ಬೆಂಗಳೂರು : ರಾಜ್ಯದಲ್ಲಿ ಮುಂಗಾರು ಮಳೆಯ ಅಬ್ಬರ ಜೋರಾಗಿದ್ದು ಕರಾವಳಿ ಜಿಲ್ಲೆಗಳಿಗೆ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ. ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ.
ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ನಾಳೆ ಭಾರೀ ಪ್ರಮಾಣದ ಮಳೆ ಬೀಳುವ ಸಾಧ್ಯತೆ ಇದೆ. ಕರಾವಳಿಯ ಜನರು ನಾಳೆ ಮನೆಯಿಂದ ಹೊರಬಂದಾಗ ಗರಿಷ್ಠ ಎಚ್ಚರಿಕೆ ವಹಿಸಲು ಸೂಚಿಸಲಾಗಿದೆ.
ನಾಳೆ ಮಾತ್ರವಲ್ಲದೆ ಶುಕ್ರವಾರಕ್ಕೂ ಮಳೆ ಮುಂದುವರೆಯಲಿದೆ. ಸುಮಾರು 30 ತಾಸಿನ ಭಾರೀ ಮಳೆಗೆ ತಯಾರಾಗಲು ಈ ಜಿಲ್ಲೆಗಳ ಜನರಿಗೆ ಸೂಚಿಸಲಾಗಿದೆ.
ನಾಳೆ ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಹೊರಡಿಸಲಾಗಿದ್ದು ಎಚ್ಚರಿಕೆ ವಹಿಸಲು ಸೂಚಿಸಲಾಗಿದೆ. ಮೈಸೂರು, ಬೆಳಗಾವಿ, ಧಾರವಾಡ, ಹಾವೇರಿ ಮತ್ತು ಹಾಸನ ಜಿಲ್ಲೆಗಳಿಗೆ ಎಲ್ಲೋ ಅಲೆರ್ಟ್ ಹೊರಡಿಸಲಾಗಿದೆ.
ದಕ್ಷಿಣ ಒಳನಾಡಿನಲ್ಲೂ ಮುಂಗಾರು ಮಳೆಯ ಪ್ರಮಾಣ ಹೆಚ್ಚಿದ್ದು, ಕೊಡುಗು ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಮಳೆ ಭಾರೀ ಅವಾಂತರ ಸೃಷ್ಟಿಸಿದೆ. ಕುದುರೆಮುಖ ಸಮೀಪ ರಾಜ್ಯ ಹೆದ್ದಾರಿಗೆ ಬಿದ್ದ ಮರ ಕಾರಣ ಕೆಲಕಾಲ ಸಂಚಾರ ವ್ಯವಸ್ಥೆ ಅಸ್ತವ್ಯಸ್ಥಗೊಂಡಿತ್ತು. ಕಳಸ – ಮಂಗಳೂರು ರಸ್ತೆಯಲ್ಲೂ ಭಾರೀ ಮಳೆಯಿಂದಾಗಿ ಸಂಚಾರ ವ್ಯವಸ್ಥೆ ಸ್ಥಗಿತಗೊಂಡಿತ್ತು. ಕೊಡಗಿನಲ್ಲಿ ಭಾರಿ ಮಳೆಯಿಂದಾಗಿ ಕಾವೇರಿ ನದಿ ಮೈದುಂಬಿ ಹರಿಯುತ್ತಿದೆ. ಮಡಿಕೇರಿ ತಾಲ್ಲೂಕಿನ ಮೂರ್ನಾಡು ಸಮೀಪದ ಬಲಮುರಿ ಪುರಾತನ ಸೇತುವೆ ಜಲಾವೃತಗೊಂಡಿದೆ.