ಯ ಕಂಡಿದ್ದು ಹೇಗೆ? ಸುನಿಲ್ ಕುಮಾರ್ ಪ್ರಶ್ನೆ

ಕಾರ್ಕಳ : ನಕ್ಸಲ್ ಶರಣಾಗತಿ ವಿಚಾರದಲ್ಲಿ ಪ್ರಶ್ನೆಗಳಿವೆ. ಪ್ರಶ್ನಿಸುತ್ತೇವೆ. ಉತ್ತರಿಸಬೇಕಾದವರಿಗೆ ಉತ್ತರದಾಯಿತ್ವ ಇದೆ ಎಂದು ಭಾವಿಸಿದ್ದೇನೆ.

ಮೊದಲನೆಯದಾಗಿ ಈ ನಕ್ಸಲ್ ಶರಣಾಗತಿ ಡ್ರಾಮಾ ಇಷ್ಟು ಕ್ಷಿಪ್ರವಾಗಿ ಅಂತ್ಯ ಕಂಡಿದ್ದು ಹೇಗೆ? ಇದ್ದಕ್ಕಿದ್ದಂತೆ ಸಿದ್ದರಾಮಯ್ಯ ಸ್ವಯಂ ಪ್ರೇರಿತವಾಗಿ ಕೊಟ್ಟ ಕರೆಗೆ ನಕ್ಸಲರು ಇಷ್ಟು ವೇಗವಾಗಿ ಸ್ಪಂದಿಸುತ್ತಾರೆಂದರೆ ಇದೊಂದು ಪೂರ್ವ ಯೋಜಿತ ಸ್ಟೇಜ್ ಶೋ ಅಲ್ಲವೇ? ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಪ್ರಶ್ನಿಸಿದ್ದಾರೆ. ನಕ್ಸಲರೇನೋ ಶರಣಾದರು, ಆದರೆ ಅವರ ಬಳಿ ಇದ್ದ ಬಂದೂಕುಗಳು ಏನಾದವು? ಶರಣಾಗತಿ ಪ್ರಕ್ರಿಯೆ ಎಂದರೆ ಶಸ್ತ್ರಾಸ್ತ್ರಗಳನ್ನು ಪೊಲೀಸರಿಗೆ ಒಪ್ಪಿಸಬೇಕಲ್ಲವೇ? ಇಲ್ಲೇಕೆ ಈ ನಿಯಮ ಪಾಲಿಸಿಲ್ಲ?

ಹಾಗಾದರೆ ಈ ಶಸ್ತ್ರಾಸ್ತ್ರಗಳನ್ನು ಯಾರಿಗೆ ನೀಡಲಾಗಿದೆ? ಬೇಕಾಬಿಟ್ಟಿ ಕಾಡಿನಲ್ಲಿ ಎಸೆದು ಬರಲು ಸಾಧ್ಯವಿಲ್ಲ. ಹಾಗಾದರೆ ಯಾವ ನಗರ ನಕ್ಸಲರ ಮನೆಯಲ್ಲಿ ಈ ಬಂದೂಕನ್ನು ಗುಬ್ಬಿಗೂಡು ಕಟ್ಟುವುದಕ್ಕೆ ಇಟ್ಟಿದ್ದೀರಿ?

ನಕ್ಸಲ್ ವಿಕ್ರಮ್ ಗೌಡ ಎನ್‌ಕೌಂಟರ್ ಬಗ್ಗೆ ಈಗ ಅನುಮಾನ ಹೆಚ್ಚಿದೆ. ಆತ ಶರಣಾಗತಿ ಪ್ಯಾಕೇಜ್ ಬಗೆ ವಿರೋಧ ವ್ಯಕ್ತಪಡಿಸಿದ್ದ. ಹೀಗಾಗಿ ಶರಣಾಗತಿ ಪ್ರಹಸನದ ರೂವಾರಿಗಳೇ ವಿಕ್ರಮ್ ಗೌಡನ ಇರುವಿಕೆ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿರಲೂಬಹುದಲ್ಲವೇ? ಹೀಗಾಗಿ ಈ ಬಗ್ಗೆ ತನಿಖೆ ಅನಿವಾರ್ಯ. ಕರ್ನಾಟಕ ನಕ್ಸಲ್ ಚಳುವಳಿಯಿಂದ ಮುಕ್ತವಾಗಿದೆ ಎಂದು ಸರ್ಕಾರ ಯಾವ ಮಾನದಂಡದ ಆಧಾರದಿಂದ ಹೇಳುತ್ತಿದೆ? ಈ ಬಗ್ಗೆ ಎಎನ್‌ಎಫ್ ಕಮಾಂಡರ್ ಅಥವಾ ಪೊಲೀಸ್ ಮಹಾನಿರ್ದೇಶಕರು ಅಧಿಕೃತ ಘೋಷಣೆ ಮಾಡಬಲ್ಲರೇ‌?

ಅದೇ ರೀತಿ ಅರಣ್ಯದಂಚಿನ ನಿವಾಸಿಗಳ ಪುನರ್ವಸತಿಗೆ ರಾಜ್ಯ ಸರ್ಕಾರ ಇದುವರೆಗೆ ಎಷ್ಟು ಹಣ ಖರ್ಚು ಮಾಡಿದೆ ಎಂಬುದನ್ನೂ ಸ್ಪಷ್ಟಪಡಿಸಲಿ ಎಂದು ಸುನಿಲ್‌ ಕುಮಾರ್ ಸವಾಲು ಹಾಕಿದ್ದಾರೆ.

Related posts

ತಾಯಿ ಹಾಗೂ ಇಬ್ಬರು ಮಕ್ಕಳು ನಾಪತ್ತೆ

ಡೀಸೆಲ್‌ ಲೋಡ್ ಟ್ಯಾಂಕರ್ ಪಲ್ಟಿಯಾಗಿ ಡೀಸೆಲ್‌ ಸೋರಿಕೆ; ರಸ್ತೆ ಸಂಚಾರಕ್ಕೆ ಅಡಚಣೆ

ಬಾವಿಗೆ ಬಿದ್ದು ಕೃಷಿಕ ಮೃತ್ಯು