ನೆರೆ ಸಂತ್ರಸ್ತರು ಮತ್ತು ರೈತರು ಹೋರಾಟಕ್ಕೆ ಸಜ್ಜು; “ಪ್ರತೀ ಮಳೆಗಾಲ ಸೃಷ್ಟಿಯಾಗುವ ನೆರೆಯಿಂದ ನಮ್ಮನ್ನು ರಕ್ಷಿಸಿ”

ಬ್ರಹ್ಮಾವರ : ಇತ್ತೀಚೆಗೆ ಸುರಿದ ಭಾರಿ ಮಳೆಯಿಂದ ಸೃಷ್ಟಿಯಾದ ಕೃತಕ ನೆರೆ ಸಂತ್ರಸ್ತರು ಮತ್ತು ರೈತರು ಹೋರಾಟದ ಹಾದಿ ಹಿಡಿದಿದ್ದಾರೆ. ತಮ್ಮ ಗ್ರಾಮಗಳಲ್ಲಿ ವರ್ಷಂಪ್ರತಿ ನೆರೆ ಸೃಷ್ಟಿಯಾಗುತ್ತಿದ್ದರೂ ಈತನಕ ಜನಪ್ರತಿನಿಧಿಗಳು ತಮ್ಮ ಸಮಸ್ಯೆಗಳನ್ನು ಬಗೆಹರಿಸಿಲ್ಲ ಎಂಬುದು ಇವರ ಮುಖ್ಯ ದೂರು. ಈ ಸಂಬಂಧ ಆಗಸ್ಟ್ ಏಳರಂದು ಕೋಟದ ರೈತ ಧ್ವನಿ ರೈತರ ಸ್ವಾಭಿಮಾನಿ ಸಂಘಟನೆ ಇಲ್ಲಿನ ಹಿರೇಮಹಾಲಿಂಗೇಶ್ವರ ದೇವಾಲಯ ಜಾತ್ರಾ ಮೈದಾನದಲ್ಲಿ ಬೃಹತ್ ಉಪವಾಸ ಸತ್ಯಾಗ್ರಹ ಹಮ್ಮಿಕೊಂಡಿದೆ.

ಮುಖ್ಯವಾಗಿ ತೆಕ್ಕಟ್ಟೆ ಗ್ರಾಮದ ಮಲ್ಯಾಡಿಯಿಂದ ಹೊಸಾಳ ಗ್ರಾಮದ ನಾಗರಮಠ ಚೆಕ್ ಡ್ಯಾಮ್ ವರೆಗೆ, ಸೂಲಡ್ಡು-ಮಡಿವಾಳಸಾಲು ಹೊಳೆಯ ನದಿಪಾತ್ರ ಗುರುತಿಸಿ ಅದರ ಹೂಳು ತೆಗೆಯಬೇಕು.
ಮಣೂರು ಗ್ರಾಮದ ಕೂರು, ಗಿಳಿಯಾರು ಗ್ರಾಮದ ಸೂಲಡ್ಡು, ಚಿತ್ರಪಾಡಿ ಗ್ರಾಮದ ಕೋಟ-ಸ್ವಾಬ್ರಕಟ್ಟೆ ರಸ್ತೆ ಮತ್ತು ಬೈಕೂರುಬೈಲು ಎಂಬಲ್ಲಿ ಈಗಿರುವ ಅತೀ ಕಡಿಮೆ ವ್ಯಾಸದ ತೂಬು ಸೇತುವೆಗಳನ್ನು ತೆಗೆದು, ಪಿಲ್ಲ‌ರ್ ಸೇತುವೆಗಳನ್ನು ನಿರ್ಮಾಣ ಮಾಡಬೇಕು.
ಕಾರ್ಕಡ ಗ್ರಾಮದ ಕುದ್ರುಮನೆ ಡ್ಯಾಮ್ ಮತ್ತು ಹೊಸಾಳ ಗ್ರಾಮದ ನಾಗರಮಠ ಚೆಕ್ ಡ್ಯಾಮ್ ಗಳಿಗೆ ಅಳವಡಿಸಿರುವ ಹಲಗೆಗಳನ್ನು ಸಂಪೂರ್ಣವಾಗಿ ಮಳೆಗಾಲದಲ್ಲಿ ತೆರವು ಮಾಡಬೇಕು.
ಈ ಭಾಗದಲ್ಲಿ ಉಂಟಾಗುತ್ತಿರುವ ಕೃತಕ ನೆರೆ ಪರಿಹಾರಕ್ಕೆ ಪರಿಣತ ತಂತ್ರಜ್ಞರ ತಂಡದಿಂದ ಸರ್ವೆ ನಡೆಸಿ, ಕಾಲಮಿತಿಯಲ್ಲಿ ಯೋಜನೆಯನ್ನು ಅನುಷ್ಠಾನಗೊಳಿಸಬೇಕು. ಕೃತಕ ನೆರೆಯಿಂದ ಕೃಷಿ ನಷ್ಟ ಹೊಂದಿದ ರೈತರಿಗೆ ವಿಶೇಷ ಪರಿಹಾರ ಪ್ಯಾಕೇಜ್ ಘೋಷಣೆ ಮಾಡಬೇಕು ಎಂಬುದು ಇವರ ಹಕ್ಕೊತ್ತಾಯಗಳು. ಈ ಸಮಸ್ಯೆಗೆ ಪರಿಹಾರ ಕಲ್ಪಿಸದಿದ್ದಲ್ಲಿ ಮುಂದ ಮುಂದಿನ ದಿನಗಳಲ್ಲಿ ಹೋರಾಟವನ್ನು ಮತ್ತಷ್ಟು ಬಲಪಡಿಸಲಾಗುವುದು ಎಂದು ಸ್ಥಳೀಯ ಮುಖಂಡರು ಎಚ್ಚರಿಕೆ ನೀಡಿದ್ದಾರೆ.

Related posts

ನೆಕ್ಲಾಜೆ ಶ್ರೀ ಕಾಳಿಕಾಂಬೆಗೆ ಸ್ವರ್ಣ ಪಾದುಕೆ ಸಮರ್ಪಣೆ

ಶಾಸ್ತ್ರೀಪಾರ್ಕ್‌ ಫ್ಲೈಓವರ್‌ ತಳಭಾಗಕ್ಕೆ ಪೊಲೀಸ್‌ ನಿಯೋಜನೆ

ಕಾರು ಕಳವು ಗೈದ ಆರೋಪಿ ಪೊಲೀಸ್ ವಶಕ್ಕೆ